ಅನಿರ್ದಿಷ್ಟಾವಧಿ ಧರಣಿ ಕೈಬಿಟ್ಟ ರೈತರು

 ನಂಜನಗೂಡು ತಾಲೂಕು ಮುದ್ದಹಳ್ಳಿ ಗ್ರಾಮದಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ನಡೆಯುತ್ತಿದ್ದ ಅನಿರ್ದಿಷ್ಟ ಧರಣಿ ಸ್ಥಳಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು.
ನಂಜನಗೂಡು ತಾಲೂಕು ಮುದ್ದಹಳ್ಳಿ ಗ್ರಾಮದಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ನಡೆಯುತ್ತಿದ್ದ ಅನಿರ್ದಿಷ್ಟ ಧರಣಿ ಸ್ಥಳಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು.
Published on
ನಂಜನಗೂಡು: ನಾನು ಕೂಡ ರೈತ ಕುಟುಂಬದಿಂದ ಬಂದವನಾಗಿದ್ದೇನೆ. ನಮಗೂ ಜಮೀನು ಇದ್ದು ಕೃಷಿ ಮಾಡುತ್ತಿದ್ದೇನೆ. ರೈತರ ಕಷ್ಟ-ನಷ್ಟಗಳು ನನಗೂ ಅರಿವಿದೆ. ನಿಮ್ಮ ಕೃಷಿ ಭೂಮಿಯನ್ನು ಉಳಿಸಿಕೊಡಲು ಬದ್ಧನಾಗಿದ್ದೇನೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಪ್ರತಿಭಟನಾನಿರತ ರೈತರಿಗೆ ಭರವಸೆ ನೀಡಿದರು.
ತಾಲೂಕಿನ ಮುದ್ದಹಳ್ಳಿ ಗ್ರಾಮದಲ್ಲಿ 14 ದಿನಗಳಿಂದ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಸಂಬಂಧ ರೈತರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದ ಅವರು, ನಮ್ಮ ತಂದೆಯವರು ಶಾಸಕರಾಗಿದ್ದ ಸಂದರ್ಭದಿಂದಲೂ ಮುದ್ದಹಳ್ಳಿ ಗ್ರಾಮದ ಸುತ್ತ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವಂತೆ ಮನವಿ ಮಾಡಿದ್ದನ್ನು ಕೇಳಿದ್ದೇನೆ. 2003ರಲ್ಲಿ ಪ್ರಥಮ ಬಾರಿಗೆ ಆದೇಶ ಹೊರಡಿಸಲಾಗಿತ್ತು. ನಂತರ 2023 ಹಾಗೂ 2026ರಲ್ಲಿ ಸುಮಾರು 16 ರೈತರ ಪಹಣಿಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಎಂದು ಬದಲಾಗಿದೆ. ಈಗಾಗಲೇ ಗ್ರಾಮದಲ್ಲಿ ಎರಡು ಗುಂಪುಗಳಿದ್ದು, ಒಂದು ಗುಂಪು ಜಮೀನು ಮಾರಲು ಸಿದ್ಧವಾಗಿದೆ. ಮತ್ತೊಂದು ಗುಂಪು ಜಮೀನು ಮಾರಾಟ ಮಾಡಲು ಸಿದ್ಧರಿಲ್ಲ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಒಂದು ತೀರ್ಮಾನಕ್ಕೆ ಬರಬೇಕಾಗಿದೆ ಎಂದು ಹೇಳಿದರು.
ಈಗಾಗಲೇ ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಈಗಾಗಲೇ 15 ರೈತರ ಪಹಣಿಗಳಲ್ಲಿ ಭೂ ಸ್ವಾಧೀನಗೊಂಡಿರುವ ಕುರಿತು ವಾಪಸ್ ಭೂ ಮಾಲೀಕರ ಹೆಸರಿಗೆ ಬದಲಾವಣೆ ಆಗುವಂತೆ ನೋಡಿಕೊಳ್ಳುತ್ತೇನೆ. ಉಳಿದ ರೈತರ ಪಹಣಿಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆಗದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಕ್ರಿಯೆಯನ್ನು ಕೈ ಬಿಡುವಂತೆ ಸೂಚಿಸುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟು ಪ್ರತಿಭಟನೆ ವಾಪಸ್ ಪಡೆದುಕೊಳ್ಳಿ ಎಂದು ರೈತರಲ್ಲಿ ಮನವಿ ಮಾಡಿದರು.
ಸ್ಥಳಕ್ಕೆ ಆಗಮಿಸಿದ ಶಾಸಕರಿಗೆ ಗ್ರಾಮದ ರೈತರು ಮನವಿ ಸಲ್ಲಿಸಿದರು. ನಮ್ಮ ಜಮೀನು ವಶಪಡಿಸಿಕೊಳ್ಳಲು ನಮ್ಮಿಂದ ಒಪ್ಪಿಗೆ ಪಡೆದಿಲ್ಲ. ಸರಿಯಾದ ದರ ನಿಗದಿಪಡಿಸಿಲ್ಲ. ತಾಲೂಕಿನಲ್ಲಿ ಈಗಾಗಲೇ ಸಾವಿರಕ್ಕೂ ಹೆಚ್ಚು ಎಕರೆ ರೈತರ ಜಮೀನುಗಳನ್ನು ಭೂ ಸ್ವಾಧೀನ ಪಡಿಸಿಕೊಂಡು ಆ ಜಾಗ ಖಾಲಿ ಬಿದ್ದಿದೆ. ಮೊದಲು ಆ ಜಾಗದಲ್ಲಿ ಕೈಗಾರಿಕೆಗಳನ್ನು ನಿರ್ಮಿಸಲಿ. ಭೂ ಸ್ವಾಧೀನಪಡಿಸಿಕೊಂಡ ವರ್ಷದೊಳಗೆ ಕೈಗಾರಿಕೆ ಸ್ಥಾಪನೆ ಆಗಬೇಕು. ಇಲ್ಲವಾದಲ್ಲಿ ಆ ಭೂಮಿ ಮಾಲೀಕರಿಗೆ ಸೇರುತ್ತದೆ. 2003ರಿಂದ ಪ್ರಾರಂಭಗೊಂಡ ಪ್ರಕ್ರಿಯೆ 19 ವರ್ಷಗಳ ನಂತರ ವಶಪಡಿಸಿಕೊಳ್ಳಲು ಮುಂದಾಗಿರುವುದು ಕಾನೂನು ಬಾಹಿರವಾಗಿದೆ ಎಂದರು. ತಕ್ಷಣವೇ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ರೈತರ ಕಷ್ಟಕ್ಕೆ ನೆರವಾಗಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಶಾಸಕರ ಭರವಸೆಯಂತೆ ರೈತರು ಧರಣಿ ಅಂತ್ಯಗೊಳಿಸಿದರು. ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಶಿರಮಳ್ಳಿ ಮಂಜುನಾಥ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಾರುತಿ, ಮುದ್ದಹಳ್ಳಿ ಗುರುಸ್ವಾಮಿ, ವಿಜಯಲಕ್ಷ್ಮೀ, ಮಲ್ಲಿಕಾರ್ಜುನ, ಮಂಡಳಿ ಸದಸ್ಯ ಹುಳಿಮಾವು ಕುಮಾರ, ಕಳಲೆ ಕಾರ್ತಿಕ್ ವೇಣುಗೋಪಾಲ್, ಶೈಲಜಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net