ಮಧುಮೇಹ ನಿಯಂತ್ರಣಕ್ಕೆ ಆರಂಭಿಕ ಕ್ರಮ ಅಗತ್ಯ: ಮಣಿಪಾಲ್ ಆಸ್ಪತ್ರೆಯಿಂದ ಆರೋಗ್ಯ ಸಮಾವೇಶ

ಮಧುಮೇಹ
Published on: 

ಮೈಸೂರು: ವಿಶ್ವ ಮಧುಮೇಹ ದಿನದ ಅಂಗವಾಗಿ ಮೈಸೂರಿನ ಮಣಿಪಾಲ್ ಆಸ್ಪತ್ರೆಯು ನ.15ರಂದು (ಭಾನುವಾರ) ‘ಮಧುಮೇಹದ ವಿರುದ್ಧ ಮುನ್ನೆಚ್ಚರಿಕೆ ಕ್ರಮ’ (Early Action on Diabetes) ವಿಷಯದಡಿ ವಿಶೇಷ ಆರೋಗ್ಯ ಸಮಾವೇಶ ಆಯೋಜಿಸಿದೆ.

ಮಧುಮೇಹದ ಹೆಚ್ಚುತ್ತಿರುವ ಸಮಸ್ಯೆ, ಆರಂಭಿಕ ಹಂತದಲ್ಲಿಯೇ ರೋಗವನ್ನು ಪತ್ತೆಹಚ್ಚುವ ಮಹತ್ವ ಹಾಗೂ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವ ಅಗತ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಸಮಾವೇಶದಲ್ಲಿ ತಜ್ಞ ವೈದ್ಯರು ಮಧುಮೇಹದ ಮುನ್ನೆಚ್ಚರಿಕೆ ಕ್ರಮಗಳು, ನಿಯಮಿತ ಆರೋಗ್ಯ ತಪಾಸಣೆಯ ಮಹತ್ವ, ರೋಗ ನಿಯಂತ್ರಣ ಹಾಗೂ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವ ಕುರಿತು ಮಾಹಿತಿ ನೀಡಲಿದ್ದಾರೆ. ಮಧುಮೇಹವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಅದರ ತೀವ್ರತೆ ಮತ್ತು ಸಂಭವನೀಯ ತೊಡಕುಗಳನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗುವುದು.

ಆಸ್ಪತ್ರೆಯ ಎಂಡೋಕ್ರೈನಾಲಜಿ ವಿಭಾಗದ ಹಿರಿಯ ಸಲಹೆಗಾರರಾದ ಡಾ. ರೇಖಾ ವಿ. ಭಟ್, ಜನರಲ್ ಮೆಡಿಸಿನ್ ವಿಭಾಗದ ಹಿರಿಯ ಸಲಹೆಗಾರ ಡಾ. ಸತೀಶ್ ಕುಮಾರ್ ಎಂ.ಜಿ. ಹಾಗೂ ಸಹಾಯಕ ಸಲಹೆಗಾರರಾದ ಡಾ. ದೃಶ್ಯ ಅಪ್ಪಚ್ಚು ಬಿ. ಮತ್ತು ಡಾ. ಅಭಿಲಾಷ್ ಎನ್. ಪಾಲ್ಗೊಂಡು ಆರೋಗ್ಯ ಸಲಹೆಗಳನ್ನು ನೀಡಲಿದ್ದಾರೆ.

ನ.15ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಮಣಿಪಾಲ್ ಆಸ್ಪತ್ರೆಯ ಆವರಣದಲ್ಲಿ ಸಮಾವೇಶ ನಡೆಯಲಿದ್ದು, ಬಳಿಕ ಊಟದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಉಚಿತ ನೋಂದಣಿ ಮಾಡಿಕೊಳ್ಳಬಹುದು. ಆಸನಗಳ ಸಂಖ್ಯೆ ಸೀಮಿತವಾಗಿದ್ದು, ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ 96206 33255 ಸಂಪರ್ಕಿಸುವಂತೆ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.