

ಮೈಸೂರು ನಗರದ ಸ್ವಚ್ಛತೆ, ಸೌಂದರ್ಯ, ನಾಗರಿಕರ ಆರೋಗ್ಯ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಗರ ಪಾಲಿಕೆ ರೂಪಿಸಿರುವ ‘ಸ್ವಚ್ಛ ಮೈಸೂರು ನಮ್ಮ ಹೆಮ್ಮೆ, ಸ್ವಚ್ಛತೆ ನಮ್ಮ ಆದ್ಯತೆ’ ಎಂಬ ಸ್ವಚ್ಛತಾ ಲೋಗೋ ಮತ್ತು ಜನಜಾಗೃತಿ ಅಭಿಯಾನಕ್ಕೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು ಮೆಚ್ಚುಗೆ ವ್ಯಕ್ತಪಡಿಸಿ, ಪಾಲಿಕೆ ಆಯುಕ್ತೆ ಸವಿತಾ ಅವರನ್ನು ಅಭಿನಂದಿಸಿದ್ದಾರೆ.
ನಗರದ ಸ್ವಚ್ಛತೆ ಕಾಪಾಡುವ ಜತೆಗೆ ಸಾರ್ವಜನಿಕರಲ್ಲಿ ನಾಗರಿಕ ಜವಾಬ್ದಾರಿಯ ಅರಿವು ಮೂಡಿಸಲು ಕೈಗೊಂಡಿರುವ ಪ್ರಯತ್ನ ಶ್ಲಾಘನೀಯ. ಸರ್ಕಾರಿ ಇಲಾಖೆಗಳು, ಕಚೇರಿಗಳು, ಸಾರ್ವಜನಿಕ ಸ್ಥಳಗಳು ಹಾಗೂ ಜನಸಾಮಾನ್ಯರ ನಡುವೆ ಒಂದೇ ಸ್ವಚ್ಛತಾ ಲೋಗೋ ಮತ್ತು ಸಂದೇಶವನ್ನು ವ್ಯಾಪಕವಾಗಿ ಪ್ರಚುರಪಡಿಸುವುದರಿಂದ ಸ್ವಚ್ಛತೆಯ ಬಗ್ಗೆ ಸಾಮೂಹಿಕ ಜಾಗೃತಿ ಮೂಡಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶ್ವಪ್ರಸಿದ್ಧ ಸಾಂಸ್ಕೃತಿಕ ನಗರಿ ಮೈಸೂರು ಅರಮನೆ, ದಸರಾ ಮಹೋತ್ಸವ, ಐತಿಹಾಸಿಕ ಸ್ಮಾರಕಗಳು ಹಾಗೂ ಶ್ರೀಮಂತ ಪರಂಪರೆಯಿಂದ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಸ್ವಚ್ಛ ಪರಿಸರ, ಸುಗಮ ಸಂಚಾರ ಮತ್ತು ಉತ್ತಮ ನಾಗರಿಕ ಸೌಲಭ್ಯಗಳನ್ನು ಒದಗಿಸುವುದು ಅತ್ಯಗತ್ಯ. ಹೀಗಾಗಿ, ಸ್ವಚ್ಛತಾ ಲೋಗೋ ಕೇವಲ ಚಿಹ್ನೆಯಾಗದೆ ಮೈಸೂರಿನ ಸ್ವಚ್ಛತೆ ಮತ್ತು ನಾಗರಿಕ ಹೆಮ್ಮೆಯನ್ನು ಪ್ರತಿಬಿಂಬಿಸುವ ಜನಾಂದೋಲನದ ಸಂಕೇತವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ವಚ್ಛತೆ ಕೇವಲ ಮಹಾನಗರ ಪಾಲಿಕೆಯ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕ, ವ್ಯಾಪಾರಿ, ಕೈಗಾರಿಕೋದ್ಯಮಿ, ಹೋಟೆಲ್ ಮಾಲೀಕ, ಬೀದಿ ವ್ಯಾಪಾರಿ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರ ಸಾಮೂಹಿಕ ಕರ್ತವ್ಯವಾಗಿದೆ. ಸಾರ್ವಜನಿಕರ ಸಹಕಾರವಿದ್ದಾಗ ಮಾತ್ರ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದ್ದಾರೆ.
ದಸರಾ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳು, ಮಾರುಕಟ್ಟೆಗಳು, ಪ್ರವಾಸಿ ತಾಣಗಳು, ಹೋಟೆಲ್‌ಗಳು, ವಾಣಿಜ್ಯ ಪ್ರದೇಶಗಳು, ಬಸ್ ನಿಲ್ದಾಣಗಳು ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಪಾಲಿಕೆಯ ಸ್ವಚ್ಛತಾ ಲೋಗೋವನ್ನು ಸರ್ಕಾರಿ ಇಲಾಖೆಗಳು, ವಾಣಿಜ್ಯ ಸಂಸ್ಥೆಗಳು, ಕೈಗಾರಿಕಾ ಪ್ರದೇಶಗಳು ಹಾಗೂ ಸಾರ್ವಜನಿಕ ಸಂಘಟನೆಗಳ ಮೂಲಕ ವ್ಯಾಪಕವಾಗಿ ಪ್ರಚುರಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಿರುವುದು, ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ ಸೂಕ್ತವಾಗಿ ವಿಲೇವಾರಿ ಮಾಡುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ರಸ್ತೆ ಮತ್ತು ಚರಂಡಿಗಳ ಸ್ವಚ್ಛತೆ ಕಾಪಾಡುವುದು ಹಾಗೂ ಪ್ರವಾಸಿ ತಾಣಗಳ ಪರಿಸರವನ್ನು ಸಂರಕ್ಷಿಸುವ ಕುರಿತು ನಿರಂತರ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ನಗರ ಪಾಲಿಕೆ ಆಯುಕ್ತೆ ಸವಿತಾ ಅವರ ಈ ಉತ್ತಮ ಪ್ರಯತ್ನಕ್ಕೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಂಪೂರ್ಣ ಬೆಂಬಲವಿದೆ. ಮೈಸೂರನ್ನು ಸ್ವಚ್ಛ, ಸುಂದರ, ಆರೋಗ್ಯಕರ ಹಾಗೂ ಪ್ರವಾಸಿಗರ ಸ್ನೇಹಿ ನಗರವನ್ನಾಗಿ ರೂಪಿಸುವ ಕಾರ್ಯದಲ್ಲಿ ಸಾರ್ವಜನಿಕರು ಮತ್ತು ವಾಣಿಜ್ಯ ವಲಯದವರು ಸಕ್ರಿಯವಾಗಿ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
(ಲಿಂಗರಾಜು ಅವರ ಫೋಟೋ ಇದೆ////
ಚಿತ್ರ ಸಂಖ್ಯೆ...16
*ಡಾ.ಕೆ.ಬಿ.ಲಿಂಗರಾಜು