ಮೀಸಲಾತಿಗೆ ಜಾತಿಗಿಂತ ಆರ್ಥಿಕತೆ ಮಾನದಂಡವಾಗಲಿ:ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯ
ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ತಾಲೂಕು ಘಟಕದಿಂದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಎನ್.ಸಂತೋಷ್ ಹೆಗ್ಡೆ ಉದ್ಘಾಟಿಸಿದರು. ಮಡ್ಡೀಕೆರೆ ಗೋಪಾಲ್, ಅಂಶಿ ಪ್ರಸನ್ನಕುಮಾರ್, ಡಾ.ವೈ.ಡಿ.ರಾಜಣ್ಣ, ಪ್ರೊ.ಎಂ.ಎಸ್. ಅನಿತಾ ಡಾ.ಕಾವ್ಯಶ್ರೀ, ವೆಂಕಟೇಶ್, ಜಾಕೀರ್ ಹುಸೇನ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಾತಿಯ ಕಾರಣಕ್ಕೆ ಪ್ರಭಾವಿ ರಾಜಕಾರಣಿಗಳ ಮಕ್ಕಳು, ರಾಷ್ಟ್ರಪತಿ ಮಕ್ಕಳಿಗೆ, ನ್ಯಾಯಾಧೀಶರ ಮಕ್ಕಳಿಗೆ ಮೀಸಲಾತಿ ಬೇಕಾ?
ಆಯಾ ಜಾತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಈ ಸೌಲಭ್ಯ ಸಿಗಬೇಕು
ಮೈಸೂರು:
ಮೀಸಲಾತಿ ದುರುಪಯೋಗವಾಗುವುದನ್ನು ತಪ್ಪಿಸಲು ಜಾತಿಗಿಂತ ಆರ್ಥಿಕತೆ ಮಾನದಂಡವಾಗಬೇಕು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ತಾಲೂಕು ಘಟಕದಿಂದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ‘ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಜಾತಿಯ ಕಾರಣಕ್ಕೆ ಪ್ರಭಾವಿ ರಾಜಕಾರಣಿಗಳ ಮಕ್ಕಳು, ರಾಷ್ಟ್ರಪತಿ ಮಕ್ಕಳಿಗೆ, ನ್ಯಾಯಾಧೀಶರ ಮಕ್ಕಳಿಗೆ ಮೀಸಲಾತಿ ಬೇಕಾ? ಅದೇ ಜಾತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಸಿಗಬೇಡವೇ ಎಂದು ಪ್ರಶ್ನಿಸಿದರು.
ಶೇ.75 ಜನ ಆರ್ಥಿಕವಾಗಿ ಸಬಲರಾಗಿರುವವರೇ ಮೀಸಲಾತಿ ಪಡೆಯುತ್ತಿದ್ದಾರೆ. ಇದು ತಪ್ಪಿ, ಆಯಾ ಜಾತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಈ ಸೌಲಭ್ಯ ಸಿಗಬೇಕು ಎಂದು ಹೇಳಿದರು.
ಸಮಾಜದಲ್ಲಿ ತಾರತಮ್ಯ ಇರಬಾರದು. ಪುರುಷ, ಮಹಿಳೆ, ಮೇಲು, ಕೀಳು ಎನ್ನುವುದು ಹೋಗಬೇಕು. ಯಾವುದೇ ಮೀಸಲಾತಿ ಇಲ್ಲದೇ ಮಹಿಳೆಯೊಬ್ಬರು 16 ವರ್ಷ ಪ್ರಧಾನಿಯಾಗಿ ದೇಶವನ್ನು ಆಳಿದ್ದಾರೆ. ಆದರೂ ಮಹಿಳೆಯರಿಗೆ ಸಿಗಬೇಕಾದ ಅವಕಾಶ ಇನ್ನೂ ಸಿಕ್ಕಿಲ್ಲ. ಆದ್ದರಿಂದ ಮಹಿಳೆಯರಿಗೂ ಅವಕಾಶ ನೀಡಬೇಕು ಎಂದು ಹೇಳಿದರು.
ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ರಾಜಕೀಯ ಮೀಸಲಾತಿ ಇಲ್ಲದಿದ್ದರೆ ಯಾವುದೇ ಪುರುಷರು, ಮಹಿಳೆಯರನ್ನು ಚುನಾವಣೆಗೆ ಸ್ಪರ್ಧಿಸಲು ಬಿಡುವುದಿಲ್ಲ. ಆದ್ದರಿಂದ ಮೀಸಲಾತಿ ಮೂಲಕವೇ ಅವರಿಗೆ ಅವಕಾಶ ನೀಡಬೇಕು ಎಂದರು.
ಮಹಿಳೆಯರಿಗೆ ಮೀಸಲಾತಿ ನೀಡಿದರೆ ಆಡಳಿತದಲ್ಲಿ ಭ್ರಷ್ಟಾಚಾರ ಕಡಿಮೆಯಾಗಬಹುದು. ಆದ್ದರಿಂದ ಸಮಾಜ ಸುಧಾರಣೆ, ಸ್ವಚ್ಛ ಆಡಳಿತಕ್ಕೆ ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಬೇಕು ಎಂದು ಹೇಳಿದರು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಕಾವ್ಯಶ್ರೀ, ‘ಮಹಿಳೆಯರಿಗೆ ಅವಕಾಶ ಮತ್ತು ಅರ್ಹತೆ ಸಿಗಬೇಕಾದರೆ ಮೀಸಲಾತಿ ಬೇಕು’ ಎಂಬ ವಿಷಯ ಮಂಡಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಪ್ರಾಂಶುಪಾಲೆ ಪ್ರೊ.ಎಂ.ಎಸ್.ಅನಿತಾ ಮಾತನಾಡಿದರು.
ಕಸಾಪ ಮೈಸೂರು ತಾಲೂಕು ಅಧ್ಯಕ್ಷ ಎ.ಸಿ.ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಡೈರಿ ವೆಂಕಟೇಶ್, ಉಪಾಧ್ಯಕ್ಷ ಜಾಕೀರ್ ಹುಸೇನ್, ಸಂಘಟನಾ ಕಾರ್ಯದರ್ಶಿಗಳಾದ ಪ್ರಶಾಂತ್ ಆರ್ಯ, ರದಿವುಲ್ಲಾ ಖಾನ್, ಮೈಸೂರು ತಾಲೂಕು ಅಧ್ಯಕ್ಷ ಸಾಲಿಗ್ರಾಮದ ಮಧುಚಂದ್ರ, ನಂಜನಗೂಡು ತಾಲೂಕು ಅಧ್ಯಕ್ಷೆ ಲತಾ ಮುದ್ದುಮೋಹನ್ ಮತ್ತಿತರರಿದ್ದರು.