ಕೇಂದ್ರ ಜಾತಿ ಜನಗಣತಿ ನಂತರ ಒಳಮೀಸಲಾತಿ ಕುರಿತು ಮತ್ತೊಮ್ಮೆ ಚರ್ಚೆ : ಸಿಎಂ ಸಿದ್ದರಾಮಯ್ಯ

ಮೈಸೂರಿನ ನಗರದ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸಿದ್ದರಾಮೇಶ್ವರ ಜಯಂತಿ ಸಮಾರಂಭದಲ್ಲಿ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರಿಗೆ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಿವರಾಜ್ ಎಸ್. ತಂಗಡಗಿ, ಕೆ. ವೆಂಕಟೇಶ್, ಕೆ.ಹರೀಶ್ ಗೌಡ, ಡಿ.ತಿಮ್ಮಯ್ಯ ಹಾಗೂ ಇತರರು ಇದ್ದರು
ಮೈಸೂರಿನ ನಗರದ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸಿದ್ದರಾಮೇಶ್ವರ ಜಯಂತಿ ಸಮಾರಂಭದಲ್ಲಿ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರಿಗೆ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಿವರಾಜ್ ಎಸ್. ತಂಗಡಗಿ, ಕೆ. ವೆಂಕಟೇಶ್, ಕೆ.ಹರೀಶ್ ಗೌಡ, ಡಿ.ತಿಮ್ಮಯ್ಯ ಹಾಗೂ ಇತರರು ಇದ್ದರು
Published on
ಮೈಸೂರು: ಎಲ್ಲ ಸಮುದಾಯದವರ ಒಮ್ಮತದ ಮೇರೆಗೆ ರಾಜ್ಯದಲ್ಲಿ ಒಳಮೀಸಲಾತಿ ಹಂಚಿಕೆ ಮಾಡಲಾಗಿದ್ದು, ಕೇಂದ್ರ ಸರ್ಕಾರದ ಜಾತಿ ಗಣತಿ ವರದಿ ಹೊರ ಬಂದ ನಂತರ ಮತ್ತೊಮ್ಮೆ ಚರ್ಚೆ ನಡೆಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ನಗರದ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸಿದ್ದರಾ ಮೇಶ್ವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಒಳ ಮೀಸಲಾತಿ ಮರು ಹಂಚಿಕೆಯಾಗಬೇಕು ಎಂಬ ಭೋವಿ ಸಮುದಾಯದ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ಒಳ ಮೀಸಲಾತಿ ಹಂಚಿಕೆಯಲ್ಲಿ ನಾವು ಸಾಕಷ್ಟು ಮುಂದೆ ಹೋಗಿದ್ದೇವೆ. ಸಚಿವ ಸಂಪುಟದಲ್ಲಿ ಎಲ್ಲ ಸಮುದಾಯದ ಸಚಿವರು ಒಳಮೀಸಲಾತಿ ಹಂಚಿಕೆಗೆ ಸಮ್ಮತಿ ಸೂಚಿಸಿದ್ದಾರೆ. ಎಲ್ಲರು ತಮ್ಮ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಕೇಂದ್ರ ಸರ್ಕಾರ ಜಾತಿವಾರು ಜನಗಣತಿ ನಡೆಸುತ್ತಿದೆ. ಆ ಗಣತಿಯ ವರದಿ ಬರಲಿ, ವರದಿ ಬಂದ ನಂತರ ಒಳಮೀಸಲಾತಿ ವಿಚಾರವಾಗಿ ಮತ್ತೊಮ್ಮೆ ಕೂತು ಚರ್ಚೆ ಮಾಡೋಣ ಎಂದು ಹೇಳಿದರು.
ಸಮ ಸಮಾಜ ನಿರ್ಮಾಣದ ಮೇಲೆ ನಮ್ಮ ಸರ್ಕಾರ ನಂಬಿಕೆ ಇಟ್ಟಿದೆ. ಸಮ ಸಮಾಜ ನಿರ್ಮಾಣ ಮಾಡಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಸಂಪತ್ತು ಸಮಾನವಾಗಿ ಹಂಚಿಕೆಯಾಗಿಬೇಕು. ರಾಜ್ಯದ ಸರ್ವರಿಗೂ ಸಮಪಾಲು, ಸಮಬಾಳು ಸಿಗಬೇಕೆಂಬುದೇ ಸರ್ಕಾರದ ಉದ್ದೇಶವಾಗಿದೆ ಎಂದರು.
ಆರ್ಥಿಕ ಹಾಗೂ ಸಾಮಾಜಿಕ ಶಕ್ತಿಗಾಗಿ ಶಿಕ್ಷಣ ಅಗತ್ಯವಾಗಿದ್ದು, ಭೋವಿ ಜನಾಂಗದವರು ಶಿಕ್ಷಣಕ್ಕೆ ಒತ್ತು ನೀಡಬೇಕು. ಶ್ರೀ ಸಿದ್ದರಾ ಮೇಶ್ವರ ಸೇರಿದಂತೆ ಸಂತಮಹಾಶಯರು, ಸಮಾಜದಲ್ಲಿ ಜಾತಿವರ್ಗಗಳ ವ್ಯವಸ್ಥೆಗಳು ತೊಲಗಬೇಕು ಎಂದು ಬಯಸಿದ್ದರು. ಬಸವಾದಿ ಶರಣರು 12ನೇ ಶತಮಾನದಲ್ಲಿ ಸಮಾನತೆಯ ಸಿದ್ಧಾಂತ ಬೋಧಿಸಿದ್ದರು ಎಂದು ಹೇಳಿದರು.
ಸ್ವಾತಂತ್ರೃ, ಸಮಾನತೆ ಮತ್ತು ಭ್ರಾತೃತ್ವ ಸಂವಿಧಾನದ ಮೂಲ ತತ್ವಗಳು. ಜಡತ್ವದಿಂದ ಕೂಡಿರುವ ಜಾತಿ ವ್ಯವಸ್ಥೆಯನ್ನು ಸುಧಾರಿಸ ಬೇಕಿದೆ. ಎಲ್ಲ ಜಾತಿಗಳನ್ನು ಪ್ರೀತಿಸಿ, ಅವರೂ ನಮ್ಮನ್ನು ಪ್ರೀತಿಸುವಂತೆ ಮಾಡಬೇಕು ಹಾಗೂ ಸಹಿಷ್ಣುತೆಯನ್ನು ರೂಢಿಸಿಕೊಳ್ಳಬೇಕು. ಉತ್ಪಾದನೆಯಲ್ಲಿ ಎಲ್ಲರೂ ಭಾಗವಹಿ ಉತ್ಪನ್ನವನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಸಿದ್ಧರಾಮೇಶ್ವರರು ನಮಗೆ ಬೋಧಿಸಿದ್ದರು. ಅವರು ನಡೆದ ಹಾದಿಯಲ್ಲಿಯೇ ನಮ್ಮ ಸರ್ಕಾರವೂ ನಡೆಯುತ್ತಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಮಾತನಾಡಿ, ಭೋವಿ ಅಭಿವೃದ್ಧಿ ನಿಗಮದ ಹೆಸರನ್ನು ಭೋವಿ ವಡ್ಡ ಅಭಿವೃದ್ಧಿ ನಿಗಮ ಎಂದು ಮರು ನಾಮಕರಣ ಮಾಡಬೇಕು, ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಜಿಲ್ಲೆ ಹಾಗೂ ತಾಲೂಕಿಗೆ ಒಂದು ಸಮುದಾಯ ಭವನ ನಿರ್ಮಾಣ ಮಾಡಬೇಕು, ಸಮುದಾಯದವರಿಗೆ ಎಂಎಲ್ಸಿ ಸ್ಥಾನ ಹಾಗೂ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಶ್ರೀ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕರಾದ ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಿ.ತಿಮ್ಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ, ವಿವಿಧ ನಿಗಮ ಮಂಡಳಿ ಅಧ್ಯಕ್ಷರಾದ ಎಂ. ರಾಮಪ್ಪ, ಮಾನಸ, ಅಯೂಬ್ ಖಾನ್, ರಂಗಸ್ವಾಮಿ, ಗಣೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net