ಭಕ್ತರ ಸಿರಿಕಂಠದಲ್ಲಿ ಹನುಮಾನ್ ಚಾಲೀಸಾ ಪಠಣ

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಸಾಮೂಹಿಕ ಶ್ರಿ ಹನುಮಾನ್ ಚಾಲೀಸಾ ಪಾರಾಯಣದಲ್ಲಿ ಭಾಗವಹಿಸಿದ್ದ ಭಕ್ತರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಸಾಮೂಹಿಕ ಶ್ರಿ ಹನುಮಾನ್ ಚಾಲೀಸಾ ಪಾರಾಯಣದಲ್ಲಿ ಭಾಗವಹಿಸಿದ್ದ ಭಕ್ತರು.
Published on

ಪ್ರಮುಖ ಮುಖ್ಯಾಂಶಗಳು

  • 50 ಸಾವಿರಕ್ಕೂ ಹೆಚ್ಚು ಹನುಮ ಭಕ್ತರು ಭಾಗಿ
  • ಭಕ್ತಿಯ ಸಾಗರದಲ್ಲಿ ಮಿಂದೆದ್ದ ಮೈಸೂರು
  • ಅವಧೂತ ದತ್ತಪೀಠದಿಂದ ಆಯೋಜನೆ
ಮೈಸೂರು: ಮಹಾ ಶಿವರಾತ್ರಿಗೆ ಒಂದು ದಿನ ಮೊದಲೇ ಸಾಂಸ್ಕೃತಿಕ ನಗರಿ ಮೈಸೂರು ಹನುಮಾನ್ ಚಾಲೀಸಾ ಪಾರಾಯಣದ ಭಕ್ತಿಯ ಕಂಪಿನಲ್ಲಿ ತೇಲಿತು.
ಏಕಕಾಲದಲ್ಲಿ ಸಾವಿರಾರು ಭಕ್ತರು ಹನುಮಾನ್ ಚಾಲೀಸಾ ಪಾರಾಯಣ ಮಾಡುವ ಮೂಲಕ ಭಕ್ತಿ ಭಾವದಲ್ಲಿ ಮುಳುಗಿದರು. ಅವಧೂತ ದತ್ತಪೀಠದ ವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಬೃಹತ್ ಸಾಮೂಹಿಕ ಶ್ರಿ ಹನುಮಾನ್ ಚಾಲೀಸಾ ಪಾರಾಯಣ ನೆರವೇರಿತು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಿಕ್ಕಿರಿದು ಸೇರಿದ್ದ 50 ಸಾವಿರಕ್ಕೂ ಹೆಚ್ಚು ಹನುಮ ಭಕ್ತರ ಸಿರಿಕಂಠದಲ್ಲಿ ಹನುಮ ಸ್ಮರಣೆ ದಶ ದಿಕ್ಕಿಗೂ ಮಾರ್ದನಿಸಿತು. ‘ಜಯ ಹನುಮಾನ್ ಜ್ಞಾನ ಗುಣ ಸಾಗರ ಜಯ ಕಪೀಶ ತಿಹಲೋಕ ಉಜಾಗರ, ರಾಮದೂತ ಅತುಲಿತ ಬಲಧಾಮಾ ಅಂಜನಿಪುತ್ರ ಪವನಸುತ ನಾಮಾ ಎಂಬ ಹನುಮ ಸ್ತುತಿ’, ಜಪಗಳು ಸಾವಿರಾರು ಕಂಠಗಳಲ್ಲಿ ಹೊರ ಹೊಮ್ಮಿ ಶ್ರೀ ಹನುವಾನ್ ಚಾಲೀಸಾ ಪಾರಾಯಣ ಮಹಾಯಜ್ಞ ಶ್ರದ್ಧೆ, ಭಕ್ತಿಭಾವದಿಂದ ನೆರವೇರಿತು.
ಬೆಳಗ್ಗೆ 9 ಕ್ಕೆ ಆರಂಭವಾದ ಪಾರಾಯಣದಲ್ಲಿ ಭಕ್ತರಿಗೆ ಹನುಮಾನ್ ಚಾಲೀಸಾ ಮುದ್ರಿತ ಪ್ರತಿಗಳು ಹಾಗೂ ಕೇಸರಿ ಧ್ವಜವನ್ನು ವಿತರಿಸಲಾಯಿತು. ಅವಧೂತ ದತ್ತಪೀಠದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಿದರು. ರಾಮ, ಲಕ್ಷ್ಮಣ, ಜಾನಕಿ ಜೈ ಬೋಲೋ ಹನುಮಾನ್ ಕೀ ಎಂಬ ಜಯ ಘೋಷದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುತಿದ್ದಂತೆ ಭಕ್ತಗಣದಿಂದ ಹರ್ಷೋದ್ಗಾರ ಮೊಳಗಿತು. ಸುಂದರಕಾಂಡದ ಕಥಾ ನಿರೂಪಣೆಯ ಜತೆಗೆ, ನಿರಂತರ 2 ಗಂಟೆಗಳ ಕಾಲ ಪಾರಾಯಣ ನೆರವೇರಿತು. 18 ಬಾರಿ ಹನುಮಾನ್ ಚಾಲೀಸಾ ಪಠಣ ಮಾಡಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಹನುಮನ ಮೂರ್ತಿ ಪ್ರತಿಷ್ಠಾಪಿಸಿ ಹೋಮ, ಯಜ್ಞಗಳು ನೆರವೇರಿಸಲಾಯಿತು.

ಕೇಸರಿಮಯ ಭಕ್ತಗಣ:

ಪಾರಾಯಣಕ್ಕೆ ಭಕ್ತರು ಕೇಸರಿ ವಸ್ತ್ರ ಧರಿಸಿ ಆಗಮಿಸಿದ್ದರು. ಹಲವರು ಕೇಸರಿ ಶಾಲು, ನಾಮಧಾರಿಗಳಾಗಿ ಕಂಗೊಳಿಸಿದರು. ಭಕ್ತರ ಕೈಯಲ್ಲಿ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು. ಮೈದಾನದ ತುಂಬೆಲ್ಲಾ ಕೇಸರಿ ವರ್ಣದ ಧ್ವಜ ಕಳೆಗಟ್ಟಿತ್ತು. ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ಪಾರಾಯಣದಲ್ಲಿ ಭಾಗಿಯಾದರು. ಶ್ರೀರಾಮ ಜಯರಾಮ ಜಯ ಜಯರಾಮ ಹಾಗೂ ಓ ನಮೋ ಹನುಮಂತೇಯ ನಮಃ ಎಂದು ಸ್ತುತಿ ಜಪಿಸಿದರು.
ಯೋಗನರಸಿಂಹ ಸ್ವಾಮಿ ದೇವಸ್ಥಾನದ ಭಾಷ್ಯಂ ಸ್ವಾಮಿ, ಚಲನಚಿತ್ರ ನಟ ವಸಿಷ್ಠಸಿಂಹ, ನಟಿ ಹರಿಪ್ರಿಯಾ, ಶಾಸಕರಾದ ಟಿ.ಎಸ್.ಶ್ರಿವತ್ಸ, ಕೆ.ಹರೀಶ್‌ಗೌಡ, ಜಿ.ಟಿ.ದೇವೇಗೌಡ, ರಮೇಶ್ ಬಂಡಿಸಿದ್ದೇಗೌಡ, ಮಾಜಿ ಶಾಸಕರಾದ ಎ.ರಾಮದಾಸ್, ಎಲ್.ನಾಗೇಂದ್ರ, ಎಂ.ಕೆ ಸೋಮಶೇಖರ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮತ್ತಿತರರು ಹಾಜರಿದ್ದರು.

ಪ್ರಸಾದ, ಹನುಮದ್ ರಕ್ಷೆ ವಿತರಣೆ

ಪಾರಾಯಣ ಮಹಾಯಜ್ಞದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಕುಳಿತ ಸ್ಥಳಕ್ಕೆ ಅನ್ನ ಪ್ರಸಾದ ವಿತರಣೆ ಮಾಡಲಾಯಿತು. ಸ್ವಯಂ ಸೇವಕರು ಪ್ರಸಾದ ಹಾಗೂ ಕುಡಿಯುವ ನೀರು ಹಂಚಿದರು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರಿಗೂ ಹನುಮದ್ ರಕ್ಷಾ ಸೂತ್ರ ನೀಡಲಾಯಿತು.

ವಿಶ್ವ ಶಾಂತಿ ನೆಲಸಲಿ

ವಿಶ್ವದಲ್ಲಿ ಶಾಂತಿ ನೆಲೆಸಬೇಕು, ದೇಶ ಸುಭಿಕ್ಷವಾಗಿರಬೇಕೆಂಬ ಆಶಯದಲ್ಲಿ ಹನುಮಾನ್ ಚಾಲೀಸಾ ಪಾರಾಯಣವನ್ನು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಭಕ್ತರ ಕಷ್ಟಕಾರ್ಪಣ್ಯಗಳು ದೂರವಾಗಿ, ಸನಾತನ ವೃದ್ಧಿಯಾಗಿ, ಭಕ್ತರಿಗೆ ಸನ್ಮಾರ್ಗ, ಭಕ್ತಿ, ಸ್ಥೈರ್ಯ ಪ್ರಾಪ್ತವಾಗಲಿ. ಕಾರ್ಯಸಿದ್ಧಿ ಹನುಮ ನಿಮ್ಮೆಲ್ಲ ಇಷ್ಟಾರ್ಥಗಳನ್ನೂ ಈಡೇರಿಸಲಿ ಎಂದು ದತ್ತ ಪೀಠದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಅಂತ್ಯದಲ್ಲಿ ರಾಷ್ಟ್ರ ಗೀತೆಯನ್ನು ಹಾಡುವುದರೊಂದಿಗೆ ಮಹಾಯಜ್ಞ ಸಂಪನ್ನಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net