ಇಳುವರಿ, ಮಣ್ಣಿನ ಫಲವತ್ತತೆ ಹೆಚ್ಚಳಕ್ಕೆ ಉತ್ತೇಜನ

 ಕೃಷಿ ಇಲಾಖೆ
ಕೃಷಿ ಇಲಾಖೆ
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಇಲಾಖೆಯಿಂದ ರೈತರಿಗೆ ಮಾಹಿತಿ ಕೈಪಿಡಿ
  • ಅನ್ನದಾತರಿಗೆ ಅನುಕೂಲ
ಅವಿನಾಶ್ ಜೈನಹಳ್ಳಿ ಮೈಸೂರು
ಮಣ್ಣಿನ ಫಲವತ್ತತೆ ಹೆಚ್ಚಿಸಲು ಕಾಂಪೋಸ್ಟ್, ಎರೆಹುಳು ಗೊಬ್ಬರ ಮತ್ತು ಹಸಿರೆಲೆ ಗೊಬ್ಬರಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು... ರೈತರು ತಮ್ಮ ನಾಟಿ ಸಮಯದಲ್ಲಿ ಬಿತ್ತಿದ ಬೆಳೆಗೆ ಯಾವ ಪ್ರಮಾಣದಲ್ಲಿ ಯೂರಿಯಾ, ಎಸ್‌ಎಸ್‌ಪಿ, ಎಂಒಪಿ ಎಷ್ಟು ಪ್ರಮಾಣದಲ್ಲಿ ನೀಡಬೇಕು...?
ಹೀಗೆ ರೈತರ ಹತ್ತಾರ ಪ್ರಶ್ನೆಗಳಿಗೆ ಮೈಸೂರು ಕೃಷಿ ಇಲಾಖೆ ಸಮರ್ಪಕ ಪರಿಹಾರ ಹುಡುಕಿದೆ. ಇಡೀ ರಾಜ್ಯದಲ್ಲೇ ಮೈಸೂರು ಕೃಷಿ ಇಲಾಖೆ ಮಾದರಿಯತ್ತ ಹೆಜ್ಜೆ ಇಟ್ಟಿದ್ದು ರೈತರಿಗೆ ಅನುಕೂಲವಾಗುವ ಒಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ರೈತರು ಬಿತ್ತನೆ ಮಾಡಿದ ಬೆಳೆಗಳಿಗೆ ಅಗತ್ಯವಿರುವ ರಸಗೊಬ್ಬರ, ಆರೈಕೆ ಸೇರಿದಂತೆ ಪೋಷಕಾಂಶಗಳ ನಿರ್ವಹಣೆ ಕುರಿತ ಕೈಪಿಡಿ ಹೊರತಂದಿದೆ.
ಸಾಮಾನ್ಯವಾಗಿ ರೈತರು, ರಸಗೊಬ್ಬರ ಮಾರಾಟಗಾರರು ಅನುಭವಿಸುವ ಮಾಹಿತಿ ಕೊರತೆಯನ್ನು ಗಮನದಲ್ಲಿರಿಸಿಕೊಂಡ ಮೈಸೂರು ಕೃಷಿ ಇಲಾಖೆ ಇದೇ ಮೊದಲ ಬಾರಿಗೆ ಯಾವ್ಯಾವ ಬೆಳೆಗೆ, ಎಷ್ಟು ಪ್ರಮಾಣದ, ಯಾವ ಗೊಬ್ಬರ ಮತ್ತು ಪೋಷಕಾಂಶ ನೀಡಬೇಕು ಜತೆಗೆ ಬೆಳೆಗಳ ನಿರ್ವಹಣಾ ಕ್ರಮ ಹೇಗಿರಬೇಕು ಎಂಬುದರ ಪಟ್ಟಿಯನ್ನು ಪ್ರಕಟಿಸಿದೆ. ಸದರಿ ಪಟ್ಟಿಯಲ್ಲಿ ಎಲ್ಲ ರಸಗೊಬ್ಬರ ಅಂಗಡಿಗಳಿಗೆ ನೀಡಿದೆ.
ಬಹುಪಾಲು ರೈತರಿಗೆ ಉತ್ತಮ ಇಳುವರಿ ಮತ್ತು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಬೇಕಿರುವ ಪೋಷಕಾಂಶದ ಮಾಹಿತಿ ಕೊರತೆ ಇದೆ. ಬೆಳೆ ನಿರ್ವಹಣೆಯಲ್ಲಿ ರೈತರು ಅನುಸರಿಸಬೇಕಾದ ಕ್ರಮಗಳು ಪ್ರಮುಖವಾಗಿದ್ದು, ಪ್ರತಿ ಬೆಳೆಯ ಆರಂಭದಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿ. ಮಣ್ಣಿನ ಫಲವತ್ತತೆ ಹೆಚ್ಚಿಸಲು ಕಾಂಪೋಸ್ಟ್, ಎರೆಹುಳು ಗೊಬ್ಬರ ಮತ್ತು ಹಸಿರೆಲೆ ಗೊಬ್ಬರಗಳನ್ನು ಬಳಸುವುದು, ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಲು ಹನಿ ನೀರಾವರಿ ಅಥವಾ ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವುದು, ಕಳೆಗಳು ಬೆಳೆಗೆ ಸಿಗಬೇಕಾದ ಪೋಷಕಾಂಶ ಮತ್ತು ನೀರನ್ನು ಕಸಿದುಕೊಳ್ಳುತ್ತವೆ. ಹೀಗಾಗಿ ನಿಯಮಿತವಾಗಿ ಕಳೆಗಳನ್ನು ತೆಗೆಯುವುದು, ಕೃಷಿ ತಜ್ಞರ ಸಲಹೆಯ ಮೇರೆಗೆ ಕೀಟ ಮತ್ತು ರೋಗ ನಿರ್ವಹಣೆಗಾಗಿ ಸೂಕ್ತ ಔಷಧಗಳನ್ನು ಸಿಂಪಡಿಸುವುದು ಸೇರಿದಂತೆ ಬಿತ್ತನೆ ಸಂದರ್ಭ ಹಾಗೂ ನಂತರದ ದಿನಗಳಲ್ಲಿ ರಸಗೊಬ್ಬರವನ್ನು ಯಾವ ಬೆಳೆಗೆ, ಯಾವ್ಯಾವ ಪ್ರಮಾಣದಲ್ಲಿ ನೀಡಬೇಕೆಂಬ ಅಗತ್ಯವುಳ್ಳ ಮಾಹಿತಿಯನ್ನು ಕೃಷಿ ಇಲಾಖೆ ಪ್ರಕಟಿಸಿದೆ.

ಉತ್ತಮ ಇಳುವರಿಗೆ ಅನುಕೂಲ

ರೈತರು ನಾಟಿ ಸಮಯದಲ್ಲಿ ಬಿತ್ತಿದ ಬೆಳೆಗೆ ಯಾವ ಪ್ರಮಾಣದಲ್ಲಿ ಮೂಲ ಗೊಬ್ಬರವಾದ ಯೂರಿಯಾ, ಎಸ್‌ಎಸ್‌ಪಿ, ಎಂಒಪಿ ಎಷ್ಟು ಪ್ರಮಾಣದಲ್ಲಿ ನೀಡುವುದು, 6ನೇ ವಾರಕ್ಕೆ, 10 ನೇ ವಾರಕ್ಕೆ 14ನೇ ವಾರಕ್ಕೆ ಯಾವ ಗೊಬ್ಬರವನ್ನು ಎಷ್ಟು ಪ್ರಮಾಣದಲ್ಲಿ ಎಕರೆಗೆ ನೀಡಬೇಕೆಂಬುದನ್ನು ನಮೂದಿಸಲಾಗಿದೆ. ಇದು ರೈತರಿಗೆ ಪ್ರಯೋಜನಕಾರಿಯಾಗಿದ್ದು ಕೃಷಿ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯಂತೆ ಬೆಳೆಯಲ್ಲಿ ಪೋಷಕಾಂಶ ನಿರ್ವಹಣೆ ಮಾಡಿದ್ದಲ್ಲಿ ಉತ್ತಮ ಇಳುವರಿ ಪಡೆಯಬಹುದಾಗಿದೆ.

ಒಂಬತ್ತು ಬೆಳೆಗಳು

ಜಿಲ್ಲೆಯ ಪ್ರಧಾನ ಬೆಳೆಗಳಾದ ಕಬ್ಬು, ಭತ್ತ, ರಾಗಿ, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ, ಅಲಸಂದೆ, ಅವರೆ, ಹೆಸರು ಮತ್ತು ಉದ್ದು ಬೆಳೆಗಳಲ್ಲಿ ನೀರು ಮತ್ತು ಪೋಷಕಾಂಶ ನಿರ್ವಹಣೆ ಬಗ್ಗೆ ಸಮಗ್ರಮ ಮಾಹಿತಿ ಒದಗಿಸಿದ್ದು, ನಿಗದಿತ ಅವಧಿಗೆ ಬೇಕಿರುವ ರಸಗೊಬ್ಬರ ಮತ್ತು ಅದರ ಪ್ರಮಾಣವನ್ನು ನಮೂದಿಸಲಾಗಿದೆ.

ಮಾರಾಟಗಾರರಿಗೆ ತಪ್ಪಿದ ಗೊಂದಲ

ಈಗಾಗಲೇ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದ್ದು, ರೈತರು ರಸಗೊಬ್ಬರ ಖರೀದಿಗೆ ಅಂಗಡಿಗಳಿಗೆ ತೆರಳಿದಾಗ ಅಲ್ಲಿ ತಮಗೆ ಅಗತ್ಯವಿರುವ ರಸಗೊಬ್ಬರ ಇಲ್ಲದಿದ್ದಾಗ, ಬದಲಿಯಾಗಿ ಯಾವ ರಸಗೊಬ್ಬರ ನೀಡಬೇಕು ಎಂಬ ಗೊಂದಲ ಮಾರಾಟಗಾರರಲ್ಲಿ ಉಂಟಾಗುತ್ತಿತ್ತು. ಒಂದು ವೇಳೆ ಪರ್ಯಾಯವಾಗಿ ಬೇರೊಂದು ಗೊಬ್ಬರ ನೀಡಿದರೂ ರೈತರು ಒಪ್ಪುತ್ತಿರಲಿಲ್ಲ. ಇದರಿಂದ ಗೊಂದಲ ಉಂಟಾಗುತ್ತಿತ್ತು. ಈಗ ಕೃಷಿ ಇಲಾಖೆಯು ಜಿಲ್ಲಾಡಳಿತದ ಸಹಯೋಗದಲ್ಲಿ ಹೊರತಂದಿರುವ ಮಾರ್ಗಸೂಚಿಯಂತೆ ಅಗತ್ಯವಿರುವ ಗೊಬ್ಬರ ಮತ್ತು ಪರ್ಯಾಯವಾಗಿ ಯಾವ ಗೊಬ್ಬರವನ್ನು ವಿತರಿಸಲು ಸುಲಭವಾಗಿದೆ. ಜಿಲ್ಲೆಯಲ್ಲಿ 1,064 ರಸಗೊಬ್ಬರ ಮಾರಾಟಗಾರರು ಇದ್ದು, ಅವರ ಮಳಿಗೆಗಳಲ್ಲಿ ಮಾರ್ಗಸೂಚಿ ಅಳವಡಿಸುವ ಜತೆಗೆ ರೈತ ಸಂಘಗಳು, ತಾಲೂಕು ಕಚೇರಿ ಹಾಗೂ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿರುವ ಇಲಾಖೆ ಕಚೇರಿ, ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿಯೂ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಕೈಪಿಡಿ ಒದಗಿಸಲಾಗಿದೆ.

ಶೇ.43 ಮಳೆ ಕೊರತೆ

ವಾತಾವರಣದಲ್ಲಿನ ತಾಪಮಾನ ಹೆಚ್ಚಳ, ಪೂರ್ವ ಮುಂಗಾರು ಕೊರತೆಯಿಂದ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಸೊರಗಿದ್ದು, ನಿಗದಿತ ಅವಧಿಯಲ್ಲಿ ಬೆಳೆ ಮಾಡಲಾಗದೆ ರೈತರು ಹೈರಣಾಗಿದ್ದಾರೆ. ವರ್ಷದ ಆರಂಭದಲ್ಲಿ ಪೂರ್ವ ಮುಂಗಾರು ಕೊರತೆ ಮತ್ತು ವಾತಾವರಣದಲ್ಲಿನ ಉಷ್ಣಾಂಶದಿಂದ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ನೆಲಕಚ್ಚಿದ್ದು, ಶೇ.23.85ರಷ್ಟು ಮಾತ್ರ ಬಿತ್ತನೆಯಾಗಿದೆ. ಮಳೆ ಕೊರತೆಯಿಂದ ಕೃಷಿಭೂಮಿ ಹದ ಮಾಡಿಕೊಳ್ಳಲು ಸಾಧ್ಯವಾಗದೆ ಹತ್ತಿ, ತಂಬಾಕು, ಜೋಳ, ಅಲಸಂದೆ, ತೊಗರಿ, ಹತ್ತಿ ಬಿತ್ತನೆಯಾಗಿಲ್ಲ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ತಂಬಾಕು, ಹೆಸರು, ಉದ್ದು, ಅಲಸಂದೆ, ಹೈಬ್ರಿಡ್ ಜೋಳ, ಸೂರ್ಯಕಾಂತಿ, ಭತ್ತ, ರಾಗಿ, ಮುಸುಕಿನ ಜೋಳ ಬೆಳೆಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಪ್ರಸ್ತುತ 89,840 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಆದರೆ, ಕಳೆದ ಸಾಲಿನಲ್ಲಿ ಇದೇ ಸಂದರ್ಭ 1,78,637 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಕೆಲವೆಡೆ ತಂಬಾಕು ಕಟಾವು ಕಾರ್ಯವೂ ಆರಂಭವಾಗಿತ್ತು. ಮುಂಗಾರು ಪೂರ್ವ 198.1 ಮಿಲಿ ಮೀಟರ್ ಮಳೆ ಅಗತ್ಯವಿದ್ದು, 114.6 ಮಿಲಿ ಮೀ. ಮಳೆಯಷ್ಟೇ ಬಿದ್ದಿದೆ. ಒಟ್ಟಾರೆ ಜನವರಿಯಿಂದ ಮೇ 28ರವರೆಗೆ ಶೇ.43 ಮಳೆ ಕೊರತೆಯಾಗಿದೆ.

ಅಗತ್ಯಕ್ಕಿಂತ ಹೆಚ್ಚು ದಾಸ್ತಾನು

ಪ್ರಸ್ತುತ ಜಿಲ್ಲೆಯ ರೈತ ಸಂಪರ್ಕ ಕೇಂದ್ರ, ಕೆಎಸ್‌ಎಸ್‌ಸಿಗಳಲ್ಲಿ ಭತ್ತ, ರಾಗಿ, ಮುಸುಕಿನ ಜೋಳ, ಹೆಸರು, ಅಲಸಂದೆ, ಉದ್ದು, ತೊಗರಿ, ಸೂರ್ಯಕಾಂತಿ ಸೇರಿದಂತೆ ವಿವಿಧ ಆಹಾರ ಧಾನ್ಯಗಳ 28 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ಅಗತ್ಯವಿದೆ. ಸದ್ಯಕ್ಕೆ 50 ಸಾವಿರ ಕ್ವಿಂಟಾಲ್ ದಾಸ್ತಾನಿದೆ. ಹಾಗೆಯೇ ರಸಗೊಬ್ಬರ 2,194 ಮೆಟ್ರಿಕ್ ಟನ್ ಅಗತ್ಯವಿದ್ದು, ಪ್ರಸ್ತುತ 46,790 ಮೆಟ್ರಿಕ್ ಟನ್ ಜಿಲ್ಲೆಯಲ್ಲಿ ದಾಸ್ತಾನಿದೆ. ಉಳಿದಂತೆ ಬೇಡಿಕೆ ಅನುಸಾರ ರೈತ ಸಂಪರ್ಕ ಕೇಂದ್ರ, ಕೆಎಸ್‌ಎಸ್ಸಿ, ಎನ್‌ಎಸ್ಸಿಗಳಲ್ಲಿ ಪೂರೈಕೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
ಜಿಲ್ಲೆಗೆ 8,453 ಮೆಟ್ರಿಕ್ ಟನ್ ಯೂರಿಯೂ ಅಗತ್ಯವಿದ್ದರೆ 13,571 ಮೆಟ್ರಿಕ್ ಟನ್ ದಾಸ್ತಾನಿದೆ. 2,317 ಮೆಟ್ರಿಕ್ ಟನ್ ಬೇಕಿರುವ ಡಿಎಪಿ 5,577 ಮೆಟ್ರಿಕ್ ಟನ್ ಲಭ್ಯವಿದೆ. 1,406 ಮೆಟ್ರಿಕ್ ಟನ್ ಪೊಟ್ಯಾಷ್ ಅಗತ್ಯವಿರುವಲ್ಲಿ 2,094ಮೆಟ್ರಿಕ್ ಟನ್ ದಾಸ್ತಾನಿದೆ.
"

ರೈತರು ಮತ್ತು ರಸಗೊಬ್ಬರ ಮಾರಾಟಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಮೈಸೂರು ಕೃಷಿ ಇಲಾಖೆ ಜಿಲ್ಲಾಡಳಿತದ ಸಹಯೋಗದೊಂದಿಗೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ಪುಸ್ತಕ (ಕೈಪಿಡಿ) ಪ್ರಕಟಿಸಿದೆ. ಗೊಬ್ಬರ ಮಾರಾಟಗಾರರು ಮತ್ತು ರೈತ ಕೇಂದ್ರ, ಇಲಾಖೆ ಕಚೇರಿಗಳಿಗೆ ತಲುಪಿಸುವ ಕೆಲಸ ಮಾಡಲಾಗಿದೆ.

— ಕೆ.ಎಚ್.ರವಿ, ಜಂಟಿ ಕೃಷಿ ನಿರ್ದೇಶಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net