ದಾಸ ಸಾಹಿತ್ಯ ಕುರಿತು ಹೆಚ್ಚು ಸಂಶೋಧನೆಗಳು ನಡೆಯಲಿ: ಶ್ರೀಸತ್ಯಾತ್ಮತೀರ್ಥ ಸ್ವಾಮೀಜಿ ಸಲಹೆ
ನಗರದಲ್ಲಿ ಆಯೋಜಿಸಿದ್ದ ಸೌರಭ ದಾಸ ಸಾಹಿತ್ಯ ವಿದ್ಯಾಲಯದ 9ನೇ ಸಮ್ಮೇಳನ, 2 ದಿನಗಳ ವಿಶ್ವ ಸಮಾವೇಶಕ್ಕೆ ಶ್ರೀಸತ್ಯಾತ್ಮತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ಪ್ರಮೋದಾಚಾರ್ಯ ಪೂಜಾರ, ಶಶಿ ಆಚಾರ್ಯ, ಅನಿರುದ್ಧಾಚಾರ್ಯ, ಪ್ರಹ್ಲಾದಾಚಾರ್ಯ ಹನುಮಸಾಗರ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದಾಸ ಸಾಹಿತ್ಯದ ಒಳಗಿನ ಹೂರಣವನ್ನು ಸವಿದು ಜೀವನ ಸಾರ್ಥಕ ಮಾಡಿಕೊಳ್ಳಬೇಕು
ಸೌರಭ ದಾಸ ಸಾಹಿತ್ಯ ವಿದ್ಯಾಲಯವು ಕಳೆದ 9 ವರ್ಷಗಳಿಂದ ಅಹರ್ನಿಷಿ ಸೇವೆ ಮಾಡುತ್ತಿರುವುದು ಶ್ಲಾಘನೀಯ
ಮೈಸೂರು:ಬದುಕಿನ ಎಲ್ಲ ಸ್ತರಗಳನ್ನೂ ಮುಟ್ಟಿರುವ ದಾಸ ಸಾಹಿತ್ಯದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ ಎಂದು ಉತ್ತರಾದಿ ಮಠದ ಶ್ರೀಸತ್ಯಾತ್ಮತೀರ್ಥ ಸ್ವಾಮೀಜಿ ಸಲಹೆ ನೀಡಿದರು.
ಅಗ್ರಹಾರದ ದಿವಾನ್ ಪೂರ್ಣಯ್ಯ ಸ್ಮಾರಕ ಭವನದಲ್ಲಿ ವಿಶ್ವಮಧ್ವ ಮಹಾ ಪರಿಷತ್ತಿನ ಅಂಗಸಂಸ್ಥೆಯಾದ ಸೌರಭ ದಾಸ ಸಾಹಿತ್ಯ ವಿದ್ಯಾಲಯದ 9ನೇ ಸಮ್ಮೇಳನ, 2 ದಿನಗಳ ವಿಶ್ವ ಸಮಾವೇಶ ಮತ್ತು ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಸಂದೇಶ ನೀಡಿದರು.
ಜ್ಞಾನಿಗಳ, ಯತಿವರೇಣ್ಯರ, ಆಚಾರ್ಯ ಮಧ್ವರ ಮತ್ತು ಹರಿದಾಸರ ಸಂದೇಶ ಮತ್ತು ತತ್ವ ಚಿಂತನೆಗಳು ಸಮದಾಯದ ಎಲ್ಲೆಯನ್ನು ಮೀರಿ ವಿಶ್ವದ ಜನರ ಸಾಧನೆಗಳಿಗೆ ಪ್ರೇರಕವಾಗಿದೆ. ಹಾಗಿರುವಾಗ ದಾಸ ಸಾಹಿತ್ಯದ ಒಳಗಿನ ಹೂರಣವನ್ನು ಸವಿದು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಇದಕ್ಕಾಗಿ ಸತ್ಯ ಸಂಕಲ್ಪ ಈ ಕ್ಷಣದಿಂದಲೇ ಆರಂಭವಾಗಬೇಕು. ಆಗ ಭಗವಂತ ಸಂತುಷ್ಟನಾಗುತ್ತಾನೆ ಎಂದರು.
ದೇವರು ಎಲ್ಲರ ಒಳಗೆ ನಿಂತು ಸಾತ್ವಿಕ ಶಕ್ತಿಗಳನ್ನು ತುಂಬಿ ಸಾಧನೆ ಮಾಡಿಸುತ್ತಾನೆ. ಅದಕ್ಕೆ ನಮ್ಮ ಮನವನ್ನು ಅಣಿಗೊಳಿಸಿಕೊಳ್ಳಬೇಕು. ದಾಸರ ಒಂದೊಂದು ಪದಗಳೂ ಇದಕ್ಕೆ ಚೈತನ್ಯ ತುಂಬುವಂತೆ ಮಾಡಲು ವಿಶ್ವಮಧ್ವ ಮಹಾ ಪರಿಷತ್ತಿನ ಅಂಗಸಂಸ್ಥೆಯಾದ ಸೌರಭ ದಾಸ ಸಾಹಿತ್ಯ ವಿದ್ಯಾಲಯವು ಕಳೆದ 9 ವರ್ಷಗಳಿಂದ ಅಹರ್ನಿಷಿ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಾವಿರಾರು ಮಾತೆಯರ ಜ್ಞಾನ ವಿಸ್ತಾರ:
ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಅಧ್ಯಕ್ಷ, ಹಿರಿಯ ವಿದ್ವಾಂಸ ಕೊಪ್ಪಳ ಪ್ರಮೋದಾಚಾರ್ಯ ಪೂಜಾರ ಮಾತನಾಡಿ, ಸಾವಿರಾರು ಮಾತೆಯರಿಗೆ ದಾಸ ಸಾಹಿತ್ಯದ ದೀಕ್ಷೆಯನ್ನು ನೀಡುವ ಮೂಲಕ ಅಧ್ಯಯನ ಶೀಲತೆಯನ್ನು ಪ್ರೇರೇಪಿಸುವಲ್ಲಿ ಸಂಸ್ಥೆ ಸಾಕಷ್ಟು ಶ್ರಮಿಸುತ್ತಿದೆ. ಸಾಗರದ ಆಚೆಗಿನ ಮಾತೆಯರೂ ಆನ್‌ಲೈನ್ ಪಾಠಗಳ ಮೂಲಕ ದಾಸ ಸಾಹಿತ್ಯದ ಪಠ್ಯ ಕ್ರಮಗಳ ಅಭ್ಯಾಸ ಮತ್ತು ಪರೀಕ್ಷೆಗಳನ್ನು ತೆಗೆದುಕೊಂಡು ಜ್ಞಾನ ವಿಸ್ತಾರಗೊಳಿಸಿಕೊಳ್ಳುತ್ತಿದ್ದಾರೆ. ಇಂದು ಇಲ್ಲಿ ಸಮಾವೇಶಗೊಂಡಿರುವ ಸಾವಿರಕ್ಕೂ ಹೆಚ್ಚು ಮಹಿಳೆಯರೇ ಇದಕ್ಕೆ ಸಾಕ್ಷಿ ಎಂದರು.
ವಿದ್ಯಾಲಯ ಕಳೆದ 9 ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚು ಸಾಹಿತ್ಯ, ಸಂಸ್ಕೃತಿ ಆಸಕ್ತರನ್ನು ತನ್ನ ವ್ಯಾಪ್ತಿಯಲ್ಲಿ ಒಗ್ಗೂಡಿಸಿಕೊಂಡಿದೆ . ಹೊರ ದೇಶದಲ್ಲಿರುವ ಭಾರತೀಯರೂ ಇದರ ಪ್ರಯೋಜನ ಪಡೆದಿದ್ದಾರೆ ಎಂದರು.
ಹಿರಿಯ ವಿದ್ವಾಂಸರಾದ ಅನಂತಪುರ ರಾಧಾಕೃಷ್ಣಾಚಾರ್ಯ, ಧಾರವಾಡ ಕೇಶವಾಚಾರ್ಯ, ದಿವಾನ ಶಶಿ ಆಚಾರ್ಯ, ಅನಿರುದ್ಧಾಚಾರ್ಯ ಪಾಂಡುರಂಗಿ, ಪ್ರದ್ಯುಮ್ನಾಚಾರ್ಯ ವಿಜಯಪುರ, ಪ್ರಹ್ಲಾದಾಚಾರ್ಯ ಹನುಮಸಾಗರ ಮತ್ತಿತರರು ಹಾಜರಿದ್ದರು.
ಎರಡು ದಿನದ ಸಮ್ಮೇಳನದಲ್ಲಿ ದಾಸರ ಕೀರ್ತನೆ, ಸುಳಾದಿ, ಉಗಾಭೋಗ ಕುರಿತ ಸಂವಾದ, ವಿಚಾರಗೋಷ್ಠಿ, ಪ್ರಬಂಧ ಸಮರ್ಪಣೆ, ಅಧಿಕ ಮಾಸದ ಅಂಗವಾಗಿ ಮಾತೆಯರಿಗೆ 33 ಸ್ಪರ್ಧೆಗಳು, ಹರಿಕಥಾಮೃತಸಾರ ಕೃತಿಯ ಪರೀಕ್ಷೆ, ಸರ್ವಮೂಲಗಳ ಪಾರಾಯಣ ಅನುವಾದ ಇತ್ಯಾದಿ ನಡೆದವು.
ಭಾನುವಾರ ವಿದ್ವಾಂಸರಿಂದ ವಿವಿಧ ಗೋಷ್ಠಿ ನಡೆಯಲಿದೆ. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಮಹಿಳೆಯರು ಸಾಂಪ್ರದಾಯಿಕ ಸಮವಸ್ತ್ರದಲ್ಲಿ ಗಮನ ಸೆಳೆದರು.