ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬಾಲ್ಯ ಫೌಂಡೇಷನ್, ಮೈಸೂರು ನಗರಪಾಲಿಕೆ ಸಹಯೋಗದಲ್ಲಿ ಬುಧವಾರ ರೀ ಬೈಂಡ್ ಮಾಡಿದ ನೋಟ್ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು. ನಿತೀಶ್ ಪಾಟೀಲ್, ಬಿ.ಮಂಜುನಾಥ್, ರಮೇಶ್ ಉತ್ತಪ್ಪ, ಕೃಷ್ಣ, ರೇವಣ್ಣ, ರಮೇಶ್ ನರಸಯ್ಯ, ಡಾ.ವಿ.ಷಣ್ಮುಗಂ, ಕೆ.ಎಸ್.ಅನಿಲ್ ಇತರರು ಇದ್ದರು.
ಬಳಕೆಯಾಗದೆ ಉಳಿಯುವ ಖಾಲಿ ಪುಟಗಳು ಮತ್ತೊಬ್ಬರ ಶೈಕ್ಷಣಿಕ ಅಭ್ಯಾಸಕ್ಕೆ ದಾರಿ ದೀಪವಾಗಬಲ್ಲದು
ಮರು ಬಳಕೆಯಿಂದ ಮರಗಳ ಕಡಿಯುವ ಪ್ರಮಾಣ ತಗ್ಗುತ್ತದೆ
ಮೈಸೂರು:ನೋಟ್ ಪುಸ್ತಕಗಳ ಖಾಲಿ ಹಾಳೆಯನ್ನು ಮರು ಬಳಕೆ ಮಾಡುವುದರಿಂದ ಮರ ಕಡಿಯುವ ಪ್ರಮಾಣ ತಗ್ಗುತ್ತದೆ. ಹಾಗಾಗಿ ಇದೊಂದು ಪರಿಸರ ಸ್ನೇಹಿ ಅಭಿಯಾನವಾಗಿದೆ ಎಂದು ನಗರಪಾಲಿಕೆ ಆಡಳಿತಾಧಿಕಾರಿಯೂ ಆದ ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ ಹೇಳಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬಾಲ್ಯ ಫೌಂಡೇಷನ್, ಮೈಸೂರು ನಗರಪಾಲಿಕೆ ಸಹಯೋಗದಲ್ಲಿ ಪೀಪಲ್ಸ್ ಪಾರ್ಕ್‌ನಲ್ಲಿರುವ ನಗರ ಕೇಂದ್ರ ಗ್ರಂಥಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೋಟ್ ಪುಸ್ತಕಗಳ ಬಳಕೆಯಾಗದ ಹಾಳೆಗಳನ್ನು ರೀಬೈಂಡ್ ಮಾಡಿ ನಾನಾ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.
ನೋಟ್ ಪುಸ್ತಕಗಳಲ್ಲಿ ಬಳಕೆಯಾಗದೆ ಉಳಿಯುವ ಖಾಲಿ ಪುಟಗಳು ಮತ್ತೊಬ್ಬರ ಶೈಕ್ಷಣಿಕ ಅಭ್ಯಾಸಕ್ಕೆ ದಾರಿ ದೀಪವಾಗಬಲ್ಲದು. ಹಾಗಾಗಿ ಅಂತಹ ಖಾಲಿ ಪುಟಗಳನ್ನು ಸಂಗ್ರಹಿಸಿ ಅದನ್ನು ಮರು ಬಳಕೆಯಾಗುವಂತೆ ರೀ ಬೈಂಡಿಂಗ್ ಮಾಡಿ ಅವಶ್ಯಕತೆ ಇರುವ ಮಕ್ಕಳಿಗೆ ನೀಡುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.
ನೋಟ್ ಪುಸ್ತಕಗಳನ್ನು ಮರು ಬಳಕೆಗೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲವಾಗುವುದಿಲ್ಲ. ಮರು ಬಳಕೆಯಿಂದ ಮರಗಳ ಕಡಿಯುವ ಪ್ರಮಾಣ ತಗ್ಗುತ್ತದೆ. ಹಾಗಾಗಿ ಇದೊಂದು ಪರಿಸರ ಸ್ನೇಹಿ ಅಭಿಯಾನವಾಗಿದೆ ಎಂದು ಹೇಳಿದರು.
ಇದು ನಿರಂತರ ಕಾರ್ಯಕ್ರಮವಾಗಿದ್ದು, ಮಕ್ಕಳು ಬಳಕೆ ಮಾಡದೆ ಉಳಿದ ಖಾಲಿ ಹಾಳೆಗಳನ್ನು ಪಾಲಕರು ತಮ್ಮ ಹತ್ತಿರದ ಗ್ರಂಥಾಲಯಕ್ಕೆ ನೀಡುವ ಮೂಲಕ ಬೇರೆ ಮಕ್ಕಳ ಶಿಕ್ಷಣ ಮುಂದುವರಿಕೆಗೆ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.
ಇತ್ತೀಚೆಗೆ ಮಕ್ಕಳ ಮೊಬೈಲ್, ಕಂಪ್ಯೂಟರ್ ನೀಡುವ ಸ್ಕ್ರೀನ್ ಟೈಂ ಹೆಚ್ಚಾಗುವುದರಿಂದ ಅವರ ನೆನಪಿನ ಶಕ್ತಿ ಕಡಿಮೆಯಾಗುತ್ತಿದೆ. ಹಾಗಾಗಿ ಮಕ್ಕಳು ಮೊಬೈಲ್ ಬಳಕೆಯನ್ನು ಆದಷ್ಟು ತಗ್ಗಿಸಿ ಓದಿನ ಕಡೆ ಗಮನ ನೀಡಬೇಕು. ಮೊಬೈಲ್‌ನಲ್ಲಿ ಕಳೆಯುವ ಸಮಯವನ್ನು ಓದಿನ ಕಡೆ ವಿನಿಯೋಗಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಪತ್ರಕರ್ತ ರಮೇಶ್ ಉತ್ತಪ್ಪ, ನೋಟ್ ಪುಸ್ತಕಗಳ ಮರುಬಳಕೆ ಅಭಿಯಾನದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕ ಬಿ.ಮಂಜುನಾಥ್, ಬಿಇಒಗಳಾದ ಕೃಷ್ಣ, ರೇವಣ್ಣ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ರಮೇಶ್ ನರಸಯ್ಯ, ಮಹಾರಾಜ ಕಾಲೇಜು ಪ್ರಾಂಶುಪಾಲ ಡಾ.ವಿ.ಷಣ್ಮುಗಂ, ಬಾಲ್ಯ ಫೌಂಡೇಷನ್ ಸಂಸ್ಥಾಪಕ ಕೆ.ಎಸ್. ಅನಿಲ್ ಇತರರು ಇದ್ದರು.
ನಗರದ ಸಿಎಸ್‌ಐ ವಿಕ್ಟೋರಿಯಾ ಶಾಲೆ, ಗಾಡಿಚೌಕ ಹಿರಿಯ ಪ್ರಾಥಮಿಕ ಶಾಲೆ, ಮಹಾಜನ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮರು ಬಳಕೆಗೆ ನೀಡಲಾಯಿತು.