ಮತ್ತೆ ಡ್ರಗ್ಸ್ ಪತ್ತೆ: ಜನರಲ್ಲಿ ಆತಂಕ

 ಡ್ರಗ್ಸ್ ಪ್ರಕರಣ
ಡ್ರಗ್ಸ್ ಪ್ರಕರಣ
Published on

ಪ್ರಮುಖ ಮುಖ್ಯಾಂಶಗಳು

  • ಎನ್‌ಸಿಬಿ ತಂಡದಿಂದ ರಹಸ್ಯ ಕಾರ್ಯಾಚರಣೆ
  • ಆರೋಪಿಯನ್ನು ಬಂಧಿಸಿ, ದೆಹಲಿಗೆ ಕರೆದೊಯ್ದರು
ಮೈಸೂರು: ನಗರದಲ್ಲಿ ಮತ್ತೊಂದು ಡ್ರಗ್ಸ್ ಪ್ರಕರಣ ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಬನ್ನಿಮಂಟಪದ ಬಳಿಕ ಇದೀಗ ಹೆಬ್ಬಾಳು ಕೈಗಾರಿಕೆ ಪ್ರದೇಶದಲ್ಲಿ ಮಾದಕ ದ್ರವ್ಯ ತಯಾರಿಕಾ ಘಟಕ ಪತ್ತೆಯಾಗಿದೆ.
 ಈ ಸಲ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ(ಎನ್‌ಸಿಬಿ) ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆಲನಹಳ್ಳಿ ನಿವಾಸಿ ಗಣಪತ್ ಲಾಲ್ ಎಂಬಾತನನ್ನು ಬಂಧಿಸಿ, ಕರೆದುಕೊಂಡು ಹೋಗಿದ್ದಾರೆ.
2025ರ ಜು.26ರಂದು ಬನ್ನಿಮಂಟಪದ ವರ್ತುಲ ರಸ್ತೆಯ ಉನ್ನತಿ ನಗರದ ಗ್ಯಾರೇಜ್‌ನಲ್ಲಿ ನಡೆಸುತ್ತಿದ್ದ ಮಾದಕ ವಸ್ತು ತಯಾರಿಕಾ ಘಟಕದ ಮೇಲೆ  ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಪೊಲೀಸ್ ಇಲಾಖೆಯು ತೀವ್ರ ಕಾರ್ಯಾಚರಣೆ ನಡೆಸಿತ್ತು. ಅದರ ನಡುವೆಯೂ ಮತ್ತೆ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದಿದೆ. 
ಈ ಸಲ ಮೈಸೂರಿನ ಡ್ರಗ್ಸ್ ಪ್ರಕರಣಕ್ಕೆ ರಾಜಸ್ತಾನದ ಪ್ರಕರಣದ ನಂಟು ಬೆಸೆದುಕೊಂಡಿದೆ. ಅದರ ಆಧಾರದ ಮೇಲೆ ಈ ದಾಳಿ ಇದೀಗ ನಡೆದಿದೆ.
ಸ್ಥಳೀಯರಾದ ಬೋರೇಗೌಡ ಎಂಬವರ ಒಡೆತನದ ಕಟ್ಟಡವನ್ನು, ಆಲನಹಳ್ಳಿ ನಿವಾಸಿ ಗಣಪತ್ ಲಾಲ್ ಬಾಡಿಗೆಗೆ ಪಡೆದಿದ್ದರು. ಅಲ್ಲಿ ಟುಕ್ ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ಮ್ಯಾನಿಫ್ಯಾಕ್ಚರಿಂಗ್ ಹೆಸರಿನ ಘಟಕ ನಡೆಸುತ್ತಿದ್ದರು.
ಡ್ರಗ್ಸ್ ಪ್ರಕರಣದ ಕುರಿತು ನಾಲ್ವರು ಆರೋಪಿಗಳನ್ನು ರಾಜಸ್ತಾನದಲ್ಲಿ ಬಂಧಿಸಿದ್ದು, ಅದರಲ್ಲಿ ಮನೋಹರ್ ಬಿಷ್ಣೋಯಿ ಎಂಬಾತ ಸ್ಥಳೀಯ ಆರೋಪಿ ಗಣಪತ್ ಲಾಲ್ ಹತ್ತಿರದ ಸಂಬಂಧಿಕಯಾಗಿದ್ದಾನೆ. 
ಮನೋಹರ್ ಬಿಷ್ಣೋಯಿ  ನೀಡಿದ ಮಾಹಿತಿ ಆಧರಿಸಿ ದಾಳಿ ನಡೆದಿದೆ. ಕಟ್ಟಡದಲ್ಲಿ ಡ್ರಗ್ಸ್ ಉತ್ಪಾದಿಸಿ, ರಾಜಸ್ತಾನಕ್ಕೆ ಮಾರಾಟ ಮಾಡಲಾಗುತ್ತಿತ್ತು ಎಂಬುದು ತಿಳಿದುಬಂದಿದೆ.
ಎನ್‌ಸಿಬಿಯ 8 ಅಧಿಕಾರಿ ಹಾಗೂ ಸಿಬ್ಬಂದಿ ಎರಡು ಕಾರುಗಳಲ್ಲಿ ಗಣಪತಿ ಲಾಲ್ ಮನೆಗೆ ಹಾಗೂ ಹೆಬ್ಬಾಳದ ಘಟಕಕ್ಕೆ ಬುಧವಾರವೇ ದಾಳಿ ನಡೆಸಿದ್ದು, ದಾಳಿಯ ವೇಳೆ ಖಾಲಿ ಬಾಟಲಿ, ಕಾಸ್ಮಿಕ್ ಸೋಡಾ ಮತ್ತು ಉಪ್ಪು ಪತ್ತೆಯಾಗಿದೆ. ಆರೋಪಿಯನ್ನು ತೀವ್ರ ವಿಚಾರಣೆ ಒಳಪಡಿಸಿದ್ದರು.
ಬೋರೇಗೌಡರಿಗೆ ಕೆಐಡಿಬಿಯಿಂದ ಭೂಮಿ ಮಂಜೂರಾಗಿದೆ. ಗಣಪತ್ ಲಾಲ್ ಅವರು ಫಿನಾಯಿಲ್ ಘಟಕ ಆರಂಭಿಸಲು  5 ಲಕ್ಷ ರೂ. ಮುಂಗಡ ಪಾವತಿ ಹಾಗೂ 46 ಸಾವಿರ ರೂ. ತಿಂಗಳ ಬಾಡಿಗೆಗೆ ಒಪ್ಪಿ ಕರಾರು ಪತ್ರ ಮಾಡಲಾಗಿದೆ. ಹೈಟೆಕ್ ಯಂತ್ರಗಳನ್ನು ಅಳವಡಿಸಿದ್ದರೂ ಕೆಲಸ ಮಾತ್ರ ಶುರು ಮಾಡಿಲ್ಲ ಎಂಬುದು ಗೊತ್ತಾಗಿದೆ. 
ನಿರ್ಜನವಾದ ಪ್ರದೇಶದಲ್ಲಿರುವ ಕಟ್ಟಡದಲ್ಲಿ ರಾತ್ರಿ ವೇಳೆ ಹಿಂದಿ ಭಾಷಿಕರಾದ ಕೆಲವು ಯುವಕರು ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. 
ಬುಧವಾರವೇ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಕೆ.ಎಸ್.ಸುಂದರ್‌ರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ, ಎನ್‌ಸಿಬಿ ತಂಡವು ಸ್ಥಳೀಯ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.
 ಎನ್‌ಸಿಬಿ  ದೆಹಲಿ ಪೊಲೀಸರು ಗಣಪತ್ ಲಾಲ್‌ನನ್ನು ಗುರುವಾರ ಬಂಧಿಸಿ ನಗರದ 3ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಬಳಿಕ  ಹೊರರಾಜ್ಯಕ್ಕೆ ಕರೆದೊಯ್ಯಲು ಸಂಚಾರ(ಟ್ರಾವೆಲ್) ವಾರಂಟ್ ಪಡೆದು ನಗರದಿಂದ ತೆರಳಿದ್ದಾರೆ ಎಂಬುದು ತಿಳಿದು ಬಂದಿದೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net