ರಾಗಿ ಖರೀದಿ ಕೇಂದ್ರಗಳಲ್ಲಿ ರೈತರ ಸುಲಿಗೆ:ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪ

ಸಾ.ರಾ.ಮಹೇಶ್
ಸಾ.ರಾ.ಮಹೇಶ್
Published on

ಪ್ರಮುಖ ಮುಖ್ಯಾಂಶಗಳು

  • ರಾಗಿ ಮಾರುವ ಪ್ರತಿಯೊಬ್ಬ ರೈತನಿಗೆ ಒಂದು ಕ್ವಿಂಟಾಲ್‌ಗೆ 200 ರಿಂದ 250 ರೂ. ನಷ್ಟವಾಗುತ್ತಿದೆ
  • ರೈತರಿಗೆ ಆಗಿರುವ ನಷ್ಟವನ್ನು ಭರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು
ಮೈಸೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿಯೂ ರಾಗಿ ಖರೀದಿ ಕೇಂದ್ರಗಳಲ್ಲಿ ರೈತರ ಸುಲಿಗೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಕಿಡಿಕಾರಿದರು.
ಕೆ.ಆರ್.ನಗರ, ಚುಂಚನಕಟ್ಟೆ, ಸಾಲಿಗ್ರಾಮದಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ. ರಾಗಿ ಖರೀದಿ ಮಾಡುವಾಗ ಕ್ವಿಂಟಾಲ್‌ಗಿಂತ 4 ಕೆಜಿ ಹೆಚ್ಚಾಗಿ ಪಡೆಯುತ್ತಿದ್ದು, ಇದಕ್ಕೆ ಹಣ ನೀಡುತ್ತಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮೂರು ಖರೀದಿ ಕೇಂದ್ರಗಳಲ್ಲಿ ಇದುವರೆಗೂ 60 ಸಾವಿರ ಕ್ವಿಂಟಾಲ್ ರಾಗಿ ಖರೀದಿಸಲಾಗಿದೆ. ರಾಗಿ ಮಾರುವ ಪ್ರತಿಯೊಬ್ಬ ರೈತನಿಗೆ ಒಂದು ಕ್ವಿಂಟಾಲ್‌ಗೆ 200 ರಿಂದ 250 ರೂ. ನಷ್ಟವಾಗುತ್ತಿದೆ. ಒಂದು ಕ್ವಿಂಟಾಲ್ ರಾಗಿಗೆ 32 ರೂ. ಸಾಗಣೆ ವೆಚ್ಚ, ಕೂಲಿ ಕಾರ್ಮಿಕರಿಗೆ 50 ಕೆ.ಜಿ. ಮೂಟೆ ಹೊರಲು 26 ರೂ. ನಿಗದಿಪಡಿಸಲಾಗಿದೆ. ಆದರೆ ಈಗ 26 ರೂ. ಮಾತ್ರ ನೀಡಲಾಗುತ್ತಿದ್ದು, ಸಾಗಣೆಯ 32 ರೂ. ಏನಾಗುತ್ತಿದೆ. ಸಿಎಂ ಹಲವಾರು ಬಾರಿ ಮೈಸೂರಿಗೆ ಬಂದು ಹೋಗುತ್ತಾರೆ. ಇವರಿಗೆ ರೈತರನ್ನು ಹಗಲು ದರೋಡೆ ಮಾಡುತ್ತಿರುವುದು ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಇದನ್ನು ಗಮನಿಸದೆ ಆಹಾರ ಇಲಾಖೆ ಜಂಟಿ ನಿರ್ದೇಶಕರು ಏನು ಮಾಡುತ್ತಿದ್ದಾರಾ? ಇದನ್ನು ಪ್ರಶ್ನಿಸಬೇಕಾದ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ. ರೈತರು ಜನಪ್ರತಿನಿಧಿಗಳನ್ನು ಯಾಕೆ ಆಯ್ಕೆ ಮಾಡುತ್ತಾರೆ ಎಂದು ಗುಡುಗಿದರು.
ನಾನು ಖರೀದಿ ಕೇಂದ್ರಕ್ಕೆ ಭೇಟಿ ನೀಡಿದಾಗ ರೈತರು ಅಳಲು ತೋಡಿಕೊಂಡಿದ್ದಾರೆ. ತಕ್ಷಣ ಈ ವಿಚಾರವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದ ನಂತರ, ಸಮಸ್ಯೆ ಬಗೆಹರಿಸಲು ಮುಂದಾಗಿದ್ದು, ಮತ್ತೆ ಈ ರೀತಿ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ಮುಂದೆ ಕ್ರಮಕೈಗೊಂಡರೆ, ಇದುವರೆಗೂ ರೈತರಿಗೆ ಆಗಿರುವ ನಷ್ಟಕ್ಕೆ ಯಾರು ಹೊಣೆ ಎಂದು ಕಿಡಿಕಾರಿದರು.
ಇದು ಮೈಸೂರು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಇಡೀ ರಾಜ್ಯದಾದ್ಯಂತ ಇದೇ ರೀತಿ ಆಗಿದ್ದು, ರೈತರಿಗೆ ಆಗಿರುವ ನಷ್ಟವನ್ನು ಭರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಸಾಗಣೆ ವೆಚ್ಚದಲ್ಲಿ ಆಗುತ್ತಿರುವ ಲಾಬಿ, ಅಕ್ರಮಕ್ಕೆ ಕಡಿವಾಣ ಹಾಕಬೇಕು. ರೈತರ ಸುಲಿಗೆ ಮಾಡುತ್ತಿರುವುದನ್ನು ತಪ್ಪಿಸಬೇಕು. ಮುಂಬರುವ ದಿನಗಳಲ್ಲಿ ಇದನ್ನು ಸರಿಪಡಿಸಬೇಕು. ಇಲ್ಲವಾದರೆ ಮುಖ್ಯಮಂತ್ರಿ ಮೈಸೂರಿಗೆ ಬಂದಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಮೇಯರ್ ಆರ್.ಲಿಂಗಪ್ಪ, ಮುಖಂಡರಾದ ಅಮಿತ್
ಸತ್ಯಕ್ಕೆ ಸಂದ ಜಯ
ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ನಡೆಸಿದ ಬಟ್ಟೆ ಬ್ಯಾಗ್ ಖರೀದಿಗೆ ಸಂಬಂಧಿಸಿದ ಪ್ರಕರಣವನ್ನು ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿರುವುದು ಸತ್ಯಕ್ಕೆ ಸಂದ ಜಯವಾಗಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಪ್ರತಿಕ್ರಿಯಿಸಿದರು.
ನ್ಯಾಯಾಲಯದ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಿದೆ. ತಪ್ಪು ಮಾಡಿದವರಿಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನ್ನುವುದಕ್ಕೆ ಇದು ಸಾಕ್ಷಿ. ಹಾಗಾಗಿ ನ್ಯಾಯಾಲಯದ ಈ ನಿರ್ಧಾರವನ್ನು ಸ್ವಾಗತಿಸಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಯನ್ನು ಕಲೆಹಾಕಿ ಶನಿವಾರ ಮಾಧ್ಯಮಗಳ ಮುಂದೆ ಪ್ರಸ್ತುತಪಡಿಸುವೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net