ಶೋಷಿತ ವರ್ಗಗಳ ದನಿಯಾಗಿದ್ದ ಅರಸು

ಪಿರಿಯಾಪಟ್ಟಣದ ಡಿ.ದೇವರಾಜ ಅರಸು ಕಲಾಭವನದಲ್ಲಿ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111ನೇ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ನಿತಿನ್ ವೆಂಕಟೇಶ್, ಲಕ್ಷ್ಮೀಕಾಂತ್, ಹೊಸಳ್ಳಿ ಕೃಷ್ಣೇಗೌಡ, ದೇವರಾಜು ಅರಸ್ ತುಂಗಾ, ಸಣ್ಣಸ್ವಾಮಿ, ಈ.ಪಿ.ಲೋಕೇಶ್, ರಾಜಣ್ಣ, ಶ್ರೀನಿವಾಸ್, ವಿಷಕಂಠಯ್ಯ, ಪಿ.ಮಹದೇವ್, ಲಕ್ಷ್ಮೀನಾರಾಯಣ, ರವಿ ಇತರರು ಇದ್ದರು.
ಪಿರಿಯಾಪಟ್ಟಣದ ಡಿ.ದೇವರಾಜ ಅರಸು ಕಲಾಭವನದಲ್ಲಿ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111ನೇ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ನಿತಿನ್ ವೆಂಕಟೇಶ್, ಲಕ್ಷ್ಮೀಕಾಂತ್, ಹೊಸಳ್ಳಿ ಕೃಷ್ಣೇಗೌಡ, ದೇವರಾಜು ಅರಸ್ ತುಂಗಾ, ಸಣ್ಣಸ್ವಾಮಿ, ಈ.ಪಿ.ಲೋಕೇಶ್, ರಾಜಣ್ಣ, ಶ್ರೀನಿವಾಸ್, ವಿಷಕಂಠಯ್ಯ, ಪಿ.ಮಹದೇವ್, ಲಕ್ಷ್ಮೀನಾರಾಯಣ, ರವಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಪನ್ಯಾಸಕ ಲಕ್ಷ್ಮೀಕಾಂತ್ ಬಣ್ಣನೆ

ಪಿರಿಯಾಪಟ್ಟಣ:

ಸಾಮಾಜಿಕ ಕ್ರಾಂತಿಯ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಹಿಂದುಳಿದ ಹಾಗೂ ಶೋಷಿತ ವರ್ಗಗಳ ದನಿಯಾಗಿ ಕಾರ್ಯನಿರ್ವಹಿಸಿದ್ದರು ಎಂದು ರಾವಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಲಕ್ಷ್ಮೀಕಾಂತ್ ಹೇಳಿದರು.

ಪಟ್ಟಣದ ಡಿ.ದೇವರಾಜ ಅರಸು ಕಲಾಭವನದಲ್ಲಿ ತಾಲೂಕು ಆಡಳಿತ, ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರಸು ಅವರ ಆಡಳಿತ ಅವಧಿಯಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಮಹಾನ್ ನಾಯಕರಾಗಿದ್ದರು ಎಂದರು.
ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಭೂಮಿ ಇಲ್ಲದ ರೈತರಿಗೆ ಭೂಮಿಯ ಹಕ್ಕು ದೊರಕುವಂತೆ ಮಾಡಿದ್ದರು. ಜೀತಪದ್ಧತಿಯನ್ನು ನಿರ್ಮೂಲನೆಗೊಳಿಸಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹಾವನೂರು ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದು, ಮೀಸಲಾತಿ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಹೊಸ ಆಯಾಮ ನೀಡಿದರು ಎಂದರು.
ಮೈಸೂರು ರಾಜ್ಯವನ್ನು 1973ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡ ದೇವರಾಜ ಅರಸು ಅವರು ರಾಜ್ಯದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಏಕತೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ಬಡವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಶೋಷಿತ ವರ್ಗಗಳ ಪರವಾಗಿ ದನಿ ಎತ್ತುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ, ಸಮಾನತೆ ಹಾಗೂ ಅವಕಾಶ ದೊರಕಬೇಕು ಎಂಬ ದೃಢ ಸಂಕಲ್ಪದೊಂದಿಗೆ ಆಡಳಿತ ನಡೆಸಿದ್ದರು. 1972ರಿಂದ 1980ರವರೆಗಿನ ಅರಸು ಅವರ ಆಡಳಿತ ಅವಧಿಯನ್ನು ಕರ್ನಾಟಕದ ಸಾಮಾಜಿಕ ಪರಿವರ್ತನೆಯ ಸುವರ್ಣಯುಗವೆಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿ, ದೇವರಾಜ ಅರಸು ಅವರ ಜನಪರ ಆಡಳಿತ ಮತ್ತು ಅಭಿವೃದ್ಧಿ ಯೋಜನೆಗಳ ಫಲವನ್ನು ಇಡೀ ರಾಜ್ಯದ ಜನರು ಅನುಭವಿಸುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹೊಸಳ್ಳಿ ಕೃಷ್ಣೇಗೌಡ, ಅರಸು ವಂಶಸ್ಥ ಹಾಗೂ ವಕೀಲ ದೇವರಾಜ ಅರಸ್ ತುಂಗಾ ಮತ್ತು ಸಣ್ಣಸ್ವಾಮಿ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ತಾಲೂಕಿನ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳನ್ನು ಹಾಗೂ ಉತ್ತಮ ಸೇವೆ ಸಲ್ಲಿಸಿದ ಅಡುಗೆ ಸಿಬ್ಬಂದಿ ಮತ್ತು ಸಹಾಯಕರನ್ನು ಈ ವೇಳೆ ಸನ್ಮಾನಿಸಲಾಯಿತು.
ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಈ.ಪಿ. ಲೋಕೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಜಣ್ಣ, ಉಪ ತಹಸೀಲ್ದಾರ್ ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷ ವಿಷಕಂಠಯ್ಯ, ಕಾಂಗ್ರೆಸ್ ಮುಖಂಡ ಪಿ.ಮಹದೇವ್, ಕೆಡಿಪಿ ಸದಸ್ಯ ಲಕ್ಷ್ಮೀನಾರಾಯಣ, ಪುರಸಭೆ ಮಾಜಿ ಸದಸ್ಯ ರವಿ, ರೈತ ಸಂಘದ ಮುಖಂಡ ವಿಜಯರಾಜೇ ಅರಸ್ ಸೇರಿದಂತೆ ಬಿಸಿಎಂ ನಿಲಯಗಳ ವಿದ್ಯಾರ್ಥಿಗಳು, ಮೇಲ್ವಿಚಾರಕರು, ಅಡುಗೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net