

ಮೈಸೂರು: ಜಾನಪದ ಗೀತೆಗಳ ಗಾಯನ, ಜನಪದ ಸಾಹಿತ್ಯದ ಪ್ರಸಾರ ಹಾಗೂ ಕನ್ನಡದ ನೆಲಮೂಲ ಸಂಸ್ಕೃತಿಯ ಪರಿಚಯದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಡಾ.ಕಾ.ರಾಮೇಶ್ವರಪ್ಪ ಅವರಿಗೆ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು.
ನಗರದ ಓವೆಲ್ ಮೈದಾನದಲ್ಲಿ ಭಾನವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿ ಇತರೆ ಗಣ್ಯರು ಪುರಸ್ಕರಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಡಾ.ಕಾ.ರಾಮೇಶ್ವರಪ್ಪ ಅವರು, ಜಾನಪದ ಕ್ಷೇತ್ರದಲ್ಲಿಯೂ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. 2022ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೈಸೂರಿನ ಇನಿದನಿ ಮಣ್ಣ ಮಕ್ಕಳ ಹೊನ್ನ ಪದಗಳ ಬಳಗದ ಮೂಲಕ ಜಾನಪದ ಗೀತೆಗಳು ಹಾಗೂ ಮಹಾಕಾವ್ಯಗಳ ಪರಂಪರೆಯನ್ನು ಜನರಿಗೆ ಪರಿಚಯಿಸುತ್ತಿದ್ದಾರೆ.
ಮೈಸೂರು ಅರಮನೆಯ ಯುಗಾದಿ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಜಾನಪದ ವೈಭವವನ್ನು ಪ್ರಸ್ತುತಪಡಿಸಿರುವ ಅವರು, ಮಲೆ ಮಹದೇಶ್ವರ ಹಾಗೂ ಧರೆಗೆ ದೊಡ್ಡವರ ಮಹಾಕಾವ್ಯಗಳ ಮಹತ್ವವನ್ನು ಜನರಿಗೆ ತಿಳಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಆಡಳಿತ ಸೇವೆಯ ಜತೆಗೆ ಜಾನಪದ ಪರಂಪರೆಯ ಸಂರಕ್ಷಣೆ ಮತ್ತು ಪ್ರಸಾರಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಅವರಿಗೆ ಈ ಗೌರವ ಸಂದಿದೆ.