ಕೃಷಿ ಪರಿಕರಗಳ ಮಾರಾಟಗಾರರ ಸಮಸ್ಯೆ ಪರಿಹಾರಕ್ಕೆ ಯತ್ನ:ಸಚಿವ ಎನ್.ಚಲುವರಾಯಸ್ವಾಮಿ ಭರವಸೆ

ಮೈಸೂರು ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದಿಂದ ನಗರದಲ್ಲಿ ಆಯೋಜಿಸಿದ್ದ ಜಿಲ್ಲಾ ಸಮಾವೇಶದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಎನ್.ಚಲುವರಾಯಸ್ವಾಮಿ, ಡಾ.ವೆಂಕಟರಾಮರೆಡ್ಡಿ ಜೆ.ಪಾಟೀಲ, ಆರ್.ವೆಂಕಟೇಶ್,ಡಾ.ಕೆ.ಎಚ್.ರವಿ, ಎಚ್.ಎನ್.ನಾಗೇಂದ್ರ,  ಕೆ.ಜಿ.ವೆಂಕಟರಾಮನ್, ಬಿ.ಯಶವಂತಗೌಡ ಬಿ.ಸುಂಕದಾಳ್, ಬಿ.ಪಿ.ಶಿವಪ್ರಕಾಶ್, ಆಕ್ಷಯ್‌ಕುಮಾರ್ ಶರ್ಮ ಇತರರು ಇದ್ದರು.
ಮೈಸೂರು ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದಿಂದ ನಗರದಲ್ಲಿ ಆಯೋಜಿಸಿದ್ದ ಜಿಲ್ಲಾ ಸಮಾವೇಶದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಎನ್.ಚಲುವರಾಯಸ್ವಾಮಿ, ಡಾ.ವೆಂಕಟರಾಮರೆಡ್ಡಿ ಜೆ.ಪಾಟೀಲ, ಆರ್.ವೆಂಕಟೇಶ್,ಡಾ.ಕೆ.ಎಚ್.ರವಿ, ಎಚ್.ಎನ್.ನಾಗೇಂದ್ರ, ಕೆ.ಜಿ.ವೆಂಕಟರಾಮನ್, ಬಿ.ಯಶವಂತಗೌಡ ಬಿ.ಸುಂಕದಾಳ್, ಬಿ.ಪಿ.ಶಿವಪ್ರಕಾಶ್, ಆಕ್ಷಯ್‌ಕುಮಾರ್ ಶರ್ಮ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಪರಿಕರಗಳನ್ನು ಮಾರಾಟ ಮಾಡುವುದು ಅತ್ಯಂತ ಜವಾಬ್ದಾರಿಯುತ ಕೆಲಸ
  • ಸಬ್ಸಿಡಿ ವಸ್ತುಗಳನ್ನು ರೈತರಿಗೆ ತಲುಪುವಂತೆ ನೋಡಿಕೊಳ್ಳುವ ಜವಾಬ್ದಾರಿ ಮಾರಾಟಗಾರರ ಮೇಲಿದೆ
ಮೈಸೂರು: ಕೃಷಿ ಪರಿಕರಗಳ ಮಾರಾಟಗಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡುವುದಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.
ಮೈಸೂರು ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದಿಂದ ನಗರದ ಇಸ್ಕಾನ್‌ನ ಶ್ರೀಧಾಮ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ವಾರ್ಷಿಕ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷಿ ಪರಿಕರಗಳನ್ನು ಮಾರಾಟ ಮಾಡುವುದು ಅತ್ಯಂತ ಜವಾಬ್ದಾರಿಯುತ ಕೆಲಸ. ಇದರಲ್ಲಿ ಏನಾದರೂ ವ್ಯತ್ಯಾಸವಾದರೆ ಬೆಳೆ ಹೋಗಿ ರೈತರ ಬದುಕು, ಜನರಿಗೆ ಆಹಾರದ ಸಮಸ್ಯೆ ತಲೆದೋರುತ್ತದೆ. ಆದ್ದರಿಂದ ಬಹಳ ಜವಾಬ್ದಾರಿಯುತವಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು.
ಭಾರತ ಕೃಷಿ ಪ್ರಧಾನವಾದ ದೇಶವಾಗಿದ್ದು, ಸ್ವಾತಂತ್ರೃ ಕಾಲದಲ್ಲಿ ಶೇ.80ರಿಂದ 90ರಷ್ಟು ಜನರು ಕೃಷಿಯನ್ನೇ ನಂಬಿದ್ದರು. ಈಗ ಐಟಿ-ಬಿಟಿ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಜನರು ದುಡಿಯುತ್ತಿರುವುದರಿಂದ ಕೃಷಿ ಮಾಡುವವರು ಶೇ.60ಕ್ಕೆ ಇಳಿದಿದೆ. ಆದರೂ ಶೇ.50ಕ್ಕಿಂತ ಹೆಚ್ಚಿನ ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಕೃಷಿ ಸಂಶೋಧನೆಗಳು, ಸರ್ಕಾರದ ಉತ್ತೇಜನಕಾರಿ ಯೋಜನೆಗಳಿಂದಾಗಿ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ದೇಶ ಈಗ ರಫ್ತು ಮಾಡುವ ಹಂತ ತಲುಪಿದೆ. ಹೊಸ ಹೊಸ ಸಂಶೋಧನೆಗಳು ಇದಕ್ಕೆ ಕಾರಣ ಎಂದರು.
ಸಂಘಟನೆ ಇಲ್ಲದಿದ್ದರೆ ಯಾವುದೇ ಸಮುದಾಯಗಳಿಗೆ ಧ್ವನಿ ಇಲ್ಲವಂತಾಗುತ್ತದೆ. ಸಂಘಟನೆ ಆಗುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು. ಸಿಎ ನಿವೇಶನ ಸೇರಿದಂತೆ ವಿವಿಧ ಬೇಡಿಕೆ ಈಡೇರುಸವಂತೆ 20 ಬೇಡಿಕೆಗಳ ಪಟ್ಟಿಯನ್ನು ಸರ್ಕಾರದ ಮುಂದೆ ಇಡಲಾಗಿದೆ. ಸಿಎ ನಿವೇಶನ ನೀಡುವ ಸಂಬಂಧ ಜಿಲ್ಲಾಧಿಕಾರಿ, ಎಂಡಿಎ ಆಯುಕ್ತರಿಗೆ ತಿಳಿಸಲಾಗುವುದು. ಅಲ್ಲದೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಯೂರಿಯ ಸೇರಿದಂತೆ ಇನ್ನಿತರ ಸಬ್ಸಿಡಿ ವಸ್ತುಗಳನ್ನು ರೈತರಿಗೆ ತಲುಪುವಂತೆ ನೋಡಿಕೊಳ್ಳುವ ಜವಾಬ್ದಾರಿ ಮಾರಾಟಗಾರರ ಮೇಲೆ ಇದೆ. ಹುಣಸೂರು, ನಂಜನಗೂಡು ಸೇರಿದಂತೆ ಹಲವು ಕಡೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವವರು ಸಿಕ್ಕಿ ಬಿದ್ದಿದ್ದಾರೆ. ಇದು ರೈತರಿಗೆ ಮಾಡುವ ಘೋರ ಅನ್ಯಾಯ. ಸರ್ಕಾರ ನೀಡುವ ಸಬ್ಸಿಡಿ ರೈತರಿಗೆ ನಿಮ್ಮ ಮನಃಸಾಕ್ಷಿಗೆ ಅನುಗುಣವಾಗಿ ನೇರ ತಲುಪಿಸಿ. ಇಲ್ಲವಾದರೆ ಕಾನೂನು ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.
ರಾಜ್ಯ ಸೆಕಂಡರಿ ಕೃಷಿ ನಿರ್ದೇಶನಾಲಯದ ನಿರ್ದೇಶಕ ಡಾ.ವೆಂಕಟರಾಮರೆಡ್ಡಿ ಜೆ.ಪಾಟೀಲ ಮಾತನಾಡಿ, ಕೃಷಿ ಪರಿಕರಗಳ ಮಾರಾಟಗಾರರ ಕೆಲಸ ದೇವರ ಕೆಲಸ ಇದ್ದಂತೆ. ನೀವು ನೇರವಾಗಿ ರೈತರೊಂದಿಗೆ ಸಂಪರ್ಕ ಇಟ್ಟುಕೊಂಡಿರುವುದರಿಂದ ನಿಮ್ಮ ಸಲಹೆ, ಮಾರ್ಗದರ್ಶನ ಅತಿ ಮುಖ್ಯ ಎಂದರು.
ಕೆಲ ಕಂಪನಿಗಳು ಕೊಡುವ ಅಮಿಷಗಳಿಗೆ ಬಲಿಯಾಗಿ ದೇಶಕ್ಕೆ ಅನ್ನ ನೀಡುವ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಒಂದು ವಸ್ತು ಮಾತ್ರ ಬೇಕಿದ್ದರೂ ವ್ಯಾಪಾರ ದೃಷ್ಟಿಯಲ್ಲಿ ಹಲವು ಉತ್ಪನ್ನಗಳನ್ನು ಸೇರಿಸಿ ಕೊಡುವುದರಿಂದ ಬೆಳೆ ನಷ್ಟ, ಪರಿಸರ ಮಾಲಿನ್ಯದ ಜತೆಗೆ ರೈತರಿಗೂ ನಷ್ಟವಾಗುತ್ತದೆ. ಆದ್ದರಿಂದ ಸಾಮಾಜಿಕ ಕಾಳಜಿಯಿಂದ ಕಾರ್ಯನಿರ್ವಹಿಸಿ ಎಂದು ಹೇಳಿದರು.
ಅಗತ್ಯಕ್ಕಿಂತ ಹೆಚ್ಚಿನ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರ ಹಾಕದರೆ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಒಮ್ಮೆ ಮಣ್ಣಿನ ಫಲವತ್ತತೆ ಹಾಳಾದರೆ ಅದನ್ನು ಸರಿಪಡಿಸಲು ಬಹಳ ವರ್ಷಗಳೇ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮೈಸೂರು ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಆರ್.ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಧಾನಪರಿಷತ್ತಿನ ಮಾಜಿ ಸದಸ್ಯ ಅಪ್ಪಾಜಿಗೌಡ, ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಎಚ್.ರವಿ, ಜಾಗೃತದಳ ವಿಭಾಗದ ಜಂಟಿ ನಿರ್ದೇಶಕ ಡಾ.ಕೆ.ರಾಮಕೃಷ್ಣ, ಸಂಘದ ಕಾರ್ಯದರ್ಶಿ ಎಚ್.ಎನ್.ನಾಗೇಂದ್ರ, ಉಪಾಧ್ಯಕ್ಷ ಕೆ.ಜಿ.ವೆಂಕಟರಾಮನ್, ಖಜಾಂಚಿ ಬಿ.ಯಶವಂತಗೌಡ ಬಿ.ಸುಂಕದಾಳ್, ಗೌರವಾಧ್ಯಕ್ಷ ಬಿ.ಪಿ.ಶಿವಪ್ರಕಾಶ್, ಜಂಟಿ ಕಾರ್ಯದರ್ಶಿ ಅಕ್ಷಯ್‌ಕುಮಾರ್ ಶರ್ಮ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರು, ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net