ಮಕ್ಕಳಲ್ಲಿ ಸಾಮಾಜಿಕ ಚಿಂತನೆ ಬೆಳೆಸಿರಿ

ಕಿರುರಂಗಮಂದಿರದಲ್ಲಿ ರಂಗಾಂತರಂಗ ಏರ್ಪಡಿಸಿರುವ ಮಕ್ಕಳ ನಾಟಕೋತ್ಸವವನ್ನು ರಂಗಕರ್ಮಿ ಮೈಮ್ ರಮೇಶ್ ಉದ್ಘಾಟಿಸಿದರು. ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಡಾ.ಎಂ.ಡಿ. ಸುದರ್ಶನ್, ಅಂಶಿ ಪ್ರಸನ್ನಕುಮಾರ್, ಡಾ.ಎಂ.ಎಸ್. ಅನಿತಾ, ನಾ. ದಿವಾಕರ, ಬಿ.ಆರ್. ರಂಗಸ್ವಾಮಿ, ಮೂರ್ತಿ ದೇರಾಜೆ, ಕೀರ್ತಿರಾಜ್, ವೆಂಕಟೇಶ್  ಈಡಿಗರ್  ಇದ್ದರು.
ಕಿರುರಂಗಮಂದಿರದಲ್ಲಿ ರಂಗಾಂತರಂಗ ಏರ್ಪಡಿಸಿರುವ ಮಕ್ಕಳ ನಾಟಕೋತ್ಸವವನ್ನು ರಂಗಕರ್ಮಿ ಮೈಮ್ ರಮೇಶ್ ಉದ್ಘಾಟಿಸಿದರು. ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಡಾ.ಎಂ.ಡಿ. ಸುದರ್ಶನ್, ಅಂಶಿ ಪ್ರಸನ್ನಕುಮಾರ್, ಡಾ.ಎಂ.ಎಸ್. ಅನಿತಾ, ನಾ. ದಿವಾಕರ, ಬಿ.ಆರ್. ರಂಗಸ್ವಾಮಿ, ಮೂರ್ತಿ ದೇರಾಜೆ, ಕೀರ್ತಿರಾಜ್, ವೆಂಕಟೇಶ್ ಈಡಿಗರ್ ಇದ್ದರು.
Published on
ಮೈಸೂರು: ಮಕ್ಕಳಲ್ಲಿ ಸಾಮಾಜಿಕ ಚಿಂತನೆ ಹಾಗೂ ಮಾನವೀಯತೆ ಬೆಳೆಸಿ ಎಂದು ರಂಗಕರ್ಮಿ ಮೈಮ್ ರಮೇಶ್ ಕರೆ ನೀಡಿದರು.
ರಂಗಾಂತರಂಗ ತಂಡವು ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಏರ್ಪಡಿಸಿರುವ ಎರಡು ದಿನಗಳ ಮಕ್ಕಳ ನಾಟಕೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಇದರ ಜತೆಗೆ ಸಂಸ್ಕೃತಿ, ಸಂಸ್ಕಾರವನ್ನು ಕೂಡ ಕಲಿಸಿ ಎಂದು ಪಾಲಕರಿಗೆ ಸಲಹೆ ಮಾಡಿದರು. ಪ್ರಸ್ತುತ ಸಮಾಜ ಹಾಳಾಗುತ್ತಿದೆ. ಪಾಲಕರು, ಮಕ್ಕಳು ರಿಯಾಲಿಟಿ ಶೋ, ಧಾರಾವಾಹಿಗಳನ್ನು ನೋಡಿಕೊಂಡು ಕೂರುತ್ತಾರೆ. ಇದರಿಂದ ಮಕ್ಕಳ ಮನೋವಿಕಾಸ ಆಗುತ್ತಿಲ್ಲ. ಪಾಲಕರು ಹಾಗೂ ಶಿಕ್ಷಕರು ಮಕ್ಕಳನ್ನು ತಿದ್ದಬೇಕು. ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ, ಮಹಾತ್ಮಗಾಂಧಿ ಮೊದಲಾದ ಮಹನೀಯರ ಬಗ್ಗೆ ತಿಳಿಸಿಕೊಡಬೇಕು ಎಂದು ಅವರು ಹೇಳಿದರು.
ಮಕ್ಕಳ ನಾಟಕಗಳನ್ನು ಪಾಲಕರು ಕೂಡ ನೋಡಿ ಸಂವಾದಿಸಬೇಕು ಎಂದ ಅವರು, ರಂಗಭೂಮಿಯಲ್ಲಿ ಮಾತ್ರ ವಾಕ್ ಸ್ವಾತಂತ್ರ್ಯಕ್ಕೆ ಅವಕಾಶವಿದೆ. ಮೊದಲು ಬೀದಿ ನಾಟಕಗಳ ಮೂಲಕವೇ ಸಮಾಜದ ಓರೆಕೋರೆಗಳನ್ನು ಹೇಳಲಾಗುತ್ತಿತ್ತು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಶಿಕ್ಷಣವು ಮಕ್ಕಳ ಬಾಲ್ಯವನ್ನು ಕಸಿಯಬಾರದು. ಮಕ್ಕಳ ವ್ಯಕ್ತಿತ್ವ ಬೆಳವಣಿಗೆಗೆ ಈ ರೀತಿಯ ನಾಟಕೋತ್ಸವಗಳು ನೆರವಾಗುತ್ತವೆ ಎಂದರು.
ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್. ಅನಿತಾ ಮಾತನಾಡಿ, ಮಕ್ಕಳನ್ನು ಎರಡು- ಮೂರು ಗಂಟೆಗಳಾದರೂ ಸಾಮಾಜಿಕ ಜಾಲತಾಣ, ಟಿವಿ, ಮೊಬೈಲ್‌ಗಳಿಂದ ಹೊರಗೆ ತರಬೇಕು ಎಂಬ ಉದ್ದೇಶದಿಂದ ರಂಗಾಂತರಂಗ ತಂಡದೊಂದಿಗೆ ಒಡಂಬಡಿಕೆ ಮಾಡಿಕೊಂಡು, ಉತ್ತೇಜನ ನೀಡಲಾಗುತ್ತಿದೆ ಎಂದರು.
ಲೇಖಕ ಬಾರುಕೋಲು ಬಿ.ಆರ್. ರಂಗಸ್ವಾಮಿ ಮಾತನಾಡಿ, ಮಕ್ಕಳನ್ನು ವಿಶ್ವಮಾನವರನ್ನಾಗಿ ಮಾಡಬೇಕು. ಅವರಲ್ಲಿ ವಿಶ್ವಪ್ರಜ್ಞೆ ಬೆಳೆಸಬೇಕು ಎಂದರು.
ಲೇಖಕ ನಾ. ದಿವಾಕರ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನಾಟಕಕಾರ ಮೂರ್ತಿ ದೇರಾಜೆ ಮಾತನಾಡಿದರು. ರಂಗಾಂತರಂಗ ತಂಡದ ಅಧ್ಯಕ್ಷ ಕೆಎಂ. ಕೀರ್ತಿರಾಜ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net