ಆಯುರ್ವೇದ ದಾಖಲೆ, ಪಠ್ಯಕ್ರಮ ಡಿಜಿಟಲೀಕರಣ

ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ 2025ನೇ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಚಿನ್ನದ ಪದಕ, ನಗದು ಬಹುಮಾನ ಪಡೆದ ವಿದ್ಯಾರ್ಥಿಗಳೊಂದಿಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,ಡಾ.ಬಿ.ಸಿ.ಭಗವಾನ್, ಡಾ.ಸಿ.ಜಿ.ಬೆಟಸೂರಮಠ, ಆರ್.ಮಹೇಶ್, ಡಾ.ಸರ್ಬೇಶ್ವಕರ್,  ಡಾ.ಶಿವಪ್ರಸಾದ್ ಹುಡೇದ, ಡಾ.ಎಸ್.ಶ್ರೀಹರಿ,  ಡಾ.ವಿಶಾಲ್ ಎಸ್.ಕುಮಾರ್ ಇದ್ದರು.
ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ 2025ನೇ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಚಿನ್ನದ ಪದಕ, ನಗದು ಬಹುಮಾನ ಪಡೆದ ವಿದ್ಯಾರ್ಥಿಗಳೊಂದಿಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,ಡಾ.ಬಿ.ಸಿ.ಭಗವಾನ್, ಡಾ.ಸಿ.ಜಿ.ಬೆಟಸೂರಮಠ, ಆರ್.ಮಹೇಶ್, ಡಾ.ಸರ್ಬೇಶ್ವಕರ್, ಡಾ.ಶಿವಪ್ರಸಾದ್ ಹುಡೇದ, ಡಾ.ಎಸ್.ಶ್ರೀಹರಿ, ಡಾ.ವಿಶಾಲ್ ಎಸ್.ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 3 ರಿಂದ 15 ವರ್ಷದೊಳಗಿನ ಬಾಲಕಿಯರಿಗೆ ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್‌ಪಿವಿ) ಲಸಿಕೆ
  • ಸ್ತನ ಕ್ಯಾನ್ಸರ್ ತಡೆಗೆ ತಪಾಸಣಾ ಕಾರ್ಯಕ್ರಮ
  • ಅಂಗಾಂಗ ದಾನಕ್ಕೆ ಮುಂದಾಗಬೇಕು ವೈದ್ಯಕೀಯ ವಿದ್ಯಾರ್ಥಿಗಳು
ಮೈಸೂರು: ಪುರಾತನವಾಗಿರುವ ಆಯುರ್ವೇದ ವೈದ್ಯಕೀಯ ಪದ್ಧತಿಯ ಮೂಲ ದಾಖಲಾತಿಗಳು ಮತ್ತು ಪಠ್ಯಕ್ರಮವನ್ನು ಡಿಜಿಟಲೀಕರಣ ಮಾಡಲಾಗುವುದು ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ತಿಳಿಸಿದರು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದ ಆವರಣದಲ್ಲಿ  ಆಯೋಜಿಸಿದ್ದ ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ 2025ನೇ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಆಯುರ್ವೇದ ಪದ್ಧತಿಯ ಮೂಲಪ್ರತಿಗಳು, ಪಠ್ಯಕ್ರಮಗಳು ಇನ್ನೂ ಡಿಜಿಟಲೀಕರಣಗೊಂಡಿಲ್ಲ. ಆದ್ದರಿಂದ ಈ ಕೆಲಸವನ್ನು ನಮ್ಮ ವಿಶ್ವವಿದ್ಯಾಲಯದಿಂದ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಈ ಕ್ಷೇತ್ರದ ವೈದ್ಯರು, ಸಂಶೋಧಕರು, ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎಂದರು.
ರಾಜ್ಯದ ಮಹಿಳೆಯರಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಗರ್ಭಕಂಠದ ಕ್ಯಾನ್ಸರ್ ರೋಗ ತಡೆಗಟ್ಟುವ ಉದ್ದೇಶದಿಂದ ವಿಶ್ವವಿದ್ಯಾಲಯದಿಂದ ಸರ್ಕಾರಿ ಶಾಲೆಗಳಲ್ಲಿ 13 ರಿಂದ 15 ವರ್ಷದೊಳಗಿನ ಬಾಲಕಿಯರಿಗೆ ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್‌ಪಿವಿ) ಲಸಿಕೆ ಒದಗಿಸಲಾಗುತ್ತಿದೆ. ಲಸಿಕೆ ಹಾಕಿದರೆ ಅವರಿಗೆ ಈ ಕ್ಯಾನ್ಸರ್ ಬಾಧಿಸುವುದಿಲ್ಲ. ಹೀಗಾಗಿ, ಇದನ್ನು ಅಭಿಯಾನ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದರು.
ಬಹಳಷ್ಟು ಮಹಿಳೆಯರು ಸ್ತನಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ರೋಗವನ್ನು ಗುಣಪಡಿಸಬಹುದಾಗಿದೆ. ಆದ್ದರಿಂದ ವಿಶ್ವವಿದ್ಯಾಲಯದಿಂದ ತಪಾಸಣಾ ಕಾರ್ಯಕ್ರಮವನ್ನೂ ಕೈಗೊಳ್ಳಲಾಗುತ್ತಿದೆ ಎಂದರು.
ರಾಜ್ಯದಲ್ಲೇ 3 ಲಕ್ಷ ರೋಗಿಗಳು ಅನ್ಯರ ಅಂಗಗಳನ್ನು ಕಸಿ ಮಾಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಆದರೆ ರಾಜ್ಯವಲ್ಲ ದೇಶದಲ್ಲೇ 4 ಲಕ್ಷ ಜನರು ಮಾತ್ರ ಅಂಗಾಂಗ ದಾನ ಮಾಡಲು ಹೆಸರು ನೋಂದಾಯಿಸಿಕೊಂಡಿದ್ದಾರೆ. 
ಈ ವಿಷಯದಲ್ಲಿ ದೊಡ್ಡ ಮಟ್ಟದಲ್ಲಿ ಅಭಾವ ಸೃಷ್ಟಿಯಾಗಿದೆ. ಆದ್ದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು, ವಿದ್ಯಾರ್ಥಿಗಳು ಮೊದಲು ಅಂಗಾಂಗ ದಾನ ಮಾಡಲು ಹೆಸರು ನೋಂದಾಯಿಸಬೇಕು. ಇದು ಇಡೀ ಸಮಾಜಕ್ಕೆ ಸ್ಫೂರ್ತಿಯಾಗಬೇಕು. ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ ಆರು ಜನರ ಜೀವಗಳ ಉಳಿಸಬಹುದು ಎಂಬ ಅರಿವನ್ನು ತಮ್ಮ ಪಾಲಕರಲ್ಲೂ ಮೂಡಿಸಬೇಕು ಎಂದು ತಿಳಿಸಿದರು.
ಜೆನ್‌ಝೀ (1997ರಿಂದ 2012ರವರೆಗೆ ಜನಿಸಿದವರು) ತಲೆಮಾರಿನವರು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಸುಮಾರು ಶೇ.23ರಷ್ಟು ವಿದ್ಯಾರ್ಥಿಗಳು ಮಾದಕ ವಸ್ತುಗಳಾದ ಡ್ರಗ್ಸ್, ಗುಟ್ಕಾ, ಮದ್ಯ, ಧೂಮಪಾನ ಚಟಗಳಿಗೆ ದಾಸರಾಗಿವುದು ಆಘಾತಕಾರಿ. ಇದರಿಂದ ಮಾನಸಿಕ ಖಿನ್ನತೆ, ಒತ್ತಡಕ್ಕೂ ಒಳಗಾಗಿದ್ದಾರೆ.
 ಇದನ್ನು ತಡೆಯಲು ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳನ್ನು ‘ಮಾದಕ ವಸ್ತುಗಳ ಮುಕ್ತ ಕ್ಯಾಂಪಸ್’ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಈಗಲೂ ಬಾಡಿಗೆ ಕಟ್ಟಡದಿಂದಲೇ ಕಾರ್ಯನಿರ್ವಹಿಸುತ್ತಿದೆ. ರಾಮನಗರದ ಬಳಿ 250 ಎಕರೆ ಪ್ರದೇಶದಲ್ಲಿ ವಿವಿ ಆಡಳಿತಾತ್ಮಕ ಕ್ಯಾಂಪಸ್ ನಿರ್ಮಿಸಲಾಗುತ್ತಿದೆ. ಭೀಮನಕುಪ್ಪೆ ಬಳಿ 50 ಎಕರೆ ಪ್ರದೇಶದಲ್ಲಿ ಕ್ಯಾನ್ಸರ್ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಇಲ್ಲೇ ಉಳಿದುಕೊಂಡು ಸಂಶೋಧನೆ ನಡೆಸಲು ಅನುಕೂಲವಾಗಲು 100 ಕೊಠಡಿಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚು ವೈದ್ಯರಿದ್ದಾರೆ. 10-11 ಲಕ್ಷ ವೈದ್ಯರ ಬೇಡಿಕೆ ಇದೆ. ಸದ್ಯಕ್ಕೆ 12 ಲಕ್ಷ ವೈದ್ಯರಿದ್ದಾರೆ. ಈ ಡಾಕ್ಟರ್‌ಗಳೆಲ್ಲರೂ ನಗರ ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯರು ಹೆಚ್ಚಿದ್ದರೂ ಗ್ರಾಮಾಂತರ ಪ್ರದೇಶದಲ್ಲಿ ವೈದ್ಯರ ಕೊರತೆ ಇದೆ. ಹೀಗಾಗಿ, ಪದವಿ ಪಡೆದ ವೈದ್ಯರು ಮೊದಲು ಹಳ್ಳಿಗಳಲ್ಲಿ ಕೆಲಸ ಮಾಡಬೇಕು ಎಂದರು.
ಆಯುರ್ವೇದ ಭವಿಷ್ಯದ ವೈದ್ಯಕೀಯ ಪದ್ಧತಿ. ನೈಸರ್ಗಿಕ ವೈದ್ಯಕೀಯ ಪದ್ಧತಿಯೂ ಆಗಿದೆ. ಆದ್ದರಿಂದ ಈ ಕ್ಷೇತ್ರ ವೈದ್ಯರು ಆಯುರ್ವೇದ ಪರಿಶುದ್ಧತೆಯನ್ನು ಕಾಯ್ದುಕೊಳ್ಳಬೇಕು. ಅನ್ಯ ವೈದ್ಯಕೀಯ ಪದ್ಧತಿಗಳೊಂದಿಗೆ ಇದನ್ನು ಮಿಶ್ರಣ ಮಾಡಬಾರದು ಎಂದು ಕಿವಿಮಾತು ಹೇಳಿದರು. ಈ ಕ್ಷೇತ್ರದಲ್ಲೂ ಕೃತಕಬುದ್ಧಿಮತ್ತೆ(ಎಐ), ನ್ಯಾನೋ, ಸೈಬರ್ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಇದರಿಂದ ರೋಗಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.
ವೈದ್ಯಕೀಯ ವಿದ್ಯಾರ್ಥಿಗಳು ಮೊದಲು ಸೇವಾ ಬದ್ಧತೆ ಮೈಗೂಡಿಸಿಕೊಳ್ಳಬೇಕು. ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಉತ್ತಮ ವೈದ್ಯೋಪಚಾರ ನೀಡಿ ವಿಶ್ವಾಸ ಮೂಡಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ತಾಳ್ಮೆ-ಸಂಯಮ ಹಾಗೂ ಗೌರವಯುತ ವರ್ತನೆಯನ್ನು ಕರಗತ ಮಾಡಿಕೊಳ್ಳಬೇಕು ಎಂದರು.
98 ಸ್ನಾತಕ,  43 ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ರ‌್ಯಾಂಕ್ ಪಡೆದ 9 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಮೂವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. 
ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಪ್ರಾಂಶುಪಾಲ ಡಾ.ಸರ್ಬೇಶ್ವರ್‌ಕರ್, ಉಪ ಪ್ರಾಂಶುಪಾಲರಾದ ಡಾ.ಶಿವಪ್ರಸಾದ್ ಹುಡೇದ್, ಡಾ.ಎಸ್.ಶ್ರೀಹರಿ, ಸಹ ಪ್ರಾಧ್ಯಾಪಕ ಡಾ.ವಿಶಾಲ್ ಎಸ್.ಕುಮಾರ್ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net