ಪಾಳು ಬಿದ್ದ ಉದ್ಯಾನಗಳು

ತಿ.ನರಸೀಪುರ ಪಟ್ಟಣದ ಗೋಪಾಲಪುರದಲ್ಲಿ ನಿರ್ವಹಣೆ ಇಲ್ಲದೆ ಹಾಳಾಗಿರುವ ಉದ್ಯಾನವನ.
ತಿ.ನರಸೀಪುರ ಪಟ್ಟಣದ ಗೋಪಾಲಪುರದಲ್ಲಿ ನಿರ್ವಹಣೆ ಇಲ್ಲದೆ ಹಾಳಾಗಿರುವ ಉದ್ಯಾನವನ.
Published on
ತಿ.ನರಸೀಪುರ : ಪಟ್ಟಣದ ಗೋಪಾಲಪುರದಲ್ಲಿ ನಿತ್ಯವೂ ವಾಯುವಿಹಾರಕ್ಕಾಗಿ, ಯುವಕರ ಕ್ರೀಡಾ ಚಟುವಟಿಗಳಿಗೆ ಹಾಗೂ ಮಕ್ಕಳಿಗೆ ಆಟವಾಡಲು ಬಳಕೆ ಆಗಬೇಕಿದ್ದ ಉದ್ಯಾನ ನಿರ್ವಹಣೆ ಇಲ್ಲದೆ ಸೊರಗಿದೆ. ಮುಖ್ಯ ರಸ್ತೆಯಲ್ಲಿ ಜಲ ಸಂಗ್ರಹಗಾರದಲ್ಲಿರುವ ಮತ್ತೊಂದು ಉದ್ಯಾನ ಸಹ ಪಾಳು ಬಿದ್ದಿದೆ.
ಹಚ್ಚ ಹಸುರಿನಿಂದ ಗಿಡಮರಗಳಿಂದ ಕಂಗೊಳಿಸಿ, ನೆರಳನ್ನು ನೀಡಬೇಕಿದ್ದ ಎರಡು ಉದ್ಯಾನಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿರುಪಯುಕ್ತವಾಗಿವೆ. ಪಟ್ಟಣ ಪಂಚಾಯಿತಿ ಇದ್ದಾಗ ಅಭಿವೃದ್ಧಿಪಡಿಸಿದ್ದ ಉದ್ಯಾನಗಳನ್ನು ಇಂದಿನ ಪುರಸಭೆ ಕಿಂಚಿತ್ತೂ ಗಮನ ಹರಿಸದಿರುವುದು ವಾಯುವಿಹಾರಿಗಳು ಹಾಗೂ ಪರಿಸರ ಪ್ರೇಮಿಗಳಿಗೆ ಬೇಸರ ತರಿಸಿದೆ.
ಪುರಸಭೆ 17ನೇ ವಾರ್ಡ್‌ನ ಗೋಪಾಲಪುರ ಮಧ್ಯೆೆ ಹಾಗೂ ಮುಖ್ಯ ರಸ್ತೆಯ ಜಲ ಸಂಗ್ರಹಗಾರದ ಬಳಿ ಉದ್ಯಾನಗಳನ್ನು ಹಿಂದಿನ ಪಟ್ಟಣ ಪಂಚಾಯಿತಿ ಅವಧಿಯಲ್ಲಿ ಲಕ್ಷಾಂತರ ರೂ. ವ್ಯಯಿಸಿ, ನಿರ್ಮಾಣ ಮಾಡಲಾಗಿತ್ತು. ಅಂದಿನ ಅಧಿಕಾರಿಗಳು ಗೋಪಾಲಪುರದಲ್ಲಿ ಭಾಗಶಃ ಉದ್ಯಾನದ ಕಾಮಗಾರಿ ನಡೆಸಿದರಾದರೂ ಪೂರ್ಣಗೊಳಿಸದೆ ಕೈ ಬಿಟ್ಟಿದ್ದ್ದರಿಂದ ಉದ್ಯಾನ ಹಾಳಾಗಿದೆ. ಪಾರ್ಕ್‌ಗೆ ನೀರಿನ ಸೌಲಭ್ಯವನ್ನು ಕಲ್ಪಿಸಿಲ್ಲ. ಹಸಿರಿನ ಹಾಸು ಇರಬೇಕಾದ ನೆಲ ಬಿಸಿಲಿಗೆ ಒಣಗಿದೆ. ಉತ್ತರ ದಿಕ್ಕಿನ ಪ್ರವೇಶದ ಗೇಟ್‌ನ ಡೆಕ್ ಸ್ಲ್ಯಾಬ್ ಕುಸಿದು ಬೀಳುತ್ತಿದೆ.
ಅಧಿಕಾರಿಗಳ ನಿರ್ಲಕ್ಷೃ
ಮುಖ್ಯ ರಸ್ತೆಯಲ್ಲಿ ಜಲ ಸಂಗ್ರಹಗಾರ ಬಳಿಯಿದ್ದ ಉದ್ಯಾನ ಸಹ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿಯಿಂದ ಸಂಪೂರ್ಣವಾಗಿ ಹಾಳಾಗಿದೆ. ತ್ಯಾಜ್ಯ, ಗಿಡಗಂಟಿಗಳು ಬೆಳೆದು ನಿಂತಿದ್ದರೆ, ವಿದ್ಯುತ್ ಬೀದಿದೀಪ ಕಂಬಗಳು ಹಾಗೂ ಮರಗಳಿಗೆಲ್ಲ ಗಿಡ ಬಳ್ಳಿಗಳು ಹಬ್ಬಿ ಹರಡಿಕೊಂಡಿವೆ. ಈ ಎರಡು ಉದ್ಯಾನಗಳು ನಿರ್ವಹಣೆ ಇಲ್ಲದೆ ನಿರುಪಯುಕ್ತವಾಗಿದ್ದರೂ ಈಗಿನ ಪುರಸಭೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದುವರೆಗೂ ಗಮನಹರಿಸದಿರುವುದಕ್ಕೆ ಸಾರ್ವಜನಿಕ ವಲಯದಿಂದ ಅಸಮಾಧಾನ ವ್ಯಕ್ತವಾಗುತ್ತಿದೆ.
ಅಭಿವೃದ್ಧಿಗೆ ಯೋಜನೆ ರೂಪಿಸಿ
ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಬೆಳವಣಿಗೆ ಆಗುತ್ತಿರುವ ಪಟ್ಟಣದಲ್ಲಿ ಕೇಂದ್ರ ಸರ್ಕಾರದ ಅಮೃತ್ 2.0 ಯೋಜನೆ ಅನುದಾನದಲ್ಲಿ ಗೋಪಾಲಪುರ ಸೇರಿದಂತೆ 5 ಉದ್ಯಾನಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿ, ಆಯವ್ಯಯದಲ್ಲೂ ಅನುದಾನ ಮಿಸಲಿಟ್ಟಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನೀರಿಲ್ಲದೆ ಸೊರಗಿ, ಪಾಳು ಬಿದ್ದಿರುವ ಈಗಿನ ಉದ್ಯಾನಗಳ ಬಗ್ಗೆ ಗಮನಹರಿಸಿಲ್ಲ. ಹಾಗಾಗಿ ನಿರ್ವಹಣೆ ಇಲ್ಲದ ಉದ್ಯಾನಗಳ ಅಭಿವೃದ್ಧಿಗೂ ಯೋಜನೆ ರೂಪಿಸಿ, ಉದ್ದೇಶಿತ ಬಡಾವಣೆಗಳಲ್ಲಿ ನೂತನ ಪಾರ್ಕ್‌ಗಳನ್ನು ನಿರ್ಮಾಣ ಮಾಡಬೇಕೆಂದು ಪಟ್ಟಣದ ನಿವಾಸಿಗಳು ಹಾಗೂ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.

ಗೋಪಾಲಪುರದಲ್ಲಿ ನಿವಾಸಿಗಳ ನಿತ್ಯದ ವಾಯುವಿಹಾರ, ಮಕ್ಕಳಿಗೆ ಆಟಗಳಿಗೆ ಹಾಗೂ ಯುವಕರು ವಿರಮಿಸಲು ಉದ್ಯಾನ ಬಳಕೆಯಾಗುತ್ತಿರುವುದರಿಂದ ಪುರಸಭೆ ಪಾರ್ಕ್ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಮುಖ್ಯ ರಸ್ತೆಯಲ್ಲಿ ಜಲಸಂಗ್ರಹಗಾರ ಬಳಿ ಹಾಳು ಬಿದ್ದಿರುವ ಪಾರ್ಕ್ ಅಭಿವೃದ್ಧಿಗೂ ಯೋಜನೆ ರೂಪಿಸಬೇಕು.

ಪುರಸಭೆ ವ್ಯಾಪ್ತಿಯ ಪಟ್ಟಣದಲ್ಲಿ 5 ಕಡೆ ಉದ್ಯಾನಗಳನ್ನು ನಿರ್ಮಾಣ ಮಾಡಲು ಅಮೃತ್ ಯೋಜನೆಯಡಿ ಯೋಜನೆ ರೂಪಿಸಿದ್ದೇವೆ. ಅದರಲ್ಲಿ ಗೋಪಾಲಪುರ ಉದ್ಯಾನ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುವುದು. ಅಗತ್ಯವಿದ್ದಲ್ಲಿ ಜಲಸಂಗ್ರಹಗಾರ ಬಳಿ ಇರುವ ಉದ್ಯಾನವನ್ನು ಪರಿಶೀಲಿಸಿ, ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net