ಪೌರ ಸೇವಾ ನೌಕರರಿಗೆ ಸೇವಾ ಭದ್ರತೆ ಕಲ್ಪಿಸಿ

ತಿ.ನರಸೀಪುರ ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಸಭೆಯಲ್ಲಿ ಮೈಸೂರು ಜಿಲ್ಲಾಧ್ಯಕ್ಷರಾಗಿ ಮುಖ್ಯಾಧಿಕಾರಿ ಸಿ.ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಯಿತು. ಕೆ.ಡಿ.ಶೈಲಾ, ಪಳನಿಸ್ವಾಮಿ, ಮಂಜುನಾಥ್, ಎಂ.ಮಹೇಂದ್ರ, ಪೂವಯ್ಯ, ಗಣೇಶ್, ಸತೀಶ್, ಸಬೀಲ್ ಇತರರು ಇದ್ದರು.
ತಿ.ನರಸೀಪುರ ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಸಭೆಯಲ್ಲಿ ಮೈಸೂರು ಜಿಲ್ಲಾಧ್ಯಕ್ಷರಾಗಿ ಮುಖ್ಯಾಧಿಕಾರಿ ಸಿ.ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಯಿತು. ಕೆ.ಡಿ.ಶೈಲಾ, ಪಳನಿಸ್ವಾಮಿ, ಮಂಜುನಾಥ್, ಎಂ.ಮಹೇಂದ್ರ, ಪೂವಯ್ಯ, ಗಣೇಶ್, ಸತೀಶ್, ಸಬೀಲ್ ಇತರರು ಇದ್ದರು.
Published on
ತಿ.ನರಸೀಪುರ: ಪೌರ ಸೇವಾ ನೌಕರರಿಗೆ ಸೇವಾ ಭದ್ರತೆ ಸೇರಿದಂತೆ ಸರ್ಕಾರಿ ನೌಕರರಿಗೆ ದೊರೆಯುವ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷೆ ಕೆ.ಡಿ.ಶೈಲಾ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಮೈಸೂರು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.
ಪೌರ ಸೇವಾ ಇಲಾಖೆ ಹಿಂದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿತ್ತು. ನೌಕರರ ಸ್ಥಿತಿಯೂ ಹೀನಾಯವಾಗಿತ್ತು. ಅಂತಹ ಸಂದರ್ಭದಲ್ಲಿ ಸಂಘಟನಾ ಶಕ್ತಿಯ ಮೂಲಕ ನೌಕರರ ಪರವಾಗಿ ಧ್ವನಿ ಎತ್ತಿ ಹೋರಾಟ ನಡೆಸಿದ ಹಿರಿಯರ ಪರಿಶ್ರಮದಿಂದ ಸಂಘ ಬಲಿಷ್ಠವಾಗಿ ಬೆಳೆದಿದೆ ಎಂದರು.
ಸರ್ಕಾರದೊಂದಿಗೆ ಸಂಘರ್ಷದ ಹಾದಿ ಹಿಡಿಯದೆ ಉತ್ತಮ ಬಾಂಧವ್ಯ ಹೊಂದಿ, ಮಾತುಕತೆ ಹಾಗೂ ಸಂಘಟನೆಯ ಮೂಲಕ ನೌಕರರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘ ಮುಂದಾಗಿದೆ. ಪೌರ ಸೇವೆ ಅತ್ಯಂತ ಪವಿತ್ರವಾದ ಸೇವೆಯಾಗಿದ್ದು, ನಗರ ಹಾಗೂ ಪಟ್ಟಣಗಳ ಸ್ವಚ್ಛತೆ, ನೀರು ಸರಬರಾಜು ಸೇರಿದಂತೆ ಸಾರ್ವಜನಿಕರ ಮೂಲಸೌಲಭ್ಯ ಒದಗಿಸುವಲ್ಲಿ ಪೌರ ಸೇವಾ ನೌಕರರ ಪಾತ್ರ ಮಹತ್ವದ್ದಾಗಿದೆ ಎಂದರು.
ರಾಜ್ಯದ ವಿವಿಧ ಪುರಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು 35 ವರ್ಷಗಳಿಂದ ದಿನಗೂಲಿ ನೌಕರರು ಸೇವೆ ಸಲ್ಲಿಸುತ್ತಿದ್ದರೂ, ಇನ್ನೂ ಕಾಯಂ ಆಗದೆ ಉಳಿದಿದ್ದಾರೆ. ಅವರಿಗೆ ಸೇವಾ ಭದ್ರತೆ ಕಲ್ಪಿಸುವುದು ಸಂಘದ ಪ್ರಮುಖ ಆದ್ಯತೆಯಾಗಿದೆ ಎಂದು ಕೆ.ಡಿ.ಶೈಲಾ ತಿಳಿಸಿದರು.
ನೀರು ಸರಬರಾಜು ವಿಭಾಗದಲ್ಲಿಯೂ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಸಮಸ್ಯೆ ಎದುರಿಸುತ್ತಿದ್ದಾರೆ. ಸೇವಾ ಭದ್ರತೆ ದೊರೆಯದೆ ದಿನಗೂಲಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕುರಿತು ಸರ್ಕಾರ ಹಾಗೂ ಸಂಬಂಧಿಸಿದ ಸಚಿವರ ಗಮನಕ್ಕೆ ಈಗಾಗಲೇ ತರಲಾಗಿದೆ ಎಂದರು.
ಪದಾಧಿಕಾರಿಗಳ ಆಯ್ಕೆ: ಸಭೆಯಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಮೈಸೂರು ಜಿಲ್ಲಾ ಅಧ್ಯಕ್ಷರಾಗಿ ತಿ.ನರಸೀಪುರ ಪುರಸಭೆಯ ಮುಖ್ಯಾಧಿಕಾರಿ ಸಿ.ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಸರಗೂರಿನ ಪಳನಿಸ್ವಾಮಿ, ಕಾರ್ಯದರ್ಶಿಯಾಗಿ ಮಂಜುನಾಥ್, ಸಹಕಾರ್ಯದರ್ಶಿಯಾಗಿ ಶಿವು, ಖಜಾಂಚಿಯಾಗಿ ಎಂ.ಮಹೇಂದ್ರ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಹೂಟಗಳ್ಳಿಯ ಎಚ್.ಎಸ್.ಶಿವಪ್ರಸಾದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ಪರಿಷತ್ ಸದಸ್ಯ ಗಿರೀಶ್ ಪೂವಯ್ಯ, ಮೈಸೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಗಣೇಶ್, ವಿಭಾಗ ಮಟ್ಟದ ಉಪಾಧ್ಯಕ್ಷ ಸತೀಶ್, ತಿ.ನರಸೀಪುರ ಕಾರ್ಯದರ್ಶಿ ಗೋಪಾಲಕೃಷ್ಣ ಸೇರಿದಂತೆ ಪೌರ ಕಾರ್ಮಿಕರು ಹಾಗೂ ಪುರಸಭೆ ಸಿಬ್ಬಂದಿ ವರ್ಗದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net