ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿಯಿಂದ ಶನಿವಾರ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜ್ಞಾನೇಶ್ ಕುಮಾರ್, ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆರ್‌ಎಸ್‌ಎಸ್ ಸಮವಸ್ತ್ರವನ್ನು ಜ್ಞಾನೇಶ್ ಕುಮಾರ್ ಕಚೇರಿಗೆ ಅಂಚೆ ಮೂಲಕ ಕಳಿಸಿದರು.
ಭಾರತೀಯ ಯುವ ಕಾಂಗ್ರೆಸ್‌ನ ಕೇರಳ ಉಸ್ತುವಾರಿ ನಾಗೇಶ್ ಕರಿಯಪ್ಪ ಮಾತನಾಡಿ, 2023ರಲ್ಲಿ ಜ್ಞಾನೇಶ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸುವಾಗ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೊರಗಿಟ್ಟು ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತದೆ. ತಕ್ಷಣ ಸಂಸತ್‌ನಲ್ಲಿ ಚುನಾವಣಾ ಆಯುಕ್ತರ ಮೇಲೆ ಪ್ರಕರಣ ದಾಖಲಿಸಬಾರದು ಎಂಬ ಪ್ರಸ್ತಾವನೆ ಮಂಡಿಸಲಾಗುತ್ತದೆ. ಅದರ ಉದ್ದೇಶ ಈಗ ಬಯಲಾಗಿದೆ ಎಂದರು.
ಇಬ್ಬರು ಚುನಾವಣಾ ಆಯುಕ್ತರು ಆರು ತಿಂಗಳಿನಿಂದ ಜ್ಞಾನೇಶ್ ಕುಮಾರ್ ತೀರ್ಮಾನಗಳನ್ನು ವಿರೋಧಿಸುತ್ತಾ ಬಂದಿದ್ದಾರೆ. ಈ ಬಗ್ಗೆ ಸಂಪುಟ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ. ಆದರೆ, ಜ್ಞಾನೇಶ್ ಆರ್‌ಎಸ್‌ಎಸ್, ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ತಮ್ಮ ಸಹ ಆಯುಕ್ತರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸರ್ವಾಧಿಕಾರಿ ಧೋರಣೆ ತಳೆದಿದ್ದಾರೆ. ಹೀಗಾಗಿ ಕೂಡಲೇ ಜ್ಞಾನೇಶ್ ಕುಮಾರ್ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತು ಕೇಳಿ ದೇಶದ ಜನರಿಗೆ ತೊಂದರೆ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಾಗೃತ ಯುವ ಸಮೂಹ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಆರಂಭಿಸುತ್ತದೆ. ಜ್ಞಾನೇಶ್ ಅವರ ವಿರುದ್ಧ ಕಾನೂನು ಕ್ರಮ ಆಗಲೇಬೇಕು ಎಂದು ಒತ್ತಾಯಿಸಿದರು.