ಎಚ್.ಡಿ.ಕೋಟೆ ತಾಲೂಕು ಸೋನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಉದ್ಘಾಟಿಸಿದರು. ಸಿ.ಎನ್.ರಾಜು, ಚಂದ್ರಶೇಖರ್, ಮಂಜುನಾಥ್, ಬೇಗ್, ನರಸಿಂಹೇಗೌಡ, ರೇಷ್ಮಾಭಾನು, ವಸಂತ, ಸುಧಾ ಇತರರಿದ್ದರು.
ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಲು ಸ್ಥಳೀಯ ಮಟ್ಟದಲ್ಲಿ ದಾನಿಗಳ ಸಹಕಾರ ಅಗತ್ಯ. ಕ್ರೀಡಾ ಚಟುವಟಿಕೆಗಳಿಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಹೇಳಿದರು.
ತಾಲೂಕಿನ ಸೋನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆ ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಶಾಲಾ ಹಂತದಿಂದಲೇ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸುವುದು, ದೈಹಿಕ, ಮಾನಸಿಕ ಸಾಮರ್ಥ್ಯ ಹೆಚ್ಚಿಸುವುದು, ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳನ್ನು ರೂಪಿಸುವುದು ಕ್ರೀಡಾಕೂಟಗಳ ಪ್ರಮುಖ ಉದ್ದೇಶವಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ತಂಡದೊಂದಿಗೆ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಹೋಬಳಿ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲು ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದ ಮೊತ್ತ ಕಡಿಮೆ ಇರುತ್ತದೆ. ಹಾಗಾಗಿ ದಾನಿಗಳು ಹಾಗೂ ಸಂಘ-ಸಂಸ್ಥೆಗಳ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಸ್ಥಳೀಯ ದಾನಿಗಳು ನೀಡುತ್ತಿರುವ ಸಹಕಾರ ಶ್ಲಾಘನೀಯ ಎಂದು ಹೇಳಿದರು.
ಸರ್ಕಾರ ವಿದ್ಯಾರ್ಥಿಗಳಲ್ಲಿನ ಕ್ರೀಡಾ ಪ್ರತಿಭೆ ಗುರುತಿಸಿ, ಉತ್ತಮ ಕ್ರೀಡಾಪಟುಗಳನ್ನು ರೂಪಿಸುವ ನಿಟ್ಟಿನಲ್ಲಿ ಹಲವು ಅವಕಾಶಗಳನ್ನು ಕಲ್ಪಿಸುತ್ತಿದೆ. ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಬೇಕು ಎಂದರು.
ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಮುಖ್ಯಶಿಕ್ಷಕ ಮಂಜುನಾಥ್, ದೈಹಿಕ ಶಿಕ್ಷಣ ಪರಿವೀಕ್ಷಕ ಬೇಗ್, ನರಸಿಂಹೇಗೌಡ, ರೇಷ್ಮಾಭಾನು, ವಸಂತ, ಸುಧಾ, ಪಿಡಿಒ ಸುಲೇಮನ್, ಶಂಕರ್, ಮಹದೇವು, ವಾಸು, ಗಿರೀಶ್, ನಾಗರಾಜು, ಜಯರಾಂ, ಪುಟ್ಟರಾಜು, ಶಿಕ್ಷಕರಾದ ರಾಮಮೂರ್ತಿ, ಚಂದ್ರಕುಮಾರ್, ಯಶವಂತ್, ಗಿರೀಶ್ ಮೂರ್ತಿ, ಮಹದೇವು, ಸ್ವಾಮಿ, ಭೀಮಪ್ಪ, ಸೋಮಸುಂದರ, ರಾಜೇಗೌಡ ಇದ್ದರು.