ಮೈಸೂರು ಜಿಲ್ಲೆಯಲ್ಲಿ 1449 ಕೆರೆಗಳ ಒತ್ತುವರಿ!

ಚಾಮುಂಡಿಬೆಟ್ಟ ತಪ್ಪಿನಲ್ಲಿರುವ ಕೆರೆ ಒತ್ತುವರಿ ಜಾಗ ತೆರವು ಕಾರ್ಯಾಚರಣೆ
ಚಾಮುಂಡಿಬೆಟ್ಟ ತಪ್ಪಿನಲ್ಲಿರುವ ಕೆರೆ ಒತ್ತುವರಿ ಜಾಗ ತೆರವು ಕಾರ್ಯಾಚರಣೆ
Published on

ಪ್ರಮುಖ ಮುಖ್ಯಾಂಶಗಳು

  • 2,984 ಕೆರೆಗಳ ಭೂಮಾಪನ
  • ಭೂಗಳ್ಳರ ಕಣ್ಣು ಸರ್ಕಾರಿ ಜಾಗದ ಮೇಲೆ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಕೆರೆ ಕೇವಲ ನೀರಿನ ಮೂಲವಲ್ಲ, ಅದು ಜೀವವೈವಿಧ್ಯದ ಕೇಂದ್ರ. ಹೀಗೆ ಜಲಚರಗಳಿಗೆ ಆಶ್ರಯ ತಾಣವಾಗಿರುವ ಇವುಗಳ ಜಾಗದ ಭೂಗಳ್ಳತನವೇ ಮೈಸೂರು ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆದಿದ್ದು, ಬರೋಬ್ಬರಿ 1,449 ಕೆರೆಗಳು ಒತ್ತುವರಿಯಾಗಿವೆ ಎಂಬುದೇ ಅಚ್ಚರಿ...!
ನೆಲಗಳ್ಳರ ವಕ್ರದೃಷ್ಟಿ ಸರ್ಕಾರಕ್ಕೆ ಸೇರಿರುವ ಕೆರೆಗಳ ಜಾಗದ ಮೇಲೆ ಬಿದ್ದಿದೆ ಎಂಬುದನ್ನು ಇದು ತೋರಿಸುತ್ತದೆ. ಇದಕ್ಕೆ ಕಡಿವಾಣ ಹಾಕಿ ಕೆರೆಗಳ ಆವರಣಗಳನ್ನು ಜಿಲ್ಲಾಡಳಿತ ತ್ವರಿತವಾಗಿ ಹದ್ದುಬಸ್ತ್ ಮಾಡಿ ಸಂರಕ್ಷಣೆ ಮಾಡಬೇಕಿದೆ. ಇಲ್ಲವಾದರೆ, ಭವಿಷ್ಯದಲ್ಲಿ ಕೆರೆಗಳು ಕಣ್ಮರೆಯಾಗುವುದು ನಿಶ್ಚಿತ.

ಸರ್ಕಾರಿ ಜಾಗದ  ತಾಜಾ ಉದಾಹರಣೆ: 

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಕೆ.ಸಿ.ಬಡಾವಣೆಯ ತಾವರೆ ಕೆರೆ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು ಇತ್ತೀಚಿನ ಪ್ರಕರಣ. ಕುರುಬಾರಹಳ್ಳಿ ಸರ್ವೇ ನಂ.4 ವ್ಯಾಪ್ತಿಯ 100 ಕೋಟಿ ರೂ. ಬೆಲೆ ಬಾಳುವ 6.10 ಎಕರೆ ಜಾಗವನ್ನು ಪ್ರಭಾವಿ ವ್ಯಕ್ತಿಗಳು ಆಕ್ರಮಿಸಿಕೊಂಡಿದ್ದರು. 
ಶಾಸಕ ಟಿ.ಎಸ್.ಶ್ರೀವತ್ಸ ಸ್ಥಳಕ್ಕೆ ಭೇಟಿ ನೀಡಿ ಅಕ್ರಮವನ್ನು ಬಯಲಿಗೆಳೆದರು. ಜತೆಗೆ, ಅತಿಕ್ರಮಣವನ್ನು ತೆರವುಗೊಳಿಸಲು ಎಚ್ಚರಿಕೆ ಕೊಟ್ಟರು. ಇದರ ಫಲವಾಗಿ ತಾಲೂಕು ಆಡಳಿತ ತ್ವರಿತವಾಗಿ ತೆರವು ಕಾರ್ಯಾಚರಣೆ ನಡೆಸಿ ಆ ಜಾಗವನ್ನು ಉಳಿಸಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಸಹಭಾಗಿತ್ವದಲ್ಲಿ ಹೀಗೆ ಕೆರೆಗಳ ಆಕ್ರಮಣವನ್ನು ತಡೆದು, ಸರ್ಕಾರಿ ಜಾಗವನ್ನು ಸಂರಕ್ಷಣೆ ಮಾಡಬೇಕಿದೆ. ಆದರೆ, ಇಂತಹ ರಚನಾತ್ಮಕ ಕೆಲಸಗಳು ಎಲ್ಲಿ ನಡೆಯುತ್ತಿವೆ...?

1472 ಎಕರೆ ಪ್ರದೇಶ ಅತಿಕ್ರಮಣ: 

ಮೈಸೂರು ಜಿಲ್ಲೆಯಲ್ಲಿ 2,991 ಕೆರೆಗಳಿವೆ. ಇದರ ವ್ಯಾಪ್ತಿ 25,148 ಎಕರೆಯಷ್ಟು ವಿಸ್ತಾರವಾಗಿದೆ. ಇದರಲ್ಲಿ 2,984 ಕೆರೆಗಳ 25,101 ಎಕರೆ ಪ್ರದೇಶವನ್ನು ಭೂಮಾಪನ ಮಾಡಿ ಗಡಿ ಗುರುತಿಸಲಾಗಿದೆ. ಇನ್ನೂ 7 ಕೆರೆಗಳ 47 ಎಕರೆ ಪ್ರದೇಶವನ್ನು ಅಳತೆ ಮಾಡಬೇಕಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

298 ಎಕರೆ ಜಾಗ ಈಗಲೂ ಒತ್ತುವರಿದಾರರ ವಶದಲ್ಲೇ

ಭೂಮಿಗೆ ಬಂಗಾರಕ್ಕಿಂತ ಹೆಚ್ಚಿನ ಬೆಲೆ ಬಂದಿದ್ದರಿಂದ ಭೂಗಳ್ಳರ ಕಣ್ಣು ಕೆರೆಗಳ ಜಾಗದ ಮೇಲೆ ಬಿದ್ದಿದೆ. ಹೀಗಾಗಿ, ಜಿಲ್ಲೆಯಲ್ಲಿ 1,449 ಕೆರೆಗಳು ಒತ್ತುವರಿಯಾಗಿದ್ದು, 1472 ಎಕರೆ ಪ್ರದೇಶವನ್ನು ಅತಿಕ್ರಮಿಸಲಾಗಿದೆ. ಇದರಲ್ಲಿ 1,314 ಕೆರೆಗಳ 1,174 ಎಕರೆ ಪ್ರದೇಶವನ್ನು ಒತ್ತುವರಿಯನ್ನು ಈಗಾಗಲೇ ತೆರವುಗೊಳಿಸಿ ಕೆರೆ ಜಾಗವನ್ನು ಭೂಗಳ್ಳರಿಂದ ಬಿಡಿಸಿಕೊಳ್ಳಲಾಗಿದೆ. ಆದರೆ, ಇನ್ನೂ 135 ಕೆರೆಗಳ ಅತಿಕ್ರಮಣಗೊಂಡಿದ್ದು, ಇವುಗಳ 298 ಎಕರೆ ಜಾಗ ಈಗಲೂ ಒತ್ತುವರಿದಾರರ ವಶದಲ್ಲೇ ಇದೆ. ಕಾನೂನುಬಾಹಿರವಾಗಿ ಅತಿಕ್ರಮಿಸಿರುವ ಸರ್ಕಾರಿ ಜಾಗವನ್ನು ಮರಳಿ ಪಡೆದುಕೊಳ್ಳಬೇಕಾಗಿದೆ.

ತೆರವಿಗೆ ಅಧಿಕಾರಿಗಳ ಹಿಂದೇಟು:

 ಕೆರೆಗಳನ್ನು ಉಳಿಸಿಕೊಳ್ಳುವಲ್ಲಿ ಆಡಳಿತ ವ್ಯವಸ್ಥೆ ಅಸಡ್ಡೆ ಮಾಡುತ್ತಿದೆ. ಕೆರೆಗಳ ಒತ್ತುವರಿಯಲ್ಲಿ ಸಾಕಷ್ಟು ಪ್ರಭಾವಿಗಳಿದ್ದು, ತೆರವುಗೊಳಿಸಲು ಅಧಿಕಾರಿಗಳು ಹೆದರುತ್ತಿದ್ದಾರೆ. ಪಿರಿಯಾಪಟ್ಟಣ ತಾಲೂಕಿನಲ್ಲಿಯೇ ಅತಿ ಹೆಚ್ಚು ಕೆರೆಗಳು ಒತ್ತುವರಿಯಾಗಿದೆ. 
ಭೂ ದಾಖಲೆಗಳ ಮಾಪನ ಇಲಾಖೆಯ ಅಧಿಕಾರಿಗಳು ಕೆರೆಗಳ ಒತ್ತುವರಿ ಸರ್ವೇ ನಡೆಸಿ, ಜಿಲ್ಲಾಡಳಿತಕ್ಕೆ ವರದಿ ನೀಡಿದೆ. ಆದರೂ ಕೆರೆಗಳ ಒತ್ತುವರಿ ತೆರವುಗೊಳಿಸದೇ ಕೆಲ ಕಡೆ ಹಿಂದೇಟು ಹಾಕಲಾಗುತ್ತಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಬಲವಾಗಿದೆ.
ಒತ್ತುವರಿ ಜಾಗದಲ್ಲಿ ಶಾಲೆ ನಿರ್ಮಾಣ
ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ ಕೆರೆಗಳ ಸುತ್ತಮುತ್ತಲೂ ಕೃಷಿ ಜಮೀನುಗಳಿದ್ದು, ಕೆರೆಯನ್ನೇ ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿರುವ ಬಹಳಷ್ಟು ಉದಾಹರಣೆಗಳು ಸಿಗುತ್ತಿವೆ. ಸಾಕಷ್ಟು ಜನರು ಕೆರೆಯನ್ನೇ ಸೇರಿಸಿಕೊಂಡು ತೋಟಗಳನ್ನು ಮಾಡಿಕೊಂಡಿದ್ದಾರೆ. ಮೈಸೂರು ನಗರದಲ್ಲೇ ಕೆರೆ ಅಚ್ಚುಕಟ್ಟು ಪ್ರದೇಶವನ್ನೇ ಒತ್ತುವರಿ ಮಾಡಿಕೊಂಡು ಪೆಟ್ರೋಲ್ ಬಂಕ್, ಶಾಲೆಗಳು, ಜಮೀನು ಮಾಡಿಕೊಂಡು ದುಡ್ಡು ಮಾಡಿಕೊಂಡಿದ್ದಾರೆ. 

ಸ್ಥಳೀಯ ಸಂಸ್ಥೆಗಳ ಉಸ್ತುವಾರಿ

40 ಹೆಕ್ಟೇರ್‌ಕ್ಕಿಂತ(100 ಎಕರೆ) ಕಡಿಮೆ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕೆರೆಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುತ್ತವೆ. 40 ಹೆಕ್ಟೇರ್‌ರಿಂದ 2000 ಹೆಕ್ಟೇರ್ ವರೆಗೆ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕೆರೆಗಳು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಕೆಲ ಕೆರೆಗಳು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇರುತ್ತವೆ. ಅವುಗಳ ಉಸ್ತುವಾರಿ, ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಯಿಂದಲೇ ಕೈಗೊಳ್ಳಲಾಗುತ್ತಿದೆ.

ಕಾಳಜಿ ವಹಿಸಬೇಕು ಗ್ರಾಪಂಗಳು

ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಬಗ್ಗೆ ಗ್ರಾಪಂ ಅಧಿಕಾರಿಗಳೇ ಕಾಳಜಿ ವಹಿಸಬೇಕು. ಕೆರೆಗಳು ಒತ್ತುವರಿಯಾಗದಂತೆ ತಡೆಯುವುದು ಅವರ ಆದ್ಯ ಕರ್ತವ್ಯ. ಸರ್ವೆ ಮೂಲಕ ಕೆರೆ ವ್ಯಾಪ್ತಿಯ ಬಗ್ಗೆ ಮಾಹಿತಿ ಪಡೆದು ತಂತಿ ಬೇಲಿ ಅಳವಡಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಸಬೇಕಿದೆ. ಕೆರೆಗಳು ಒತ್ತುವರಿಯಾಗದಂತೆ ತಡೆಯಲು ಆಯಾ ಗ್ರಾಮ ಪಂಚಾಯಿತಿಗೆ ಹೊಣೆಗಾರಿಕೆಯನ್ನು ನಿಗದಿ ಪಡಿಸಬೇಕಿದೆ.

ಕೆರೆ ಜೀರ್ಣೋದ್ಧಾರ ಅಡೆತಡೆ

ಕೆರೆಗಳ ಅಭಿವೃದ್ಧಿ ಸಂದರ್ಭದಲ್ಲಿ ಒತ್ತುವರಿ ಸಮಸ್ಯೆ ಸಾಕಷ್ಟು ಕಾಡುತ್ತಿದೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಊರಿನ ಮುಖಂಡರ ನಿರ್ಧಾರದ ಮೇರೆಗೆ ಒತ್ತುವರಿ ಪ್ರದೇಶ ಬಿಟ್ಟು, ಉಳಿದ ಕೆರೆ ಪ್ರದೇಶವನ್ನು ಜೀರ್ಣೋದ್ಧಾರ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಉಸ್ತುವಾರಿ ಇಲಾಖೆಗಳ ಮೂಲಕ ಕಂದಾಯ ಇಲಾಖೆಯ ಸಹಯೋಗದೊಂದಿಗೆ ತೆರವುಗೊಳಿಸುವ ಕ್ರಮ ವಹಿಸಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಚಿಸಿರುವ ಜಿಲ್ಲಾ ಕೆರೆ ಸಂರಕ್ಷಣಾ ಸಮಿತಿಯ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದೂ ತಿಳಿಸಿದರು.
"

ಜಿಲ್ಲೆಯಲ್ಲಿರುವ ಕೆರೆಗಳ ಸರ್ವೇ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ಕೆರೆಗಳ ಒತ್ತುವರಿ ತೆರವು ಕೆಲಸ ಸಹ ಶೇ.80ರಷ್ಟಾಗಿದೆ. ಬಾಕಿ ಉಳಿದಿರುವ ಒತ್ತುವರಿ ತೆರವು ಕೆಲಸವನ್ನು ಇನ್ನು ಮೂರ‌್ನಾಲ್ಕು ತಿಂಗಳಿನಲ್ಲಿ ಮಾಡಿ ಮುಗಿಸಲಾಗುವುದು.

"

ಕೆರೆಗಳ ಉಳಿಸಿಕೊಳ್ಳಲು ಸ್ಥಳೀಯ ಜನರೇ ಸಂಕಲ್ಪ ಮಾಡಬೇಕು. ತಮ್ಮೊಳಗೆ ಕೆರೆ ಸಂರಕ್ಷಣಾ ಸಮಿತಿಯೊಂದನ್ನು ರಚನೆ ಮಾಡಿಕೊಂಡು ಹೋರಾಟ ರೂಪಿಸಬೇಕು. ಆಗಲೇ ಆಡಳಿತ ವ್ಯವಸ್ಥೆ, ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ. ಭೂಗಳ್ಳರು ಹೆದರುತ್ತಾರೆ. ನಿಗಾ, ಮೇಲ್ವಿಚಾರಣೆ ವಹಿಸುವ ಮೂಲಕ ಕೆರೆ ಒತ್ತುವರಿಯ ತಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net