ದಸರಾ ಮಹೋತ್ಸವದಲ್ಲಿ ಕಂಬಳ ಕೈಬಿಡಲು ಪರಿಸರವಾದಿಗಳ ಆಗ್ರಹ

ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿ ‘ಪರಿಸರಕ್ಕಾಗಿ ನಾವು’ ಸಂಘಟನೆಯಿಂದ ಆರ್.ಐಶ್ವರ್ಯಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪರಶುರಾಮೇಗೌಡ, ಭಾನುಪ್ರಶಾಂತ್, ಶೈಲಜೇಶ್ ಇದ್ದರು.
ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿ ‘ಪರಿಸರಕ್ಕಾಗಿ ನಾವು’ ಸಂಘಟನೆಯಿಂದ ಆರ್.ಐಶ್ವರ್ಯಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪರಶುರಾಮೇಗೌಡ, ಭಾನುಪ್ರಶಾಂತ್, ಶೈಲಜೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಂಸ್ಕೃತಿಕ ವೈಶಿಷ್ಟ್ಯಗಳು ಮತ್ತು ಧಾರ್ಮಿಕ ಆಚರಣೆ ಹೊಂದಿರುವ ದಸರಾವನ್ನು ಸಂಪ್ರದಾಯಬದ್ಧವಾಗಿ ನಡೆಸಬೇಕು
  • ಹೊಸ, ಹೊಸ ಕಾರ್ಯಕ್ರಮ ಸೇರ್ಪಡೆಗೊಳಿಸುವ ಮೂಲಕ ದಸರಾದ ಪ್ರಾಮುಖ್ಯವೇ ಗೌಣವಾಗುತ್ತಿದೆ
  • ಗದ್ದಲ, ಆಡಂಬರದ ಅಬ್ಬರದಲ್ಲಿ ದಸರಾ ಹಬ್ಬದ ಅನನ್ಯ ಲಕ್ಷಣಗಳ ಆಚರಣೆಗಳು ಮಸುಕಾಗುತ್ತಿವೆ
ಮೈಸೂರು:ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿ ‘ಪರಿಸರಕ್ಕಾಗಿ ನಾವು’ ಸಂಘಟನೆಯಿಂದ ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಅವರ ಮೂಲಕ ಮನವಿ ಸಲ್ಲಿಸಿದ್ದ ಮುಖಂಡರು, ಐತಿಹಾಸಿಕ ಹಿನ್ನೆಲೆ, ಭವ್ಯ ಪರಂಪರೆ, ಸಾಂಸ್ಕೃತಿಕ ವೈಶಿಷ್ಟ್ಯಗಳು ಮತ್ತು ಧಾರ್ಮಿಕ ಆಚರಣೆ ಹೊಂದಿರುವ ದಸರಾವನ್ನು ಸಂಪ್ರದಾಯಬದ್ಧವಾಗಿ ನಡೆಸಬೇಕು. ಆದರೆ ಇತ್ತೀಚೆಗೆ ಯುವ ದಸರಾ ಸೇರಿದಂತೆ ಹೊಸ, ಹೊಸ ಕಾರ್ಯಕ್ರಮ ಸೇರ್ಪಡೆಗೊಳಿಸುವ ಮೂಲಕ ದಸರಾದ ಪ್ರಾಮುಖ್ಯವೇ ಗೌಣವಾಗುತ್ತಿದೆ. ಆದ್ದರಿಂದ ಕಂಬಳವನ್ನು ಮೈಸೂರು ದಸರಾಕ್ಕೆ ಜೋಡಣೆ ಮಾಡುವುದು ಬೇಡ ಎಂದು ಒತ್ತಾಯಿಸಿದರು.
ದಸರಾ ಸಮಯದಲ್ಲಿ ನಗರದಲ್ಲಿ ಜನಜಂಗುಳಿ, ವಾಹನ ಸಂಚಾರ ದಟ್ಟಣೆ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಕಸದ ರಾಶಿಗಳು ಜನರಲ್ಲಿ ರೇಜಿಗೆ ಹುಟ್ಟಿಸಿ ಬಸವಳಿಯುವಂತೆ ಮಾಡುತ್ತಿವೆ. ಗದ್ದಲ, ಆಡಂಬರದ ಅಬ್ಬರದಲ್ಲಿ ದಸರಾ ಹಬ್ಬದ ಅನನ್ಯ ಲಕ್ಷಣಗಳ ಆಚರಣೆಗಳು ಮಸುಕಾಗುತ್ತಿದ್ದು, ದಸರಾ ಹಬ್ಬದ ವೈಭವಕ್ಕೆ ಮತ್ತು ಹಿರಿಮೆ ಗರಿಮೆಗೆ ಕುಂದು ಬರುತ್ತಿದೆ ಎಂದು ವಿಷಾದಿಸಿದರು.
ಕಂಬಳ ಕ್ರೀಡೆ ಕರಾವಳಿ ಪ್ರದೇಶದ (ತುಳುನಾಡಿನ) ಜನಪ್ರಿಯ ಗ್ರಾಮೀಣ ಕ್ರೀಡೆಯಾಗಿದ್ದು, 800 ವರ್ಷಗಳ ಹಿಂದೆ ತುಳುನಾಡಿನ ರೈತರು ಭತ್ತದ ಸುಗ್ಗಿ ನಂತರ ದೇವರಿಗೆ ಕೃತಜ್ಞತೆ ಸಲ್ಲಿಸಲು ಈ ಕೆಸರು ಗದ್ದೆ ಓಟ ಪ್ರಾರಂಭಿಸಿದರು. ಇಲ್ಲಿನ ಭೌಗೋಳಿಕ ಅಂಶಗಳು ಈ ಕ್ರೀಡೆ ಹುಟ್ಟಲು ಪ್ರಮುಖ ಕಾರಣ. ಈ ಕ್ರೀಡೆ ಕರಾವಳಿಯ ಪ್ರಾದೇಶಿಕ ಸೊಗಡನ್ನು, ಸಾಂಸ್ಕೃತಿಕ ವೈಶಿಷ್ಟೃಗಳನ್ನು, ಧಾರ್ಮಿಕ ಆಚರಣೆಗಳನ್ನು ಒಳಗೊಂಡಿದೆ. ತುಂಬ ನೇಮ ನಿಷ್ಠೆಯಿಂದ ಕಂಬಳವನ್ನು ನಡೆಸುತ್ತಾರೆ. ಇಂತಹ ಕಂಬಳವನ್ನು ದಸರಾ ಸಂದರ್ಭದಲ್ಲಿ ತಂದು ಹೇರುವುದು ಯಾವುದೇ ಕಾರಣಕ್ಕೂ ಸಮರ್ಥನೀಯ ಅಲ್ಲ. ಆದ್ದರಿಂದ ಇದನ್ನು ಕೈಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಕೋಟ್ಯಂತರ ರೂ.ಖರ್ಚು ಮಾಡಿ ಕೇವಲ ಎರಡು ದಿನಗಳ ಕ್ರೀಡೆಗೆ 400 ಕೋಣಗಳು, ಪ್ರತಿ ಕೋಣದ ಜವಾಬ್ದಾರಿಗೆ 50 ಜನರಂತೆ 20 ಸಾವಿರ ಜನರನ್ನು ತುಂಬ ದೂರದ ಊರುಗಳಿಂದ ಮೈಸೂರಿಗೆ ಕರೆತರುವುದು, ಕೆಸರು ಗದ್ದೆ ನಿರ್ಮಾಣಕ್ಕೆ 27 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿಯುವುದು, ನೀರಿನ ತೀವ್ರ ಅಭಾವವಿರುವಾಗ ಲಕ್ಷಾಂತರ ಲೀಟರ್ ನೀರು ಪೋಲು ಮಾಡುವುದು ವಿವೇಕದ ನಡೆಯಲ್ಲ ಎಂದು ಟೀಕಿಸಿದ್ದಾರೆ.
ಜುಲೈ ತಿಂಗಳ ಅರ್ಧಭಾಗ ಕಳೆದರೂ ಮಳೆ ಬಾರದೆ ಹಲವು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ. ಕೆಲವು ಕಡೆ ರೈತರು ಬಿತ್ತನೆ ಮಾಡಲಾಗುತ್ತಿಲ್ಲ. ಬಿತ್ತನೆ ಮಾಡಿರುವ ಕಡೆ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಸರ್ಕಾರದ ಆದ್ಯತೆಯಾಗಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಸರ್ಕಾರ ಕಂಬಳ ಕ್ರೀಡೆ ಆಯೋಜನೆ ಕೈಬಿಡದಿದ್ದರೆ ರೈತ ಸಂಘಗಳು, ಪರಿಸರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಸಾಹಿತಿ, ಕಲಾವಿದರು, ಪರಂಪರೆ ತಜ್ಞರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಒಗ್ಗೂಡಿ ತೀವ್ರ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಲಾಗಿದೆ.
ಸಂಘಟನೆಯ ಪರಶುರಾಮೇಗೌಡ, ಭಾನುಪ್ರಶಾಂತ್, ಶೈಲಜೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net