ಮೈಸೂರು ವಿಶ್ವವಿದ್ಯಾಲಯದ ನೌಕರರ ಸಹಕಾರ ಪತ್ತಿನ ಸಂಘದ ವತಿಯಿಂದ 2025-26ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ, ನಿವೃತ್ತ ನೌಕರರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಭಾನುವಾರ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿತ್ತು.
ಸಂಘದ ಸದಸ್ಯರ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ, ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ವಿವಿಧ ವೃತ್ತಿಪರ ಕೋರ್ಸ್‌ಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತ ನೌಕರರನ್ನೂ ಸನ್ಮಾನಿಸಲಾಯಿತು.
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಸಾಧನೆಯ ಹಿಂದೆ ಪಾಲಕರ ಪ್ರೋತ್ಸಾಹ, ತ್ಯಾಗ ಹಾಗೂ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಅವರಲ್ಲಿ ಮತ್ತಷ್ಟು ಸಾಧಿಸುವ ಆತ್ಮವಿಶ್ವಾಸ ಮೂಡಿಸುತ್ತವೆ. ಶಿಕ್ಷಣದ ಜತೆಗೆ ಕೌಶಲ, ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಕುಲಸಚಿವ ಹಾಗೂ ಹಣಕಾಸು ಅಧಿಕಾರಿ ಪ್ರೊ.ಮಂಜುನಾಥ್, ಸಂಘದ ಅಧ್ಯಕ್ಷ ಎಂ.ಮಹೇಶ್, ಉಪಾಧ್ಯಕ್ಷ ಎಂ.ಯಾದವ್ ಇತರರಿದ್ದರು.