ತಂಬಾಕು ಖರೀದಿ ಪ್ರಮಾಣ ಹೆಚ್ಚಿಸುವಂತೆ ಆಗ್ರಹ

ಹುಣಸೂರು ರಸ್ತೆಯ ಇಲವಾಲದಲ್ಲಿರುವ ಐಟಿಸಿ ಕಂಪನಿ ಎದುರು ಕಾಂಗ್ರೆಸ್ ಮುಖಂಡರು, ರೈತರು ಪ್ರತಿಭಟನೆ ನಡೆಸಿದರು. ಎಂ.ಲಕ್ಷ್ಮಣ್, ಅರುಣ್ ಕುಮಾರ್, ನಿತಿನ್ ವೆಂಕಟೇಶ್, ಬಿ.ಎಂ.ರಾಮು, ಶ್ರೀನಿವಾಸ್, ಮಹೇಶ್, ಬೋರೇಗೌಡ, ಮಹದೇವಸ್ವಾಮಿ ಇದ್ದರು.
ಹುಣಸೂರು ರಸ್ತೆಯ ಇಲವಾಲದಲ್ಲಿರುವ ಐಟಿಸಿ ಕಂಪನಿ ಎದುರು ಕಾಂಗ್ರೆಸ್ ಮುಖಂಡರು, ರೈತರು ಪ್ರತಿಭಟನೆ ನಡೆಸಿದರು. ಎಂ.ಲಕ್ಷ್ಮಣ್, ಅರುಣ್ ಕುಮಾರ್, ನಿತಿನ್ ವೆಂಕಟೇಶ್, ಬಿ.ಎಂ.ರಾಮು, ಶ್ರೀನಿವಾಸ್, ಮಹೇಶ್, ಬೋರೇಗೌಡ, ಮಹದೇವಸ್ವಾಮಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರವೇ ಬೆಂಬಲ ಬೆಲೆಯಲ್ಲಿ ತಂಬಾಕು ಖರೀದಿ ಮಾಡಲಿ
  • ರೈತರ ಸಂಕಷ್ಟಕ್ಕೆ ಯಾರಿಂದಲೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ
ಮೈಸೂರು:ತಂಬಾಕು ಖರೀದಿ ಪ್ರಮಾಣ ಹೆಚ್ಚಿಸಬೇಕು, ಖರೀದಿ ದರ ಏರಿಕೆ ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೈತರು ಪ್ರತಿಭಟನೆ ನಡೆಸಿದರು.
ನಗರದ ಹುಣಸೂರು ರಸ್ತೆಯ ಇಲವಾಲದಲ್ಲಿರುವ ಐಟಿಸಿ ಕಂಪನಿ ಎದುರು ಪ್ರತಿಭಟನೆ ನಡೆಸಿ, ಪ್ರತಿ ಕೆಜಿ ತಂಬಾಕಿಗೆ 320 ರೂ. ನೀಡಬೇಕು. ಖರೀದಿ ಪ್ರಮಾಣವನ್ನು ಶೇ.20ರಿಂದ 50ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ತಂಬಾಕು ಮಂಡಳಿಯವರು ಐಟಿಸಿ ಕಂಪನಿ ಹೇಳಿದಂತೆ ಕೇಳುತ್ತಿದ್ದಾರೆ. 10 ಕೋಟಿ ಟನ್ ಬೆಳೆಯಬೇಕೆಂದು ರೈತರಿಗೆ ಮಂಡಳಿ ಗುರಿ ನೀಡಿದ್ದು, ರೈತರು 8.5 ಕೋಟಿ ಟನ್ ಮಾತ್ರ ಬೆಳೆದಿದ್ದಾರೆ. ಆದರೂ ಖರೀದಿ ಪ್ರಮಾಣ ಶೇ.20ರಷ್ಟೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೋರಾಟ ಮಾಡುವ ವಿಷಯ ತಿಳಿದು ಗುರುವಾರದಿಂದ ಶೇ.40ರಷ್ಟು ಹೆಚ್ಚಿಸಿದ್ದು, ಕೆ.ಜಿ ತಂಬಾಕಿಗೆ 220 ರೂ.ನಿಂದ 320 ರೂ.ರವರೆಗೆ ಕೊಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಖರೀದಿ ಪ್ರಮಾಣ ಹೆಚ್ಚಿಸುವ ಜತೆಗೆ ಕೆಜಿಗೆ 350 ರೂ. ದರ ನೀಡಬೇಕು ಎಂದು ಒತ್ತಾಯಿಸಿದರು.
ಆಂಧ್ರಪ್ರದೇಶದ ಬೆಳೆಗಾರರಿಗೆ ಒಂದು ನ್ಯಾಯ, ರಾಜ್ಯದ ರೈತರಿಗೆ ಒಂದ ನ್ಯಾಯವಾಗಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೇವಲ ಮಾತಿನಲ್ಲಿ ಹೇಳುತ್ತಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಈಗಾಗಲೇ ಟನ್‌ಗಟ್ಟಲೇ ಕಡಿಮೆ ಬೆಲೆಗೆ ಕಂಪನಿಗೆ ಮಾರಾಟ ಮಾಡಿದ್ದಾರೆ. ಇದರ ನಷ್ಟ ತುಂಬಿಕೊಡುತ್ತಾರೆಯೇ. ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿದ ನಂತರವೇ ತಂಬಾಕು ದರ ಕುಸಿಯಿತು. ನಂತರ ಇತ್ತ ತಿರುಗಿಯೂ ನೋಡಿಲ್ಲ. ಕಾಂಗ್ರೆಸ್ ಬಯ್ದುಕೊಂಡು ಓಡಾಡುತ್ತಿದ್ದಾರೆ. 12 ವರ್ಷದಿಂದಲೂ ಕೇಂದ್ರ ಬಿಜೆಪಿ ಸರ್ಕಾರ ರೈತರನ್ನು ಕೊಲ್ಲುವ ಕೆಲಸ ಮಾಡುತ್ತಿದೆ. ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ತಂಬಾಕು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಸ್ಪಂದಿಸುವ ಕೆಲಸ ಮಾಡಿಲ್ಲ ಎಂದು ದೂರಿದರು.
ಆಂಧ್ರಪ್ರದೇಶದಲ್ಲಿ ಬೆಳೆಯುವ ಹೊಗೆಸೊಪ್ಪು ನಂಬರ್ ಒನ್ ಗುಣಮಟ್ಟದ್ದೆಂದು ಬಿಂಬಿಸಲಾಗಿದೆ. ಆದರೆ, ಹುಣಸೂರು, ಪಿರಿಯಾಪಟ್ಟಣದ ವರ್ಜೀನಿಯಾ ಹೊಗೆಸೊಪ್ಪಿಗೆ ನಿವ್ವಳ ಆದಾಯ ಪ್ರತಿ ಕೆ.ಜಿ.ಗೆ ಐಟಿಸಿ ಕಂಪನಿಗೆ 6 ಸಾವಿರ ರೂ.ಸಿಗುತ್ತದೆ. ಆದರೆ, ಅದರಲ್ಲಿ ಕಷ್ಟಪಟ್ಟು ಬೆಳೆದ ರೈತರಿಗೆ ಸಿಗುವುದು ಕೇವಲ 220 ರೂ. ದರ ಕುಸಿದಿರುವುದರಿಂದ ಕೇಂದ್ರ ಸರ್ಕಾರವೇ ಬೆಂಬಲ ಬೆಲೆಯಲ್ಲಿ ತಂಬಾಕು ಖರೀದಿ ಮಾಡಲಿ. ಮೂರು ದಿನದಲ್ಲಿ ಬೇಡಿಕೆ ಈಡೇರಿಸದಿದ್ದರೆ, ಶಾಶ್ವತವಾಗಿ ಬೀಗ ಹಾಕಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅರುಣ್ ಕುಮಾರ್, ಕಾಂಗ್ರೆಸ್ ಮುಖಂಡ ನಿತಿನ್ ವೆಂಕಟೇಶ್, ಬಿ.ಎಂ.ರಾಮು, ರೈತರಾದ ಶ್ರೀನಿವಾಸ್, ಮಹೇಶ್, ಬೋರೇಗೌಡ, ಮಹದೇವಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net