ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ: ಡಾ.ಎಂ.ಬಿ.ಮಂಜೇಗೌಡ ಒತ್ತಾಯ

* ಚಾಮುಂಡಿಬೆಟ್ಟಕ್ಕೆ ಕೇಬಲ್ ಕಾರ್ ವ್ಯವಸ್ಥೆ ಕಲ್ಪಿಸಿ
Dr. M.B. Manjegowda
ಡಾ.ಎಂ.ಬಿ.ಮಂಜೇಗೌಡ
Published on: 

ವಿಶ್ವವಿಖ್ಯಾತ ಮೈಸೂರು ದಸರಾ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಭೇಟಿ ನೀಡಿದ್ದಾರೆ. ಆದರೆ, ಮೈಸೂರಿನಲ್ಲಿರುವ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸುವಲ್ಲಿ ನಿರೀಕ್ಷಿತ ಮಟ್ಟದ ಕೆಲಸಗಳಾಗಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು ಆದ ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಬಿ.ಮಂಜೇಗೌಡ ಒತ್ತಾಯಿಸಿದರು.

ಮೈಸೂರಿನಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದರೂ, ಅವುಗಳಲ್ಲಿ ಪ್ರವಾಸಿಗರಿಗೆ ಅಗತ್ಯವಾದ ಮೂಲಸೌಕರ್ಯ ಹಾಗೂ ಆಕರ್ಷಕ ವ್ಯವಸ್ಥೆಗಳನ್ನು ಕಲ್ಪಿಸುವತ್ತ ಸರ್ಕಾರ ಮತ್ತು ಜಿಲ್ಲಾಡಳಿತ ಹೆಚ್ಚಿನ ಗಮನ ಹರಿಸಬೇಕು. ಬೇರೆ ರಾಜ್ಯಗಳು ಹಾಗೂ ವಿದೇಶಗಳಲ್ಲಿನ ಪ್ರವಾಸಿ ತಾಣಗಳನ್ನು ಮಾದರಿಯಾಗಿಟ್ಟುಕೊಂಡು, ಮೈಸೂರಿನ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು.

ಚಾಮುಂಡಿಬೆಟ್ಟದಲ್ಲಿರುವ ವ್ಯೆ ಪಾಯಿಂಟ್ ಇದಕ್ಕೆ ಉತ್ತಮ ಉದಾಹರಣೆ. ಅಲ್ಲಿಂದ ಮೈಸೂರು ನಗರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಬೇಕು. ಆದರೆ, ವ್ಯೆ ಪಾಯಿಂಟ್ ಸುತ್ತಲೂ ಗಿಡಗಂಟಿಗಳು ಬೆಳೆದು ದೃಶ್ಯವನ್ನು ಮರೆಮಾಚಿವೆ. ಅವುಗಳನ್ನು ತೆರವುಗೊಳಿಸಿ, ಪ್ರವಾಸಿಗರು ಸುಲಭವಾಗಿ ನಗರದ ಸೌಂದರ್ಯವನ್ನು ವೀಕ್ಷಿಸಲು ಅನುಕೂಲ ಕಲ್ಪಿಸಿಲ್ಲ. ವಾಹನ ನಿಲುಗಡೆ ಸೇರಿದಂತೆ ಹಲವು ಸಮಸ್ಯೆಗಳಿಂದ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಣ್ಣಪುಟ್ಟ ಸಮಸ್ಯೆಗಳನ್ನು ಗುರುತಿಸಿ, ಅಚ್ಚುಕಟ್ಟಾಗಿ ಪರಿಹರಿಸಿದರೆ ಪ್ರವಾಸಿಗರಿಗೆ ಉತ್ತಮ ಅನುಭವ ನೀಡಬಹುದು.

ಚಾಮುಂಡಿಬೆಟ್ಟಕ್ಕೆ ಕೇಬಲ್ ಕಾರ್ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ವಿದೇಶಗಳಲ್ಲಿರುವಂತೆ ಆಧುನಿಕ ಕೇಬಲ್ ಕಾರ್ ವ್ಯವಸ್ಥೆ ಜಾರಿಗೆ ತಂದರೆ ಪ್ರವಾಸಿಗರಿಗೆ ಅನುಕೂಲವಾಗುವುದರ ಜತೆಗೆ, ಬೆಟ್ಟಕ್ಕೆ ತೆರಳುವ ವಾಹನಗಳ ದಟ್ಟಣೆಯನ್ನೂ ಕಡಿಮೆ ಮಾಡಬಹುದು. ಇದರಿಂದ ಪಾರ್ಕಿಂಗ್ ಸಮಸ್ಯೆ ಸೇರಿದಂತೆ ಹಲವು ಸಂಚಾರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ, ಪರಿಸರ ಸಮತೋಲನವನ್ನು ಕಾಪಾಡಿಕೊಂಡು ಕೇಬಲ್ ಕಾರ್ ಯೋಜನೆಯನ್ನು ರೂಪಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.