ಎಲ್‌ಆ್ಯಂಡ್‌ಟಿ ಟೆಕ್ನಾಲಜಿ ಸರ್ವಿಸಸ್‌ನಿಂದ ಎಂಜಿನಿಯರಿಂಗ್ ಇಂಟೆಲಿಜೆನ್ಸ್ ಪ್ರಯೋಗಾಲಯ ಆರಂಭ

ಎಲ್‌ಆ್ಯಂಡ್‌ಟಿ ಟೆಕ್ನಾಲಜಿ ಸರ್ವಿಸಸ್‌ನಿಂದ ಎಂಜಿನಿಯರಿಂಗ್ ಇಂಟೆಲಿಜೆನ್ಸ್ ಪ್ರಯೋಗಾಲಯ ಆರಂಭ
ಎಲ್‌ಆ್ಯಂಡ್‌ಟಿ ಟೆಕ್ನಾಲಜಿ ಸರ್ವಿಸಸ್‌ನಿಂದ ಎಂಜಿನಿಯರಿಂಗ್ ಇಂಟೆಲಿಜೆನ್ಸ್ ಪ್ರಯೋಗಾಲಯ ಆರಂಭ
Published on: 

ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಸೇವೆಗಳ ಜಾಗತಿಕ ಸಂಸ್ಥೆಯಾಗಿರುವ ಎಲ್‌ಆ್ಯಂಡ್‌ಟಿ ಟೆಕ್ನಾಲಜಿ ಸರ್ವಿಸಸ್ (ಎಲ್‌ಟಿಟಿಎಸ್‌), ಡಿಜಿಟಲ್ ತಯಾರಿಕಾ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಗಳ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ನೂತನ ಎಂಜಿನಿಯರಿಂಗ್ ಇಂಟೆಲಿಜೆನ್ಸ್ ಪ್ರಯೋಗಾಲಯವನ್ನು ಆರಂಭಿಸಿದೆ.

ಎನ್‌ವಿಡಿಯಾದ ವೇಗವರ್ಧಿತ ಕಂಪ್ಯೂಟಿಂಗ್ ತಂತ್ರಜ್ಞಾನಗಳನ್ನು ಆಧರಿಸಿದ ಈ ಪ್ರಯೋಗಾಲಯವು ಸ್ವಯಂಚಾಲಿತ ತಯಾರಿಕೆ, ಕೈಗಾರಿಕಾ ರೋಬೊಟಿಕ್ಸ್, ಪೂರೈಕೆ ಸರಪಳಿ ನಿರ್ವಹಣೆ, ಇಂಧನ ದಕ್ಷತೆ, ಹೊರಸೂಸುವಿಕೆ ನಿಯಂತ್ರಣ ಹಾಗೂ ಆಸ್ತಿ ವಿಶ್ವಾಸಾರ್ಹತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಧಾರಿತ ತಂತ್ರಜ್ಞಾನಗಳ ಬಳಕೆಯನ್ನು ಪ್ರದರ್ಶಿಸಲಿದೆ.

ಎಐ ತಂತ್ರಜ್ಞಾನವನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಿರುವ ಈ ಪ್ರಯೋಗಾಲಯದಲ್ಲಿ ಡಿಜಿಟಲ್ ಟ್ವಿನ್ಸ್, ಕೈಗಾರಿಕಾ ಕೃತಕ ಬುದ್ಧಿಮತ್ತೆ ಮತ್ತು ಭೌತಿಕ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳನ್ನು ನೈಜ ತಯಾರಿಕಾ ಪರಿಸರದಲ್ಲಿ ಹೇಗೆ ಬಳಸಬಹುದು ಎಂಬುದನ್ನು ಗ್ರಾಹಕರು ಮತ್ತು ಪಾಲುದಾರರು ನೇರವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಡಿಜಿಟಲ್ ಎಂಜಿನಿಯರಿಂಗ್‌ನಿಂದ ವರ್ಚುವಲ್ ದೃಢೀಕರಣ, ಸಂಪರ್ಕಿತ ತಯಾರಿಕೆ, ಬುದ್ಧಿವಂತ ಕಾರ್ಯಾಚರಣೆಗಳು ಹಾಗೂ ಸ್ವಾಯತ್ತ ವ್ಯವಸ್ಥೆಗಳವರೆಗಿನ ವಿವಿಧ ತಂತ್ರಜ್ಞಾನಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವುದು ಈ ಪ್ರಯೋಗಾಲಯದ ಪ್ರಮುಖ ಉದ್ದೇಶವಾಗಿದೆ.

ಪ್ರಯೋಗಾಲಯದ ಪ್ರಮುಖ ವಿಶೇಷತೆಗಳು

ತಯಾರಿಕಾ ಬುದ್ಧಿಮತ್ತೆ: ಎಐ ಆಧಾರಿತ ಮ್ಯಾನುಫ್ಯಾಕ್ಚರಿಂಗ್ ಕಮಾಂಡ್ ಸೆಂಟರ್ ಈ ಪ್ರಯೋಗಾಲಯದ ಪ್ರಮುಖ ಆಕರ್ಷಣೆಯಾಗಿದೆ. ತಯಾರಿಕಾ ದತ್ತಾಂಶ ವಿಶ್ಲೇಷಣೆ, ನಿರ್ಧಾರ ಕೈಗೊಳ್ಳುವಿಕೆಗೆ ನೆರವು, ಪೂರೈಕೆ ಸರಪಳಿ ಮೇಲ್ವಿಚಾರಣೆ ಹಾಗೂ ವಿವಿಧ ಘಟಕಗಳ ಕಾರ್ಯಕ್ಷಮತೆಯನ್ನು ಹೋಲಿಕೆ ಮಾಡುವ ವ್ಯವಸ್ಥೆಗಳು ಇಲ್ಲಿ ಲಭ್ಯವಿರಲಿವೆ.

ಸ್ವಯಂಚಾಲಿತ ತಯಾರಿಕಾ ಘಟಕ: ಬುದ್ಧಿವಂತ ಯಂತ್ರಗಳು, ಕೈಗಾರಿಕಾ ರೋಬೊಟ್‌ಗಳು, ಸಹಯೋಗಿ ರೋಬೊಟ್‌ಗಳು (ಕೋಬೋಟ್‌ಗಳು), ಡ್ರೋನ್‌ಗಳು ಮತ್ತು ಡಿಜಿಟಲ್ ಟ್ವಿನ್ಸ್‌ಗಳನ್ನು ಪರಸ್ಪರ ಸಂಪರ್ಕಿಸಿ ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಇದರಿಂದ ತಯಾರಿಕಾ ಪ್ರಕ್ರಿಯೆಗಳಲ್ಲಿ ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡುವುದರ ಜತೆಗೆ ಕಾರ್ಯಕ್ಷಮತೆ ಮತ್ತು ನಿಖರತೆಯನ್ನು ಹೆಚ್ಚಿಸಲು ಸಾಧ್ಯವಾಗಲಿದೆ.

ಎನ್‌ವಿಡಿಯಾ ಐಸಾಕ್ ಸಿಮ್‌, ಫಿಸ್‌ಎಕ್ಸ್‌, ಕಾಸ್ಮೊಸ್‌, ನೆಮೊ ಹಾಗೂ ಓಪನ್‌ಯುಎಸ್‌ಡಿ ಆಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿರುವ ಈ ವ್ಯವಸ್ಥೆಯು ಕೈಗಾರಿಕಾ ಸಿಮ್ಯುಲೇಷನ್‌, ಡಿಜಿಟಲ್ ಟ್ವಿನ್ ಮಾದರಿಗಳ ನಿರ್ಮಾಣ ಮತ್ತು ಎಐ ಆಧಾರಿತ ಕಾರ್ಯಾಚರಣೆಗಳಿಗೆ ನೆರವಾಗಲಿದೆ.

ಕಾರ್ಯಾಚರಣೆಗಳಲ್ಲಿ ಎಐ ಮತ್ತು ಸ್ವಾಯತ್ತತೆ: ಎಐ ಏಜೆಂಟ್‌ಗಳು ರೂಪಿಸುವ ಕಾರ್ಯಾಚರಣೆಗಳನ್ನು ಯಂತ್ರಗಳಿಗೆ ತಲುಪಿಸುವ ಮೊದಲು ಪರಿಶೀಲಿಸುವ ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ. ಇದರಿಂದ ಕಾರ್ಯಾಚರಣೆಗಳ ಸುರಕ್ಷತೆ, ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ಆದ್ಯತೆ ನೀಡುವ ಮೂಲಕ ಸ್ವಾಯತ್ತ ನಿರ್ಧಾರ ಕೈಗೊಳ್ಳುವಿಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಸಾಧ್ಯವಾಗಲಿದೆ.

ಕಾರ್ಖಾನೆ ವಿನ್ಯಾಸ, ಸಿಮ್ಯುಲೇಷನ್‌, ಉತ್ಪಾದನಾ ಪ್ರಕ್ರಿಯೆ, ಗುಣಮಟ್ಟ ನಿಯಂತ್ರಣ, ನಿರ್ವಹಣೆ ಮತ್ತು ಸುಸ್ಥಿರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನಗಳನ್ನು ಬಳಸಬಹುದಾಗಿದೆ.

ಏಕೀಕೃತ ಎಂಜಿನಿಯರಿಂಗ್ ಇಂಟೆಲಿಜೆನ್ಸ್ ವೇದಿಕೆ: ಎಲ್‌ಟಿಟಿಎಸ್‌ನ EIOne ವೇದಿಕೆಯು 100ಕ್ಕೂ ಹೆಚ್ಚು ಎಂಜಿನಿಯರಿಂಗ್ ಇಂಟೆಲಿಜೆನ್ಸ್ ಪರಿಹಾರಗಳು ಮತ್ತು ಏಜೆಂಟಿಕ್ ಎಐ ವ್ಯವಸ್ಥೆಗಳನ್ನು ಒಂದೇ ನಿಯಂತ್ರಿತ ಪರಿಸರದಲ್ಲಿ ಒಗ್ಗೂಡಿಸುತ್ತದೆ. ಉದ್ಯಮಗಳು ಎಐ ಆಧಾರಿತ ಎಂಜಿನಿಯರಿಂಗ್ ಮತ್ತು ತಯಾರಿಕಾ ಕಾರ್ಯವಿಧಾನಗಳನ್ನು ವೇಗವಾಗಿ ರೂಪಿಸಲು, ಅನುಷ್ಠಾನಗೊಳಿಸಲು ಹಾಗೂ ವಿಸ್ತರಿಸಲು ಈ ವೇದಿಕೆ ನೆರವಾಗಲಿದೆ. ಜತೆಗೆ, ಸುರಕ್ಷತೆ, ಆಡಳಿತಾತ್ಮಕ ನಿಯಂತ್ರಣ ಮತ್ತು ಕಾರ್ಯಾಚರಣೆಯ ಮೇಲ್ವಿಚಾರಣೆಗೂ ಒತ್ತು ನೀಡಲಾಗಿದೆ.

ಎಐ ಆಧಾರಿತ ಕಾರ್ಖಾನೆಗಳ ನಿರ್ಮಾಣಕ್ಕೆ ಹೊಸ ಅವಕಾಶ

ಈ ಸಂದರ್ಭದಲ್ಲಿ ಮಾತನಾಡಿದ ಎನ್‌ವಿಡಿಯಾದ ದಕ್ಷಿಣ ಏಷ್ಯಾ ವ್ಯವಸ್ಥಾಪಕ ನಿರ್ದೇಶಕ ವಿಶಾಲ್ ಧುಪರ್, ಭವಿಷ್ಯದ ಕಾರ್ಖಾನೆಗಳ ವಿನ್ಯಾಸ, ಸಿಮ್ಯುಲೇಷನ್‌ ಮತ್ತು ಕಾರ್ಯಾಚರಣೆಗಳಲ್ಲಿ ಕೃತಕ ಬುದ್ಧಿಮತ್ತೆ ಮಹತ್ವದ ಪರಿವರ್ತನೆ ತರುತ್ತಿದೆ ಎಂದು ಹೇಳಿದರು.

ಎನ್‌ವಿಡಿಯಾದ ಹಾರ್ಡ್‌ವೇರ್‌, ಸಾಫ್ಟ್‌ವೇರ್‌ ಮತ್ತು ವರ್ಲ್ಡ್ ಮಾಡೆಲ್ ತಂತ್ರಜ್ಞಾನಗಳನ್ನು ಎಲ್‌ಟಿಟಿಎಸ್‌ನ ಎಂಜಿನಿಯರಿಂಗ್ ಪರಿಣತಿಯೊಂದಿಗೆ ಸಂಯೋಜಿಸಿರುವ ಈ ಪ್ರಯೋಗಾಲಯವು ಕೈಗಾರಿಕಾ ಪರಿವರ್ತನೆಗೆ ಪೂರಕವಾದ ಎಐ ಆಧಾರಿತ ಪರಿಹಾರಗಳನ್ನು ಪರೀಕ್ಷಿಸಲು ಮತ್ತು ದೃಢೀಕರಿಸಲು ತಯಾರಿಕಾ ಸಂಸ್ಥೆಗಳಿಗೆ ಪ್ರಾಯೋಗಿಕ ವೇದಿಕೆ ಒದಗಿಸಲಿದೆ ಎಂದು ತಿಳಿಸಿದರು.

ಎಲ್‌ಟಿಟಿಎಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮತ್ತು ನಾಸ್ಕಾಂ ಕಾರ್ಯಕಾರಿ ಮಂಡಳಿ ಸದಸ್ಯ ಅಮಿತ್ ಛಡ್ಡಾ ಮಾತನಾಡಿ, ಎಂಜಿನಿಯರಿಂಗ್‌, ಕೃತಕ ಬುದ್ಧಿಮತ್ತೆ ಮತ್ತು ಭೌತಿಕ ವ್ಯವಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ನೈಜ ಜಗತ್ತಿನ ತಯಾರಿಕಾ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಈ ಪ್ರಯೋಗಾಲಯ ನೆರವಾಗಲಿದೆ ಎಂದರು.

ಎನ್‌ವಿಡಿಯಾದೊಂದಿಗಿನ ಸಹಯೋಗವು ಸುಧಾರಿತ ಸಿಮ್ಯುಲೇಷನ್‌ ಮತ್ತು ವೇಗವರ್ಧಿತ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಒದಗಿಸಲಿದ್ದು, ಎಲ್‌ಟಿಟಿಎಸ್‌ನ ಎಂಜಿನಿಯರಿಂಗ್ ಹಾಗೂ ತಯಾರಿಕಾ ಕ್ಷೇತ್ರದ ಪರಿಣತಿಯೊಂದಿಗೆ ಈ ತಂತ್ರಜ್ಞಾನಗಳನ್ನು ಜಾಗತಿಕ ಗ್ರಾಹಕರಿಗೆ ಪ್ರಾಯೋಗಿಕ ಪರಿಹಾರಗಳಾಗಿ ತಲುಪಿಸಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಈ ಪ್ರಯೋಗಾಲಯವು ಡಿಜಿಟಲ್ ತಂತ್ರಜ್ಞಾನ ಮತ್ತು ಭೌತಿಕ ತಯಾರಿಕಾ ವ್ಯವಸ್ಥೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದರ ಜತೆಗೆ, ಭವಿಷ್ಯದ ಬುದ್ಧಿವಂತ ಹಾಗೂ ಸ್ವಯಂಚಾಲಿತ ಕಾರ್ಖಾನೆಗಳ ಅಭಿವೃದ್ಧಿಗೆ ಹೊಸ ಸಾಧ್ಯತೆಗಳನ್ನು ತೆರೆದಿಡುವ ನಿರೀಕ್ಷೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net