ಮೈಸೂರಿನ ರಾಜಬೀದಿಯಲ್ಲಿ ಕಣ್ಮನ ಸೆಳೆದ ಗಜಪಡೆ ತಾಲೀಮು

ಭಾರ ಹೊತ್ತು ಸಾಗಿದ ಮಹೇಂದ್ರ ಆನೆಯನ್ನು ಹಿಂಬಾಲಿಸಿದ ಗಜಪಡೆ
ಭಾರ ಹೊತ್ತು ಸಾಗಿದ ಮಹೇಂದ್ರ ಆನೆಯನ್ನು ಹಿಂಬಾಲಿಸಿದ ಗಜಪಡೆ
Published on

ಪ್ರಮುಖ ಮುಖ್ಯಾಂಶಗಳು

  • ಮಹೇಂದ್ರ ಆನೆ 450 ಕೆಜಿ ತೂಕ ಹೊತ್ತು ಯಶಸ್ವಿ
  • ಧನಂಜಯ, ಪ್ರಶಾಂತ, ಏಕಲವ್ಯನಿಗೂ ಅಭ್ಯಾಸ
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಗೆ  ಭಾರ ಹೊರುವ ತಾಲೀಮು ಶುರು ಮಾಡಲಾಯಿತು.
ಮಹೇಂದ್ರ ಆನೆ 450 ಕೆಜಿ ತೂಕ ಹೊತ್ತು ಯಶಸ್ವಿಯಾಗಿ ಮೊದಲ ದಿನ ಅಭ್ಯಾಸವನ್ನು ಪೂರ್ಣಗೊಳಿಸಿತು. ಮುಂದಿನ ದಿನಗಳಲ್ಲಿ ಧನಂಜಯ, ಪ್ರಶಾಂತ, ಏಕಲವ್ಯ ಆನೆಗಳಿಗೂ ಭಾರ ಹೊರಿಸುವ ಮೂಲಕ ಸಜ್ಜುಗೊಳಿಸಲಾಗುತ್ತದೆ.
ಅರಮನೆ ಆವರಣದಲ್ಲಿರುವ ಕೋಡಿಸೋಮೇಶ್ವರ ದೇಗುಲದ ಆವರಣದಲ್ಲಿ ಸಂಪ್ರದಾಯದಂತೆ ಭಾನುವಾರ ಸಂಜೆ 4ಕ್ಕೆ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಾಲೀಮಿಗೆ ಚಾಲನೆ ಕೊಡಲಾಯಿತು. ಗಜಗಳಿಗೆ ಕಬ್ಬು, ಹಣ್ಣುಹಂಪಲು ನೀಡಲಾಯಿತು. ಬಳಿಕ ಮಹೇಂದ್ರ ಆನೆಗೆ ನಮ್ದಾ, ಗಾದಿ ಕಟ್ಟಲಾಯಿತು. 50 ಕೆಜಿ ತೂಕದ 9 ಮರಳಿನ ಮೂಟೆಗಳನ್ನು ಹೊರಿಸಲಾಯಿತು. ಮಹೇಂದ್ರ ಆನೆಯ ಪಕ್ಕ ಕುಮ್ಕಿ ಆನೆಯಾಗಿ ಲಕ್ಷ್ಮೀ ಮತ್ತು ಕಾವೇರಿ ಸಾಥ್ ನೀಡಿದವು.
ಸಂಜೆ 5.30ಕ್ಕೆ ಅರಮನೆಯಿಂದ ಬಲರಾಮ ದ್ವಾರದ ಮೂಲಕ ಹೊರಟ ಗಜಪಡೆ ರಸ್ತೆ ಬದಿಯ ಜಮಾವಣೆಗೊಂಡ ಜನರ ಗಮನ ಸೆಳೆಯಿತು. ಜಂಬೂಸವಾರಿ ಸಾಗುವ ಮಾರ್ಗವಾದ ಕೆ.ಆರ್.ವೃತ್ತ, ಸಯ್ಯಜಿರಾವ್ ವೃತ್ತ, ಆಯುರ್ವೇದಿಕ್ ಆಸ್ಪತ್ರೆ, ಹಳೇ ಆರ್.ಎಂ.ಸಿ ವೃತ್ತ, ಹೈವೇ ವೃತ್ತ ಮಾರ್ಗವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದ ವರೆಗೆ ಸಾಗಿತು. ಮರಳಿ ಅದೇ ಮಾರ್ಗವಾಗಿ ವಾಪಸಾಗಿ ಅರಮನೆಗೆ ಬಂದಿತು. 
ಮೊದಲ ದಿನದ ಭಾರ ಹೊರುವ ತಾಲೀಮು ಸುಸೂತ್ರವಾಗಿ ನೆರವೇರಿತು. ಮಹೇಂದ್ರ ಆನೆ ಯಾವುದೇ ಅಳುಕಿಲ್ಲದೇ ಲಕ್ಷ್ಮೀ ಮತ್ತು ಕಾವೇರಿ ಆನೆಗಳೊಂದಿಗೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತ ಮುಂದೆ ಸಾಗಿತು. ಮಹೇಂದ್ರ ಹಿಂಬಾಲಿಸಿದ ಏಕಲವ್ಯ, ಗೋಪಿ, ಪ್ರಶಾಂತ, ಶ್ರೀರಾಮ ಮತ್ತು ಧನಂಜಯ ಆನೆಗಳೂ ಸಹ ಹೆಜ್ಜೆ ಹಾಕಿದವು.
ದಸರಾ ಗಜಪಯಣ ಮೂಲಕ ಮೊದಲ ತಂಡದಲ್ಲಿ 9 ಆನೆಗಳನ್ನು ಮೈಸೂರಿಗೆ ಕರೆತಂದಿದ್ದು, ಇದರಲ್ಲಿ ಶ್ರೀಕಂಠ ಆನೆಯನ್ನು ತಾಲೀಮಿನಿಂದ ಹೊರಗಿಟ್ಟು, ಉಳಿದ ಎಲ್ಲ ಆನೆಗಳಿಗೂ ಭಾರ ಹೊರುವ ತಾಲೀಮು ನಡೆಸಲಾಯಿತು.
ಜಂಬೂ ಸವಾರಿಗಾಗಿ ಗಜಪಡೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಆನೆಗಳಿಗೆ ನಿತ್ಯ 5 ರಿಂದ 6 ಕಿ.ಮೀ. ನಡೆಸಲಾಗುತ್ತದೆ. ಇದರಿಂದ ಗಾಬರಿಯಾಗುವುದು ಕಡಿಮೆಯಾಗುತ್ತದೆ. ಜನರು, ದೀಪದ ಬೆಳಕಿಗೂ ಬೆದರದಂತೆ ಮಾನಸಿಕವಾಗಿ, ದೈಹಿಕವಾಗಿ ತಯಾರು ಮಾಡಲಾಗುತ್ತದೆ. ನಗರದ ವಾತಾವರಣಕ್ಕೆ ಹೊಂದಿಕೊಳ್ಳಲು ನೆರವಾಗುತ್ತದೆ.
‘ಮುಂದಿನ ದಿನಗಳಲ್ಲಿ ಧನಂಜಯ, ಪ್ರಶಾಂತ, ಏಕಲವ್ಯ ಆನೆಗಳಿಗೂ ಭಾರ ಹೊರುವ ತಾಲೀಮನ್ನು ನಡೆಸಲಾಗುತ್ತದೆ. 
ಶೀಘ್ರದಲ್ಲೇ 2ನೇ ತಂಡದ ಆನೆಗಳನ್ನು ಕರೆತರಲಾಗುತ್ತದೆ. ಸೋಮವಾರ ತಾಲೀಮು ಇರುವುದಿಲ್ಲ’ ಎಂದು ಡಿಸಿಎಫ್ ಐ.ಬಿ.ಪ್ರಭುಗೌಡ ತಿಳಿಸಿದರು. ಈ ಸಂದರ್ಭದಲ್ಲಿ ಆರ್‌ಎಫ್‌ಒ ಯಾಷ್ಮಾ ಪೊನ್ನಣ್ಣ, ಪಶುವೈದ್ಯ ಆದರ್ಶ ಇದ್ದರು.
ಆನೆ ನೋಡಲು ಜನದಟ್ಟಣೆ:
ಗಜಪಡೆಯ ತಾಲೀಮು ವೀಕ್ಷಿಸಲು ರಾಜಬೀದಿಯಲ್ಲಿ ಸಾವಿರಾರು ಜನರು ಜಮಾಯಿಸಿದ್ದರಿಂದ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ನಗರದ ಹೊರಭಾಗಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ದೌಡಾಯಿಸಿದ್ದರು.
 ಇದರಿಂದ ನಿರೀಕ್ಷೆ ಮೀರಿ ಜನದಟ್ಟಣೆ ನೆರೆದಿತ್ತು. ಆನೆಗಳನ್ನು ನೋಡಿ ಅವುಗಳ ಫೋಟೋ ಮತ್ತು ವಿಡಿಯೋ ತೆಗೆಯಲು ಮುಗಿಬಿದ್ದರು. ಈ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net