ಪೆಲ್ವಿಕ್ ಫ್ಲೋರ್ ಸಮಸ್ಯೆ ನಿರ್ಲಕ್ಷಿಸದಿರಿ

 ಜೆಎಸ್‌ಎಸ್ ಫಿಸಿಯೋಥೆರಪಿ ಕಾಲೇಜಿನಲ್ಲಿ ಅಲ್ಟ್ರಾಸೌಂಡ್ ಮಾರ್ಗದರ್ಶಿತ ಪೆಲ್ವಿಕ್ ಭಾಗದ ವೈಫಲ್ಯಗಳ ತಪಾಸಣೆ ಮತ್ತು ಚಿಕಿತ್ಸೆ ಕುರಿತ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು. ಡಾ.ಸಿ.ಪಿ.ಮಧು, ಎಸ್.ಎನ್.ತೇಜಸ್ವಿನಿ, ಡಾ.ಕವಿತಾ ರಾಜಾ, ಡಾ.ವಿಕ್ರಮ್ ಪಾಟೀಲ್ ಇದ್ದರು.
ಜೆಎಸ್‌ಎಸ್ ಫಿಸಿಯೋಥೆರಪಿ ಕಾಲೇಜಿನಲ್ಲಿ ಅಲ್ಟ್ರಾಸೌಂಡ್ ಮಾರ್ಗದರ್ಶಿತ ಪೆಲ್ವಿಕ್ ಭಾಗದ ವೈಫಲ್ಯಗಳ ತಪಾಸಣೆ ಮತ್ತು ಚಿಕಿತ್ಸೆ ಕುರಿತ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು. ಡಾ.ಸಿ.ಪಿ.ಮಧು, ಎಸ್.ಎನ್.ತೇಜಸ್ವಿನಿ, ಡಾ.ಕವಿತಾ ರಾಜಾ, ಡಾ.ವಿಕ್ರಮ್ ಪಾಟೀಲ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ.ಮಧು ಸಲಹೆ

ಮಹಿಳೆಯರು ಮತ್ತು ಪುರುಷರು ಸಾಮಾಜಿಕ ಹಾಗೂ ವೈಯಕ್ತಿಕ ಕಾರಣಗಳಿಂದ ಪೆಲ್ವಿಕ್ ಫ್ಲೋರ್ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ.ಮಧು ಹೇಳಿದರು.

ಜೆಎಸ್‌ಎಸ್ ಫಿಸಿಯೋಥೆರಪಿ ಕಾಲೇಜಿನ ಮಹಿಳಾ ಆರೋಗ್ಯ ಮತ್ತು ಪೆಲ್ವಿಕ್ ಪುನರ್ವಸತಿ ವಿಭಾಗ ಹಾಗೂ ಜೆಎಸ್‌ಎಸ್ ಆಸ್ಪತ್ರೆಯ ವಿಕಿರಣಶಾಸ್ತ್ರ ವಿಭಾಗದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಅಲ್ಟ್ರಾಸೌಂಡ್ ಮಾರ್ಗದರ್ಶಿತ ಪೆಲ್ವಿಕ್ ಭಾಗದ ವೈಫಲ್ಯಗಳ ತಪಾಸಣೆ ಮತ್ತು ಚಿಕಿತ್ಸೆ ಕುರಿತ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪೆಲ್ವಿಕ್ ಫ್ಲೋರ್ ಸಮಸ್ಯೆಗಳಿಂದ ಶ್ರೋಣಿಯ ಸ್ನಾಯುಗಳು ದುರ್ಬಲಗೊಳ್ಳುವುದು ಅಥವಾ ಅತಿಯಾಗಿ ಬಿಗಿಯಾಗುವುದು ಸಂಭವಿಸುತ್ತದೆ. ಇದರಿಂದ ಕೆಮ್ಮುವಾಗ, ಸೀನುವಾಗ, ನಗುವಾಗ ಅಥವಾ ಓಡುವಾಗ ಮೂತ್ರ ಸೋರಿಕೆ, ಮಲಬದ್ಧತೆ, ಸೊಂಟ ನೋವು ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಗರ್ಭಕೋಶ ಅಥವಾ ಮೂತ್ರಕೋಶದ ಸ್ಥಾನಪಲ್ಲಟದಂತಹ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಗರ್ಭಧಾರಣೆ, ಹೆರಿಗೆ ಹಾಗೂ ವಯಸ್ಸಾಗುವಿಕೆ ಸೇರಿದಂತೆ ಹಲವು ಕಾರಣಗಳಿಂದ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ಸಾಮಾಜಿಕ ಮುಜುಗರ ಮತ್ತು ವೈಯಕ್ತಿಕ ಕಾರಣಗಳಿಂದ ಬಹುತೇಕರು ಸಮಸ್ಯೆಯನ್ನು ವೈದ್ಯರ ಬಳಿ ಹೇಳಿಕೊಳ್ಳದೆ ನಿರ್ಲಕ್ಷಿಸುತ್ತಾರೆ. ಇದು ಸಮಸ್ಯೆ ಮತ್ತಷ್ಟು ಗಂಭೀರವಾಗಲು ಕಾರಣವಾಗಬಹುದು ಎಂದರು.
ಸಮಸ್ಯೆ ಕಂಡುಬಂದಾಗ ಸೂಕ್ತ ವೈದ್ಯಕೀಯ ಮಾರ್ಗದರ್ಶನ ಪಡೆಯುವುದರ ಜತೆಗೆ ಫಿಸಿಯೋಥೆರಪಿ, ಅಲ್ಟ್ರಾಸೌಂಡ್ ಪರೀಕ್ಷೆ ಹಾಗೂ ಅಗತ್ಯವಿರುವ ಇತರ ವೈದ್ಯಕೀಯ ವಿಭಾಗಗಳ ತಜ್ಞರ ಸಹಯೋಗದೊಂದಿಗೆ ಬಹುಶಿಸ್ತೀಯ ಚಿಕಿತ್ಸಾ ವಿಧಾನ ಅನುಸರಿಸುವುದು ಅಗತ್ಯ ಎಂದರು.
ಎಸ್.ಎನ್.ತೇಜಸ್ವಿನಿ ಮಾತನಾಡಿ, ಅಲ್ಟ್ರಾಸೌಂಡ್ ತಂತ್ರಜ್ಞಾನ ಬಳಸಿ ಪೆಲ್ವಿಕ್ ಭಾಗದ ಕಾರ್ಯಕ್ಷಮತೆಯನ್ನು ನೋವಿಲ್ಲದೆ ಹಾಗೂ ನಿಖರವಾಗಿ ಪರಿಶೀಲಿಸುವ ಆಧುನಿಕ ವಿಧಾನಗಳ ಕುರಿತು ವಿವರಿಸಿದರು.
ಜೆಎಸ್‌ಎಸ್ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕವಿತಾ ರಾಜಾ ಮಾತನಾಡಿ, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ವೈದ್ಯಕೀಯ ಕ್ಷೇತ್ರದ ವಿವಿಧ ವಿಭಾಗಗಳ ಸಹಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಕಾರ್ಯಾಗಾರದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಸುಮಾರು 35 ಪ್ರತಿನಿಧಿಗಳು ಭಾಗವಹಿಸಿದ್ದರು. ಫಿಸಿಯೋಥೆರಪಿಸ್ಟ್‌ಗಳು, ಸ್ತ್ರೀರೋಗ ತಜ್ಞರು, ರೇಡಿಯಾಲಜಿಸ್ಟ್‌ಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಉಪಪ್ರಾಂಶುಪಾಲ ಡಾ.ವಿಕ್ರಮ್ ಪಾಟೀಲ್, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ.ಎಸ್.ಮಮತಾ, ಡಾ.ಸಚಿನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net