ಶಿಕ್ಷಣ ಮೊಟಕುಗೊಳಿಸಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಡಿ

  ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು. ಕೆ.ಹರೀಶ್‌ಗೌಡ, ಡಾ.ಪವಿತ್ರಾ ಆರ್ ಪ್ರಭಾಕರ ರೆಡ್ಡಿ, ನೀಲಾ,  ರಮೇಶ್(ರಮಣಿ),  ನಾರಾಯಣ್,  ಕೆ.ಕೆಂಡಗಣ್ಣ ವಿಶ್ವಕರ್ಮ ಇನ್ನಿತರರಿದ್ದರು.
ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು. ಕೆ.ಹರೀಶ್‌ಗೌಡ, ಡಾ.ಪವಿತ್ರಾ ಆರ್ ಪ್ರಭಾಕರ ರೆಡ್ಡಿ, ನೀಲಾ, ರಮೇಶ್(ರಮಣಿ), ನಾರಾಯಣ್, ಕೆ.ಕೆಂಡಗಣ್ಣ ವಿಶ್ವಕರ್ಮ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಾಲ್ಯವಿವಾಹದಿಂದ ಹೆಣ್ಣುಮಕ್ಕಳ ಭವಿಷ್ಯ ನಾಶ
ಮೈಸೂರು: ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಅವರ ಬದುಕು ಹಾಳು ಮಾಡಬೇಡಿ ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ಜಿಲ್ಲಾ ವಿಶ್ವಕರ್ಮ ಯುವ ಜಾಗೃತ ವೇದಿಕೆ ವತಿಯಿಂದ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲಿಯುತ್ತಿರುವ ಹೆಣ್ಣು ಮಕ್ಕಳಿಗೆ ವಿವಾಹ ಮಾಡಿ ಅನೇಕ ಪಾಲಕರು ತಮ್ಮ ಜವಾಬ್ದಾರಿ ಕಳೆದುಕೊಳ್ಳಲು ಪ್ರಯತ್ನಿಸುತ್ತಾರೆ. ಇದು ಸರಿಯಲ್ಲ. ಹೀಗೆ ಮಾಡಿದರೆ ತಮ್ಮ ಮಗಳ ಭವಿಷ್ಯ ಹಾಳಾಗುತ್ತದೆ. ಅದರ ಬದಲು ಉನ್ನತ ಶಿಕ್ಷಣ ಕಲಿಕೆಯನ್ನು ಮುಂದುವರಿಸಲು ಉತ್ತೇಜನ ನೀಡಿ ಅವರ ಬದುಕಿಗೆ ಬೆಳಕಾಗಬೇಕು ಎಂದು ಸಲಹೆ ನೀಡಿದರು.
ಹಿಂದೆ ಹೆಣ್ಣು ಮಕ್ಕಳಿಗೆ ಸಣ್ಣ ವಯಸ್ಸಿಗೆ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುತ್ತಿದ್ದರು. ಹೀಗಾಗಿಯೇ ಹಳೇ ತಲೆಮಾರಿನ ಅನೇಕ ವನಿತೆಯರು ಸಬಲೀಕರಣದಿಂದ ದೂರ ಉಳಿದಿದ್ದಾರೆ. ಆದರೀಗ ಕಾಲ ಬದಲಾಗಿದೆ. ಹೆಣ್ಣು ಮಕ್ಕಳಿಗೆ ಕಲಿಕೆಗೆ ಅವಕಾಶ ಕಲ್ಪಿಸಿಕೊಡಿ. ಆಕೆ ಸ್ವಾವಲಂಬನೆಯ ಬದುಕು ರೂಪಿಸಿಕೊಂಡರೆ ಆಕೆಯ ಕುಟುಂಬ, ಸಮಾಜ ಮತ್ತು ದೇಶವೂ ಅಭಿವೃದ್ಧಿಯಾಗಲಿದೆ ಎಂದರು.
ಪ್ರತಿಯೊಬ್ಬ ಮಹಿಳೆಯೂ ಸಬಲೀಕರಣಗೊಂಡು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬರಬೇಕು. ಇದು ಶಿಕ್ಷಣದಿಂದ ಮಾತ್ರ. ಅದಕ್ಕಾಗಿ ಶಿಕ್ಷಣ ಉನ್ನತೀಕರಣಕ್ಕೆ ಅವಕಾಶ ಕಲ್ಪಿಸಲು ವಿದ್ಯಾರ್ಥಿನಿಯರ ಹಾಸ್ಟೆಲ್ ಹೆಚ್ಚಿನ ಪ್ರಮಾಣದಲ್ಲಿ ನಿರ್ಮಿಸಬೇಕು. 
ಈ ನಿಟ್ಟಿನಲ್ಲಿ ನಗರದಲ್ಲಿ ವಿದ್ಯಾರ್ಥಿನಿಯರ ವಿದ್ಯಾರ್ಥಿನಿಲಯ ಸ್ಥಾಪನೆಗೆ ಆದ್ಯತೆ ಕೊಡಲಾಗಿದೆ. ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಪ್ರತ್ಯೇಕ ಕಾಲೇಜುಗಳ ಅಂದಾಜು 14,000 ವಿದ್ಯಾರ್ಥಿಗಳಿಗೆ 320 ಜನರಿಗೆ ಸ್ಥಳಾವಕಾಶ ಇರುವ ಹಾಸ್ಟೆಲ್ ಇತ್ತು. ಇದೀಗ 120 ಕೋಟಿ ರೂ.ವೆಚ್ಚದಲ್ಲಿ 3,600 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸುವ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಕಾಮಗಾರಿ ಶೇ.75ರಷ್ಟು ಪೂರ್ಣಗೊಂಡಿದೆ. ಪ್ರಸ್ತಕ ಸಾಲಿನಲ್ಲೇ ಉದ್ಘಾಟಿಸಿ ಈ ಸೌಲಭ್ಯ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದರು.
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ರೂ. ನೀಡುವುದರೊಂದಿಗೆ ಸ್ತ್ರೀ ಸಬಲೀಕರಣಕ್ಕೆ ಒತ್ತು ಕೊಡಲಾಗಿದೆ. ಪ್ರತಿ ಕಂತಿನ ಹಣ ಗ್ರಾಮಾಂತರ ಪ್ರದೇಶ ಮಹಿಳೆಯರ ಪಾಲಿಗೆ ದೊಡ್ಡ ಮೊತ್ತ. ಆ ದುಡ್ಡಿನಲ್ಲೇ ಬಹಳಷ್ಟು ಮಹಿಳೆಯರು ಒಂದು ತಿಂಗಳ ಬದುಕು ಸಾಗಿಸುತ್ತಿದ್ದಾರೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಾದ ಶಾಂತಮ್ಮ, ಎಚ್.ಎಸ್.ಸವಿತಾ, ಮಿನಾಕ್ಷಮ್ಮ, ನಾಗಮ್ಮ, ಸಿದ್ದಮ್ಮ, ಎಂ.ಎನ್.ಸಿದ್ದಮ್ಮ, ಎಂ.ಎನ್.ಗೀತಾ ಸೇರಿದಂತೆ ಇನ್ನಿತರ ಮಹಿಳೆಯರನ್ನು ಸನ್ಮಾನಿಸಲಾಯಿತು.
ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷೆಯರಾದ ಡಾ.ಪವಿತ್ರಾ ಆರ್. ಪ್ರಭಾಕರ ರೆಡ್ಡಿ, ನೀಲಾ, ಪಾಲಿಕೆ ಮಾಜಿ ಸದಸ್ಯ ರಮೇಶ್(ರಮಣಿ), ಬಿಲ್ಡರ್ ನಾರಾಯಣ್, ವೇದಿಕೆಯ ಅಧ್ಯಕ್ಷ ಕೆ.ಕೆಂಡಗಣ್ಣ ವಿಶ್ವಕರ್ಮ, ಉಪಾಧ್ಯಕ್ಷ ಎಲ್.ಸತೀಶ್, ಕಾರ್ಯದರ್ಶಿ ಟಿ.ಎ.ಸಿದ್ದರಾಜು ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net