ಯುವ ಉತ್ಸಾಹಿ ರೈತ ನಾಸಿರ್ ಹುಸೇನ್, ವ್ಯಾಪಾರ, ವಹಿವಾಟು ನಡೆಸದೆ ಕೃಷಿಯನ್ನೇ ನೆಚ್ಚಿಕೊಂಡು ದುಡಿಮೆ ಮಾಡಿದ್ದರ ಫಲವಾಗಿ ಕೆಂಪು ಮಣ್ಣಿನ ಭೂಮಿಯಲ್ಲಿ 7 ಸಾವಿರ ಅಡಿಕೆ ಮರ, 200 ತೆಂಗಿನಮರ, 100 ಸಿಲ್ವರ್ ಹಾಗೂ 20 ತೇಗದ ಮರಗಳು ಮುಗಿಲೆತ್ತರಕ್ಕೆ ಬೆಳೆದು ನಿಂತಿವೆ. 2000 ಕಾಫಿ ಗಿಡಗಳು ಫಲ ಬಿಡುವ ಹಂತದಲ್ಲಿವೆ. ಹತ್ತಾರು ಮೆಣಸು ಬಳ್ಳಿಗಳು ಕೂಡ ಅಡಿಕೆ ಮರಗಳ ಎತ್ತರಕ್ಕೆ ಬೆಳೆದು ಹಬ್ಬಿದ್ದರೆ, 2 ಎಕರೆಯಲ್ಲಿ ಬಾಳೆ ಬೆಳೆದು ನಿಂತಿವೆ. 6 ಮಾವು, 5 ಸೀಬೆ, 4 ಸಪೋಟ ಮತ್ತು 2 ನೇರಳೆಯನ್ನು ಬೆಳೆದಿದ್ದಾರೆ. ಇದಲ್ಲದೆ ಗುತ್ತಿಗೆ ಮಾಡಿಕೊಂಡಿರುವ 5 ಎಕರೆ ನಾಲೆ ಬಯಲಿನ ಭೂಮಿಯಲ್ಲಿ ವರ್ಷಕ್ಕೆ 2 ಫಸಲು ಭತ್ತವನ್ನು ಬೆಳೆಯುತ್ತಿದ್ದಾರೆ.