ಹಿರಿಯರಲ್ಲಿ ಮಧುಮೇಹ : ಆರಂಭದಲ್ಲೇ ಪತ್ತೆ ಹಚ್ಚಿದರೆ ಎಲ್ಲವೂ ಸುಲಭವಾಗುತ್ತದೆ

 ಸಕ್ಕರೆ ಕಾಯಿಲೆ
ಸಕ್ಕರೆ ಕಾಯಿಲೆ
Published on
ಮೈಸೂರು: ವಯಸ್ಸಾದಂತೆ ನಮ್ಮ ದೇಹದ ಆರೋಗ್ಯ ಮತ್ತು ಅಗತ್ಯಗಳಲ್ಲಿ ಬದಲಾವಣೆಗಳು ಆಗುವುದು ಸಹಜ. ಆದರೆ, ಈ ಸಮಯದಲ್ಲಿ ನಾವು ಮುಖ್ಯವಾಗಿ ಗಮನ ಕೊಡಬೇಕಾದ ಮತ್ತು ಎಚ್ಚರ ವಹಿಸಬೇಕಾದ ವಿಷಯವೆಂದರೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ.
ಇತ್ತೀಚಿನ ದಿನಗಳಲ್ಲಿ ಎಲ್ಲ ವಯಸ್ಸಿನವರಲ್ಲೂ ಮಧುಮೇಹ ಕಾಣಿಸಿಕೊಳ್ಳುತ್ತಿದ್ದರೂ, ವಯಸ್ಸಾದವರಲ್ಲಿ ಇದರ ಅಪಾಯ ಸ್ವಲ್ಪ ಹೆಚ್ಚೇ ಇರುತ್ತದೆ. ವಯಸ್ಸಾದ ಮೇಲೆ ದೇಹದ ಜೀರ್ಣಕ್ರಿಯೆ ನಿಧಾನವಾಗುವುದು, ದೈಹಿಕ ಚಟುವಟಿಕೆ ಅಥವಾ ಓಡಾಟ ಕಡಿಮೆಯಾಗುವುದು ಮತ್ತು ಬೇರೆ ಕಾಯಿಲೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವುದು ಇದಕ್ಕೆ ಮುಖ್ಯ ಕಾರಣಗಳಾಗಿವೆ.

ಬೇಗ ಪತ್ತೆ ಹಚ್ಚುವುದು ಏಕೆ ಮುಖ್ಯ?

ಆತಂಕದ ವಿಷಯ ಏನೆಂದರೆ, ಅನೇಕ ಹಿರಿಯರಿಗೆ ತಮ್ಮ ರಕ್ತದಲ್ಲಿ ಸಕ್ಕರೆ ಅಂಶ ಏರುಪೇರಾಗುತ್ತಿರುವುದು ಆರಂಭದಲ್ಲಿ ಗೊತ್ತೇ ಆಗುವುದಿಲ್ಲ. ಸಕ್ಕರೆ ಕಾಯಿಲೆಯು ದೇಹದಲ್ಲಿ ನಿಧಾನವಾಗಿ ಆವರಿಸಿಕೊಳ್ಳುತ್ತದೆ. ಸುಸ್ತು, ಅತಿಯಾದ ಬಾಯಾರಿಕೆ ಅಥವಾ ದೇಹದ ತೂಕ ಬದಲಾಗುವುದನ್ನು ಹಿರಿಯರು "ವಯಸ್ಸಾಯಿತಲ್ಲ, ಅದಕ್ಕೆ ಹೀಗೆ ಆಗುತ್ತಿದೆ" ಎಂದುಕೊಂಡು ಇದನ್ನು ಸಹಜ ಎಂದು ಭಾವಿಸುತ್ತಾರೆ. ಇದರಿಂದ ರೋಗಲಕ್ಷಣಗಳು ಕಣ್ಣಿಗೆ ಬೀಳದಂತಾಗುತ್ತವೆ. ಆದರೆ, ಮಧುಮೇಹವನ್ನು ಮೊದಲೇ ಗುರುತಿಸುವುದರಿಂದ ಈ ಕೆಳಗಿನ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು:
ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯು (Stroke) ಕಿಡ್ನಿ (ಮೂತ್ರಪಿಂಡ) ಹಾನಿಯಾಗುವುದು ದೃಷ್ಟಿ ಮಂದವಾಗುವುದು ನರಗಳ ದೌರ್ಬಲ್ಯ ಮತ್ತು ಗಾಯಗಳು ಬೇಗ ಗುಣವಾಗದಿರುವುದು. ನೆನಪಿನ ಶಕ್ತಿ ಕುಂದುವುದು ಆರಂಭದಲ್ಲೇ ಚಿಕಿತ್ಸೆ ಮತ್ತು ಒಳ್ಳೆಯ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಹಿರಿಯರು ಯಾರಿಗೂ ಹೊರೆಯಾಗದೆ, ಆರಾಮವಾಗಿ ಬದುಕಬಹುದು.

ಹಿರಿಯರು ಏನು ಮಾಡಬೇಕು?

ಮಧುಮೇಹವನ್ನು ನಿಯಂತ್ರಿಸಲು ಅಥವಾ ತಡೆಯಲು ಕಷ್ಟಕರವಾದ ಬದಲಾವಣೆಗಳನ್ನೇ ಮಾಡಬೇಕೆಂದಿಲ್ಲ. ಚಿಕ್ಕಪುಟ್ಟ ಬದಲಾವಣೆಗಳೇ ಸಾಕು: ಸರಿಯಾದ ಆಹಾರ: ಸುಲಭವಾಗಿ ಜೀರ್ಣವಾಗುವ, ನಾರಿನಂಶ ಹೆಚ್ಚಿರುವ ಸೊಪ್ಪು-ತರಕಾರಿಗಳನ್ನು ಮತ್ತು ಕಾಳುಗಳನ್ನು ಸೇವಿಸಿ. ಅತಿಯಾದ ಸಿಹಿ ತಿಂಡಿ ಮತ್ತು ಎಣ್ಣೆ ಪದಾರ್ಥಗಳನ್ನು ಕಡಿಮೆ ಮಾಡುವುದರಿಂದ ಶುಗರ್ ಏರುವುದನ್ನು ತಡೆಯಬಹುದು.
ದೈಹಿಕ ವ್ಯಾಯಾಮ: ದಿನಕ್ಕೆ ಕನಿಷ್ಠ 20 ರಿಂದ 30 ನಿಮಿಷ ನಡೆಯುವುದು (Walking), ಯೋಗ ಮಾಡುವುದು ಅಥವಾ ಕೈಕಾಲುಗಳನ್ನು ಸ್ಟ್ರೆಚ್ ಮಾಡುವಂತಹ ವ್ಯಾಯಾಮ ಮಾಡಿದರೆ ಸಾಕು, ದೊಡ್ಡ ಮಟ್ಟದ ಬದಲಾವಣೆ ಕಾಣಬಹುದು.
ಆಗಾಗ ತಪಾಸಣೆ: ರಕ್ತದಲ್ಲಿನ ಸಕ್ಕರೆ ಅಂಶ (Fasting sugar), HbA1c, ಕಿಡ್ನಿ ಕಾರ್ಯವೈಖರಿ, ರಕ್ತದೊತ್ತಡ (BP) ಮತ್ತು ಕೊಲೆಸ್ಟ್ರಾಲ್ ಪರೀಕ್ಷೆಗಳನ್ನು ಆಗಾಗ ಮಾಡಿಸುತ್ತಿರಬೇಕು.

ಔಷಧಿಗಳ ನಿರ್ವಹಣೆ

ವಯಸ್ಸಾದವರು ಬೇರೆ ಬೇರೆ ಕಾಯಿಲೆಗಳಿಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರಬಹುದು. ಆದ್ದರಿಂದ ವೈದ್ಯರು ಹೇಳಿದ ಸಮಯಕ್ಕೆ ಮತ್ತು ಸರಿಯಾದ ಪ್ರಮಾಣದಲ್ಲಿ ಔಷಧಿಗಳನ್ನು ತೆಗೆದುಕೊಳ್ಳಬೇಕು. ರಾತ್ರಿ ಚೆನ್ನಾಗಿ ನಿದ್ದೆ ಮಾಡುವುದು ಮತ್ತು ಮಾನಸಿಕ ಒತ್ತಡ ಅಥವಾ ಚಿಂತೆ ಇಲ್ಲದೆ ಇರುವುದು ಕೂಡ ಶುಗರ್ ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ. ಸ್ವಲ್ಪ ಎಚ್ಚರ ವಹಿಸಿದರೆ, ಹಿರಿಯರು ತಮ್ಮ ಮುಂದಿನ ದಿನಗಳನ್ನು ನೆಮ್ಮದಿಯಿಂದ ಮತ್ತು ಆರೋಗ್ಯಯುತವಾಗಿ ಕಳೆಯಬಹುದು.
ಮಾಹಿತಿ: ಡಾ. ರೇಖಾ ವಿ ಭಟ್, ಕನ್ಸಲ್ಟೆಂಟ್ - ಎಂಡೋಕ್ರೈನಾಲಜಿ, ಮಣಿಪಾಲ್ ಹಾಸ್ಪಿಟಲ್, ಮೈಸೂರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net