ಜ್ಯೋತಿ ತಳಿಗೆ ಪರ್ಯಾಯವಾಗಿ ಸಹ್ಯಾದ್ರಿ ಕೆಂಪು ಮುಕ್ತಿ ತಳಿ ಅಭಿವೃದ್ಧಿ

ನಂಜನಗೂಡು ತಾಲೂಕಿನ ನಗರ್ಲೆ ಗ್ರಾಮದಲ್ಲಿ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ವಿಶ್ವ ಮಣ್ಣು ದಿನಾಚರಣೆ ಹಾಗೂ ಸಹ್ಯಾದ್ರಿ ಕೆಂಪು ಮುಕ್ತಿ ಭತ್ತದ ತಳಿಯ ಕ್ಷೇತ್ರೋತ್ಸವ ಆಚರಿಸಲಾಯಿತು.  ಡಾ. ದುಶ್ಯಂತ್, ಡಾ. ಬಿ.ಎನ್.ಜ್ಞಾನೇಶ್, ಶಾಮರಾಜು, ಎಚ್.ವಿ.ದಿವ್ಯಾ, ಗುರುಸ್ವಾಮಿ ಇದ್ದರು.
ನಂಜನಗೂಡು ತಾಲೂಕಿನ ನಗರ್ಲೆ ಗ್ರಾಮದಲ್ಲಿ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ವಿಶ್ವ ಮಣ್ಣು ದಿನಾಚರಣೆ ಹಾಗೂ ಸಹ್ಯಾದ್ರಿ ಕೆಂಪು ಮುಕ್ತಿ ಭತ್ತದ ತಳಿಯ ಕ್ಷೇತ್ರೋತ್ಸವ ಆಚರಿಸಲಾಯಿತು. ಡಾ. ದುಶ್ಯಂತ್, ಡಾ. ಬಿ.ಎನ್.ಜ್ಞಾನೇಶ್, ಶಾಮರಾಜು, ಎಚ್.ವಿ.ದಿವ್ಯಾ, ಗುರುಸ್ವಾಮಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿಯ ಡಾ. ದುಶ್ಯಂತ್ ಮಾಹಿತಿ
  • ವಿಶ್ವ ಮಣ್ಣು ದಿನಾಚರಣೆ, ಭತ್ತದ ತಳಿ ಸಹ್ಯಾದ್ರಿ ಕೆಂಪು ಮುಕ್ತಿ ಕ್ಷೇತ್ರೋತ್ಸವ
ಸುತ್ತೂರು: ನಂಜನಗೂಡು ತಾಲೂಕಿನ ನಗರ್ಲೆ ಗ್ರಾಮದಲ್ಲಿ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ವಿಶ್ವ ಮಣ್ಣು ದಿನಾಚರಣೆ ಹಾಗೂ ಸಹ್ಯಾದ್ರಿ ಕೆಂಪು ಮುಕ್ತಿ ಭತ್ತದ ತಳಿಯ ಕ್ಷೇತ್ರೋತ್ಸವವನ್ನು ಶುಕ್ರವಾರ ಆಚರಿಸಲಾಯಿತು.
ಕೆಂಪು ಸಹ್ಯಾದಿ ಭತ್ತದ ತಳಿ ಸಂಶೋಧಕ ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ದುಶ್ಯಂತ್ ಮಾತನಾಡಿ, ರೈತರು ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಹಾಗೂ ಕಳೆನಾಶಕಗಳನ್ನು ಉಪಯೋಗಿಸುತ್ತಿರುವುದರಿಂದ ಮಣ್ಣಿನ ಆರೋಗ್ಯ ಕೆಡುತ್ತಿದೆ. ಹಸಿರೆಲೆ ಗೊಬ್ಬರ, ಸಾವಯವ ಗೊಬ್ಬರವನ್ನು ಉಪಯೋಗಿಸಿಕೊಂಡು ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ಮಣ್ಣಿನ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಜ್ಯೋತಿ ಭತ್ತದ ತಳಿಗೆ ಪರ್ಯಾಯವಾಗಿ ಸಹ್ಯಾದ್ರಿ ಕೆಂಪು ಮುಕ್ತಿ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಳಿಯು ಬೆಂಕಿರೋಗ ತಡೆಯುವ ಶಕ್ತಿಯನ್ನು ಹೊಂದಿದೆ. ಸಹ್ಯಾದ್ರಿ ಕೆಂಪು ಮುಕ್ತಿ ತಳಿಯು ಜ್ಯೋತಿ ಭತ್ತದ ತಳಿಗಿಂತ ಕಾಳು ದಪ್ಪವಾಗಿದ್ದು ಹೊಳಪು ಇದೆ. ಇದರಿಂದ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದರು.
ನಂಜನಗೂಡು ಭಾಗದಲ್ಲಿ 500 ಎಕೆರೆಗೂ ಹೆಚ್ಚು ಸಹ್ಯಾದ್ರಿ ಕೆಂಪು ಮುಕ್ತಿಯನ್ನು ಬಿತ್ತನೆ ಮಾಡಿರುವುದು ಸಂತಸ ತಂದಿದೆ. ಸಣ್ಣ ಕೆಂಪು ಅಕ್ಕಿಯ ಸಹ್ಯಾದ್ರಿ ಸಿಂಧೂರ ತಳಿಯನ್ನು ಸಹ ಅಭಿವೃದ್ಧಿಪಡಿಸಲಾಗಿದ್ದು, ಈ ತಳಿಯು ಕಬ್ಬಿಣ, ಪ್ರೋಟೀನ್, ಸತು ಹಾಗೂ ಔಷಧೀಯ ಗುಣಗಳನ್ನು ಒಳಗೊಂಡಿದೆ. ಮುಂದಿನ ಹಂಗಾಮಿನಲ್ಲಿ ಸಹ್ಯಾದ್ರಿ ಸಿಂಧೂರ ತಳಿಯನ್ನು ಬೀಜೋತ್ಪಾದನೆಗಾಗಿ ರೈತರಿಗೆ ನೀಡಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಐಸಿಎಆರ್ ಜೆಎಸ್‌ಎಸ್ ಕೆವಿಕೆಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ.ಎನ್.ಜ್ಞಾನೇಶ್, ಪ್ರಸ್ತುತ ವ್ಯವಸಾಯದ ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಾಗಿದೆ. ರೈತರು ಕಡ್ಡಾಯವಾಗಿ 2 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿ, ತಜ್ಞರ ಸಲಹೆ ಮೇರೆಗೆ ಗೊಬ್ಬರ ಬಳಸಬೇಕು ಎಂದರು.
ಸುಮಾರು 25 ವರ್ಷಗಳಿಂದ ಉಪಯೋಗಿಸುತ್ತಿದ್ದ ಜ್ಯೋತಿ ಭತ್ತದ ತಳಿಯನ್ನು ಬದಲಾಯಿಸುವುದು ತುಂಬ ಅವಶ್ಯಕವಾಗಿತ್ತು. ಈ ನಿಟ್ಟಿನಲ್ಲಿ ಡಾ. ದುಶ್ಯಂತ್ ಅವರು ಸಹ್ಯಾದ್ರಿ ಕೆಂಪು ಮುಕ್ತಿ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೇ, ತುಂಗಾ, ಜಲಮುಕ್ತಿ ಹೀಗೆ ಹಲವಾರು ಭತ್ತದ ತಳಿಗಳನ್ನು ಆಯಾ ಪ್ರದೇಶಗಳ ಅನುಗುಣವಾಗಿ ಅಭಿವೃದ್ಧಿಪಡಿಸಿದ್ದಾರೆ ಎಂದು ತಿಳಿಸಿದರು.
ಕೆವಿಕೆ ವಿಷಯ ತಜ್ಞ ಶಾಮರಾಜು ಕ್ಷೇತ್ರೋತ್ಸವದ ಕುರಿತು ಮಾಹಿತಿ ನೀಡಿದರು. ಕೆವಿಕೆ ವಿಷಯತಜ್ಞರಾದ ಎಚ್.ವಿ.ದಿವ್ಯಾ, ನಗರ್ಲೆ ಗ್ರಾಮದ ಶ್ರೀ ಗುರುಸ್ವಾಮಿ, ಪ್ರಶಾಂತ್ ಹಾಗೂ 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net