2027ರ ಜನಗಣತಿಯಲ್ಲಿ ಎಲ್ಲರೂ ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ, ಜಾತಿಯ ಕಾಲಂನಲ್ಲಿ ಮಹಾರ್ ಮತ್ತು ಭಾಷೆಯ ಕಾಲಂನಲ್ಲಿ ಪಾಲಿ ಎಂದು ನಮೂದಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಭೀಮರಾವ್ ಯಶ್ವಂತ್ ಅಂಬೇಡ್ಕರ್ ಹೇಳಿದರು.
ನಗರದ ಬಲ್ಲಾಳ್ ಸರ್ಕಲ್ ಸಮೀಪ ಇರುವ ವಿಶ್ವಮೈತ್ರಿ ಬುದ್ಧ ವಿಹಾರಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದರು.
ನಾವು ಪಾಲಿ ಭಾಷೆಯನ್ನು ಅರ್ಥಮಾಡಿಕೊಂಡು ಅದನ್ನು ಪ್ರೋತ್ಸಾಹಿಸಬೇಕಾಕಿದೆೆ. ಇತ್ತೀಚೆಗೆ ನಾನು ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಭಾರತೀಯ ಬೌದ್ಧ ಮಹಾಸಭೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಹೈದರಾಬಾದ್‌ನಿಂದ ಯಾದಗಿರಿವರೆಗೆ ಪ್ರಯಾಣ ಮಾಡಿದೆ. ಯಾದಗಿರಿ ದೂರದ ಜಿಲ್ಲೆಯಾದರೂ, ಅಲ್ಲಿನ ಬೌದ್ಧ ಸಮುದಾಯದ ಉತ್ಸಾಹ, ಸಂಘಟಿತ ಕಾರ್ಯ ವೈಖರಿ ಮತ್ತು ಧಮ್ಮದ ಮೇಲಿನ ನಿಷ್ಠೆ ನನ್ನನ್ನು ಆಳವಾಗಿ ಪ್ರಭಾವಿಸಿತು. ಅಲ್ಲಿ ಭಕ್ತರು ಸೇರಿ ಸುಂದರವಾದ ಬುದ್ಧ ವಿಹಾರವನ್ನು ನಿರ್ಮಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೌದ್ಧ ಧರ್ಮದ ಪ್ರಚಾರ ಮತ್ತು ಪ್ರಸಾರಕ್ಕೆ ಮೈಸೂರಿನ ಈ ವಿಹಾರವು ಪ್ರಮುಖ ಕೇಂದ್ರವಾಗಬೇಕಿದೆ. ಮುಂದಿನ ಪೀಳಿಗೆಗೆ ಧಮ್ಮದ ಮಾರ್ಗವನ್ನು ತೋರಿಸಲು ಇದು ಸಹಕಾರಿಯಾಗಲಿದೆ ಎಂದು ಆಶಿಸಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶದಲ್ಲಿ ತಂದ ಧಮ್ಮ ಕ್ರಾಂತಿಯತ್ತ ನಾವೆಲ್ಲರೂ ಗಮನ ಹರಿಸಬೇಕಿದ್ದು, ಭಾರತದಾದ್ಯಂತ ಅದನ್ನು ಪಸರಿಸಬೇಕು ಎಂದರು.
ಯಾದಗಿರಿ ಸಮೀಪ ಚಕ್ರವರ್ತಿ ಸಾಮ್ರಾಟ ಅಶೋಕನ ಎರಡನೇ ರಾಜಧಾನಿಗೆ ಸಂಬಂಸಿದ ಮಹತ್ವದ ಐತಿಹಾಸಿಕ ಬೌದ್ಧ ತಾಣವಿದೆ ಎಂದು ತಿಳಿಯಿತು. ಆದರೆ, ಆ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತೀಯ ಬೌದ್ಧ ಮಹಾಸಭೆಯು ಮುಖ್ಯಮಂತ್ರಿ ಹಾಗೂ ಪುರಾತತ್ವ ಇಲಾಖೆಗೆ ಮನವಿ ಸಲ್ಲಿಸಬೇಕು. ಅಮೂಲ್ಯ ಬೌದ್ಧ ಪರಂಪರೆಯ ತಾಣವನ್ನು ವೈಜ್ಞಾನಿಕವಾಗಿ ಸಂಶೋಧಿಸಿ, ಸಂರಕ್ಷಿಸಿ, ಅಭಿವೃದ್ಧಿಪಡಿಸಬೇಕು. ಆ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಕ್ರಮ ಕೈಗೊಳ್ಳಬೇಕು. ಇದು ಕೇವಲ ಬೌದ್ಧರ ಪರಂಪರೆಯಷ್ಟೇ ಅಲ್ಲ, ಭಾರತದ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ಆಸ್ತಿಯಾಗಿದೆ. ಇಂತಹ ಐತಿಹಾಸಿಕ ತಾಣಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಕೊಳ್ಳೇಗಾಲದ ಮನೋರಕ್ಷಿತ ಭಂತೇಜಿ, ಡಾ.ಕಲ್ಯಾಣಸಿರಿ ಭಂತೇಜಿ, ಗೌತಮ ಭಂತೇಜಿ, ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ, ನಿವೃತ್ತ ಡಿಸಿಪಿ ಸಿದ್ದರಾಜು, ಭಾಲ್ಕಿ, ಮಿಲಿಂದಾ, ಮಾಜಿ ಮೇಯರ್ ಪುರುಷೋತ್ತಮ್ ಇತರರಿದ್ದರು.