ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ
ತಿ.ನರಸೀಪುರ ಕೆಎಸ್‌ಐಸಿ ಜಾಗದಲ್ಲಿ ಮರಗಳಿದ್ದರೂ ಅದನ್ನು ಸರ್ಕಾರ ಪರಿಗಣಿಸುತ್ತಿಲ್ಲ.
ಮೈಸೂರು: ಎಲ್ಲ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಿಡಿಕಾರಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರವು ಕೇಂದ್ರವನ್ನು ದೂರುವುದನ್ನೇ ಅಭ್ಯಾಸ ಮಾಡಿಕೊಂಡಿದೆ. ತಂಬಾಕು ಬೆಲೆ ಸಮಸ್ಯೆಯನ್ನು ಕೇಂದ್ರ ಸರ್ಕಾರವೇ ಬಗೆಹರಿಸುತ್ತದೆ. ಈ ವಿಚಾರವಾಗಿ ರಾಜ್ಯ ಸರ್ಕಾರದ ಬಗ್ಗೆ ಏನು ಹೇಳಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕುರ್ಚಿ ಕಾದಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಇವರೆಲ್ಲ ಅಭಿವೃದ್ಧಿಯನ್ನು ಬಿಟ್ಟು ಅಧಿಕಾರಕ್ಕಾಗಿ ಕಾದಾಟದಲ್ಲಿ ನಿರತರಾಗಿದ್ದಾರೆ. ಇದು ಯಾರಿಗೂ ಒಳ್ಳೆಯದಲ್ಲ. ಅಧಿಕಾರಕ್ಕಾಗಿ ನಡೆಯುತ್ತಿರುವ ಕಿತ್ತಾಟವು ಕಾಂಗ್ರೆಸ್ ಆಂತರಿಕ ವಿಚಾರ. ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.
ಕೆಎಸ್‌ಐಸಿ ಭೂಮಿಯನ್ನು ಕ್ರೀಡಾಂಗಣಕ್ಕೆ ನೀಡುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿರುವ ಎಚ್‌ಎಂಟಿ ಕಾರ್ಖಾನೆ ಅಭಿವೃದ್ಧಿಗೆ ಮುಂದಾದಾಗ ರಾಜ್ಯ ಸರ್ಕಾರವು ಮರಗಳ ಹೆಸರಿನಲ್ಲಿ ವಿರೋಧ ಮಾಡಿತ್ತು.
ಕಾಡು ಅಂಥ ಹೇಳಿ ಅಭಿವೃದ್ಧಿಗೆ ಅವಕಾಶ ಮಾಡಿಕೊಡಲಿಲ್ಲ. ಈಗ ತಿ.ನರಸೀಪುರ ಕೆಎಸ್‌ಐಸಿ ಜಾಗದಲ್ಲಿ ಮರಗಳಿದ್ದರೂ ಅದನ್ನು ಸರ್ಕಾರ ಪರಿಗಣಿಸುತ್ತಿಲ್ಲ. ಕೆಎಸ್‌ಐಸಿ ಜಾಗವನ್ನು ಅದರ ಅಭಿವೃದ್ಧಿಗೆ ಬಳಸಬೇಕು. ಇದು ನಮ್ಮ ಒತ್ತಾಯ. ಈ ಬಗ್ಗೆ ನಮ್ಮ ಹೋರಾಟ ಮಾಡುತ್ತೇವೆ ಎಂದರು.