ಸಾಹಿತ್ಯದ ಬೆಳವಣಿಗೆಗೆ ದತ್ತಿಗಳು ಸಹಕಾರಿ:ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ಅಭಿಪ್ರಾಯ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶರಣ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಸಿಪಿಕೆ, ಡಾ.ಸಿ.ಸೋಮಶೇಖರ, ಪ್ರೊ.ಬಿ.ಜಯಪ್ರಕಾಶ್‌ಗೌಡ, ಮಡ್ಡೀಕೆರೆ ಗೋಪಾಲ್, ಜಯಪ್ಪ ಹೊನ್ನಾಳಿ, ಹೆಳವರಹುಂಡಿ ಸಿದ್ದಪ್ಪ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಯಾವುದೇ ಸಾಹಿತ್ಯ, ಕಲೆ, ನೃತ್ಯ ಬೆಳವಣಿಗೆಯಾಗಬೇಕಾದರೆ ಪ್ರೋತ್ಸಾಹ ಅಗತ್ಯ
ದತ್ತಿಗಳಿಂದ ಕನ್ನಡ ಸಾಹಿತ್ಯ ಮತ್ತಷ್ಟು ಬೆಳವಣಿಗೆ ಹೊಂದಿ, ಹೊಸ ಸಾಹಿತಿಗಳು ಬರಲು ಸಾಧ್ಯವಾಗುತ್ತದೆ
ಮೈಸೂರು:ಯಾವುದೇ ದತ್ತಿಗಳು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹದಾಯಕವಾಗಿ ಇರುತ್ತವೆ ಎಂದು ಹಿರಿಯ ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್(ಸಿಪಿಕೆ) ಅಭಿಪ್ರಾಯಪಟ್ಟರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ನಗರ, ಜಿಲ್ಲಾ ಘಟಕ ಹಾಗೂ ಕದಳಿ ಮಹಿಳಾ ವೇದಿಕೆಯಿಂದ ನಗರದಲ್ಲಿ ಆಯೋಜಿಸಿದ್ದ ಶರಣ ದತ್ತಿ ಪ್ರಶಸ್ತಿ-2025 ಪ್ರದಾನ ಸಮಾರಂಭದಲ್ಲಿ ಪುರಸ್ಕೃತರನ್ನು ಸನ್ಮಾನಿಸಿ ಮಾತನಾಡಿದರು.
ಯಾವುದೇ ಸಾಹಿತ್ಯ, ಕಲೆ, ನೃತ್ಯ ಬೆಳವಣಿಗೆಯಾಗಬೇಕಾದರೆ ಪ್ರೋತ್ಸಾಹ ಅಗತ್ಯ. ಹಿಂದೆ ರಾಜ-ಮಹಾರಾಜರು, ಮಠಮಾನ್ಯ, ಗುರುಗಳು ಧಾರ್ಮಿಕ ದತ್ತಿಗಳನ್ನು ಇಟ್ಟು ಪ್ರೋತ್ಸಾಹ ನೀಡುತ್ತಿದ್ದರು. ಈಗ ಸರ್ಕಾರದ ಪರಿಷತ್ತು, ಅಕಾಡೆಮಿ, ಸಂಘ-ಸಂಸ್ಥೆಗಳು ದತ್ತಿಗಳನ್ನು ಇಟ್ಟು ಪ್ರೋತ್ಸಾಹ ನೀಡುತ್ತಿವೆ ಎಂದರು.
ಇಂತಹ ದತ್ತಿಗಳು ಇನ್ನಷ್ಟು ಬೆಳೆಯಬೇಕು. ಇದರಿಂದ ಕನ್ನಡ ಸಾಹಿತ್ಯ ಮತ್ತಷ್ಟು ಬೆಳವಣಿಗೆ ಹೊಂದಿ, ಹೊಸ ಸಾಹಿತಿಗಳು ಬರಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರೋತ್ಸಾಹ ನೀಡುವಂತಹ ಹೆಚ್ಚು ದತ್ತಿಗಳು ಸ್ಥಾಪನೆಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ ಮಾತನಾಡಿ, ಸುತ್ತೂರು ಮಠದ ಹಿರಿಯ ಶ್ರೀಗಳಾದ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಕನಸಿನ ಕೂಸಾದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಶರಣ ಸಾಹಿತ್ಯ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಈಗಿನ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದದಿಂದ ಗೊರುಚ ಅವರಿಂದ ಹಿಡಿದು ಎಲ್ಲ ಅಧ್ಯಕ್ಷರು ಪರಿಷತ್ತಿನ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ ಎಂದರು.
ವಚನ ಸಾಹಿತ್ಯ ಪ್ರಕಾರ ಪ್ರಬಲವಾಗಿದ್ದು, ಇದನ್ನು ಹೊರತುಪಡಿಸಿ ಕನ್ನಡ ಸಾಹಿತ್ಯವನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಮಾನವೀಯ ಮೌಲ್ಯಗಳನ್ನು ಒಳಗೊಂಡಿರುವ ಶರಣ ಸಾಹಿತ್ಯವನ್ನು ವಿಶ್ವದ ಇನ್ಯಾವ ಸಾಹಿತ್ಯದಲ್ಲಿಯೂ ಕಾಣಲು ಸಾಧ್ಯವಿಲ್ಲ. ಪ್ರಸ್ತುತ ನಡೆಯುತ್ತಿರುವ ಇರಾನ್-ಇಸ್ರೇಲ್, ಅಮೆರಿಕ ಯುದ್ಧ ಮಾಡುತ್ತಿರುವವರು ವಚನ ಸಾಹಿತ್ಯ ಓದಿದ್ದರೆ ಯುದ್ಧವೇ ನಡೆಯುತ್ತಿರಲಿಲ್ಲ ಎಂದು ಹೇಳಿದರು.
ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ ಮಾತನಾಡಿ, ಸಾಹಿತ್ಯವನ್ನು ಬೆಳೆಸಬೇಕಾದ ಕನ್ನಡ ಸಾಹಿತ್ಯ ಪರಿಷತ್ತು ಇಂದು ಯಾವ ಸ್ಥಿತಿಯಲ್ಲಿದೆ ಎಂತಹ ಅಧ್ಯಕ್ಷರು ಬಂದಿದ್ದಾರೆ ಎಂದು ನೋಡಿದರೆ ನೋವಾಗುತ್ತದೆ. ಓದಿ ತಿಳಿದವರು, ಶರಣ ಸಾಹಿತ್ಯ ಕಲಿತವರು ಇಂತಹ ಅವ್ಯವಸ್ಥೆಯನ್ನು ಪ್ರತಿಭಟಿಸದೆ ಸುಮ್ಮನೆ ಇರುವುದು ಕಂಡರೆ ನಾವು ಏಕೆ ಓದಿದ್ದೇವೆ ಎನ್ನುವ ಪ್ರಶ್ನೆ ಮೂಡುತ್ತದೆ ಎಂದರು.
ಸಾಹಿತ್ಯಜಾತ್ರೆಗಾಗಿ 40-50 ಕೋಟಿ ರೂ. ಖರ್ಚು ಮಾಡಿದರೂ ಸಾಹಿತ್ಯ ಬೆಳವಣಿಗೆ ಆಗುತ್ತಿಲ್ಲ, ಸಾಹಿತಿಗಳಿಗೆ ಯಾವುದೇ ಪ್ರೋತ್ಸಾಹ ಇಲ್ಲ ಎಂದರೆ ಇನ್ಯಾವ ಪುರುಷಾರ್ಥಕ್ಕಾಗಿ ಇಂತಹ ಸಮ್ಮೇಳನಗಳು ಬೇಕು? ಓದುವುದರಿಂದ ಬದಲಾವಣೆ ಆಗುತ್ತದೆ ಎಂದು ಹೇಳುತ್ತಾರೆ. ಆದರೆ ಇಂದಿಗೂ ಭ್ರಷ್ಟಾಚಾರ, ಮೋಸ, ವಂಚನೆ ನಿಂತಿಲ್ಲ ಎಂದು ಬೇಸರಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಬಿ.ವಿ.ವಸಂತಕುಮಾರ್, ನಿವೃತ್ತ ಪ್ರಾಧ್ಯಾಪಕ ಕಲಬುರಗಿಯ ಡಾ.ಕಲ್ಯಾಣರಾವ ಜಿ.ಪಾಟೀಲ, ಬೆಂಗಳೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ, ಸಾಹಿತಿ ಡಾ.ಎಸ್.ದೇವಿಕಾ(ದೇವಗಾನ), ರಾಣೆಬೆನ್ನೂರು ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಕಾಂತೇಶರೆಡ್ಡಿ ಗೋಡಿಹಾಳ ಅವರಿಗೆ ಕಮಲಮ್ಮ ಮತ್ತು ಪ್ರೊ.ಜಿ.ಎ.ಶಿವಲಿಂಗಯ್ಯ ಶರಣ ದತ್ತಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ ಜಯಪ್ಪ ಹೊನ್ನಾಳಿ, ಜಿಲ್ಲಾ ಘಟಕದ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾರಾಣಿ ಜೈಪ್ರಕಾಶ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಶಿ. ಗಾಂಜಿ ಇದ್ದರು.