ಆಸ್ಪತ್ರೆಯಾಗಿ ಗುರುತಿಸಿರುವ ಜಾಗ ಹಸಿರು ವಲಯವಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸೂಕ್ತವಾದುದಲ್ಲ
ದಶಕಗಳ ಹಿಂದಿನಿಂದಲೂ ರೈತ ಕುಟುಂಬಗಳು ಆ ಜಾಗದಲ್ಲಿ ಸಾಗುವಳಿ ಮಾಡುತ್ತಿವೆ
ಮೈಸೂರು:ನಗರದ ಬಂಡೀಪಾಳ್ಯ ಬಳಿಯ ಗುಡುಮಾದನಹಳ್ಳಿ ಬಳಿ ರಾಜ್ಯ ಸರ್ಕಾರ ನಿಮ್ಹಾನ್ಸ್ ಘಟಕ ನಿರ್ಮಾಣ ಯೋಜನೆ ಕೂಡಲೇ ಕೈಬಿಡಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
ಈಗ ಆಸ್ಪತ್ರೆಯಾಗಿ ಗುರುತಿಸಿರುವ ಜಾಗ ಹಸಿರು ವಲಯವಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸೂಕ್ತವಾದುದಲ್ಲ. ಅಲ್ಲಿ ಈಗಾಗಲೇ ಎರಡು ಬೆಳೆ ಬೆಳೆಯಲಾಗುತ್ತಿದೆ. ಆದ್ದರಿಂದ ಆಸ್ಪತ್ರೆ ನಿರ್ಮಾಣ ಕೈ ಬಿಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಗುರುತಿಸುವ ಜಾಗ ಸರ್ಕಾರದ್ದು ಎಂದು ನಮೂದಾಗಿದ್ದರೂ ದಶಕಗಳ ಹಿಂದಿನಿಂದಲೂ ರೈತ ಕುಟುಂಬಗಳು ಸಾಗುವಳಿ ಮಾಡುತ್ತಿವೆ. ಇವನ್ನೆಲ್ಲ ನಿರ್ಲಕ್ಷಿಸಿ ಸರ್ಕಾರ, ರೈತರನ್ನು ಬೀದಿಪಾಲು ಮಾಡ ಹೊರಟಿರುವುದು ಸರಿಯಲ್ಲ ಎಂದರು.
ಕಾಮಗಾರಿ ನಡೆಯುವುದನ್ನು ವಿರೋಧಿಸಿದ ರೈತರಿಗೆ ಸಬ್‌ಇನ್‌ಸ್ಪೆಕ್ಟರ್ ಕೆನ್ನೆಗೆ ಹೊಡೆದಿದ್ದಾರೆ. ಅವರ ಈ ಉದ್ಧಟತನವನ್ನು ರೈತ ಸಂಘ ಖಂಡಿಸುತ್ತಿದ್ದು, ಅವರ ಎತ್ತಂಗಡಿ ಆಗುವವರೆಗೂ ಹೋರಾಟ ನಡೆಯಲಿದೆ. ಈ ಸಂಬಂಧ ಏ.9ರಂದು ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಡಳಿತದ ವಿರುದ್ಧ ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.
ಭಾರತ-ಅಮೆರಿಕ, ಭಾರತ ಮತ್ತು ಐರೋಪ್ಯ ಒಕ್ಕೂಟ ಜತೆಗಿನ ವಾಣಿಜ್ಯ ಒಪ್ಪಂದಗಳು ದೇಶದ ರೈತರಿಗೆ ಮಾರಕವಾಗಿವೆ. ಇದು ಸಾರ್ವಜನಿಕ ಆರೋಗ್ಯಕ್ಕೆ ಬೆದರಿಕೆಯೊಡ್ಡಲಿದ್ದು, ಇದರ ವಿರುದ್ಧ ರೈತ ಸಂಘಟನೆಗಳು ದೊಡ್ಡ ಹೋರಾಟ ನಡೆಸಲಿವೆ ಎಂದು ತಿಳಿಸಿದರು.
ಮುಖಂಡರಾದ ಹೊಸೂರು ಕುಮಾರ್, ನೇತ್ರಾವತಿ, ಪಿ.ಮರಂಕಯ್ಯ, ಉಮೇಶ್ ಇತರರು ಇದ್ದರು.