ವಿವೇಕಾನಂದ ವಿಚಾರಧಾರೆಯನ್ನು ಮೈಗೂಡಿಸಿಕೊಳ್ಳಿ

ಸ್ವಾಮಿ ವಿವೇಕಾನಂದ
ಸ್ವಾಮಿ ವಿವೇಕಾನಂದ
Published on
ಮೈಸೂರು: ಅಸಹಿಷ್ಣತೆ, ದ್ವೇಷವನ್ನು ಬಿಟ್ಟು ಎಲ್ಲ ಭಾರತೀಯರು ಒಂದಾಗಬೇಕೆಂಬ ಸಮಾನತೆ ಸಂದೇಶ ಸಾರಿದ ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೇಳಿದರು.
ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನ, ವಿವೇಕಾನಂದ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ವಿವೇಕಾನಂದನಗರದ ವಿವೇಕಾನಂದ ವೃತ್ತದಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲ ಧರ್ಮ, ಧರ್ಮೀಯರನ್ನು ಗೌರವಿಸಿ, ಪ್ರೀತಿಸಬೇಕೆಂಬ ಚಿಂತನೆ ಬಿತ್ತಿದ ಸ್ವಾಮಿ ವಿವೇಕಾನಂದರು, ಅಸಮಾನತೆ, ಅಸ್ಪಶ್ಯತೆ ಆಚರಣೆ, ದಲಿತರ ಮೇಲಿನ ದೌರ್ಜನ್ಯವನ್ನು ಬಹಿರಂಗವಾಗಿ ಖಂಡಿಸಿದರು.
 ದಲಿತರು ಸಹ ಸಮಾಜ ಮುಖ್ಯವಾಹಿನಿಗೆ ಬರಬೇಕೆಂಬ ಆಶಯವನ್ನು ಹೊಂದಿದ್ದರು ಎಂದರು.
ಸ್ವಾಮಿ ವಿವೇಕಾನಂದರ ಸಮಾನತೆ ಚಿಂತನೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಕಾನೂನಾತ್ಮಕವಾಗಿ ಅಳವಡಿಕೆ ಮಾಡುವ ಮೂಲಕ ಜಾರಿಗೆ ತಂದರು. ಈಗಿನ ಸಾಮಾಜಿಕ ಜಾಲ ತಾಣಗಳಿಂದ ಛಿದ್ರವಾಗಿರುವ ಯುವ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸವಾಗಬೇಕಿದೆ ಎಂದರು.
ಶ್ರೀ ರಾಮಕೃಷ್ಣ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ಸಮಾಜ ನೈತಿಕ ಅಧಃಪತನದತ್ತ ಮುಖ ಮಾಡಿದೆ. ಮೌಲ್ಯಗಳು ನಶಿಸುತ್ತಿವೆ. ಸ್ವಾಮಿ ವಿವೇಕಾನಂದರಂತಹ ಮಹನೀಯರ ಜಯಂತಿಗೂ ಜನರು ಬರಲ್ಲ. ಅದೇ ಸಿನಿಮಾ ನಟ-ನಟಿಯರ ಕಾರ್ಯಕ್ರಮಕ್ಕೆ ಮುಗಿಬೀಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಜಾತೀಯತೆ, ಮತೀಯವಾದ, ಕೋಮುವಾದ, ಅಧರ್ಮ ಕುದಿಯುತ್ತಿದೆ. ಜಾಗತಿಕ ಮಟ್ಟದಲ್ಲೂ ಯುದ್ಧ, ಅಶಾಂತಿ, ವಿಸ್ತರಣಾವಾದ ವಿಜೃಂಭಿಸುತ್ತಿದೆ. ಬಸವಣ್ಣ, ಸ್ವಾಮಿ ವಿವೇಕಾನಂದ, ಗಾಂಧಿ, ಅಂಬೇಡ್ಕರ್‌ನಂತಹ ಮಹನೀಯರೂ ಇಲ್ಲವಾಗಿದ್ದಾರೆ.
 ಅವರೊಂದಿಗೆ ಅವರ ಚಿಂತನೆಗಳು ಮರೆಯಾಗುತ್ತಿವೆ. ಮಠಗಳು ಆಯಾಯ ಜಾತಿಗೆ ಅಷ್ಟೇ ಸೀಮಿತವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಹಿಂದೆದಿಗಿಂತಲೂ ಹೆಚ್ಚು ಜಾಗೃತವಾಗಬೇಕಿದೆ ಎಂದರು.
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸತತ 14 ಗಂಟೆ ಕಾಲ ವಿವೇಕಾನಂದರ ವಿಚಾರ ಮಂಡನೆ ಮಾಡಿದ ಬಾಲಕ ಚೇತನ್‌ಕುಮಾರ್ ಮಾತನಾಡಿದರು.
ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಜಯಾನಂದಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಟಿ.ಎಸ್.ಶ್ರೀವತ್ಸ, ಸಮಿತಿಯ ಬೂಕನಕೆರೆ ವಿಜೇಂದ್ರ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net