ಇತ್ತೀಚಿನ ದಿನಗಳಲ್ಲಿ ಬೆಣ್ಣೆಹಣ್ಣಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಇದು ರೈತರಿಗೆ ಹೆಚ್ಚಿನ ಆದಾಯ ತಂದುಕೊಡುವ ತೋಟಗಾರಿಕಾ ಬೆಳೆಯಾಗಿದೆ ಎಂದು ನಿವೃತ್ತ ಜಂಟಿ ಕೃಷಿ ನಿರ್ದೇಶಕ ಡಾ.ವಿಷಕಂಠ ಹೇಳಿದರು.
ತೋಟಗಾರಿಕಾ ಪಿತಾಮಹ ಡಾ.ಎಂ.ಎಚ್.ಮರಿಗೌಡ ಅವರ ಜನ್ಮದಿನದ ಅಂಗವಾಗಿ ಐಸಿಎಆರ್ ಐಐಎಚ್‌ಆರ್ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ತೋಟಗಾರಿಕಾ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ ಸಹಯೋಗದಲ್ಲಿ ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ತೋಟಗಾರಿಕಾ ದಿನಾಚರಣೆ, ಬೆಣ್ಣೆಹಣ್ಣಿನ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.
ಬೆಣ್ಣೆಹಣ್ಣಿಗೆ ಕೃಷಿಯಲ್ಲಿ ಮಾರುಕಟ್ಟೆಯ ಅಗತ್ಯತೆ, ಸೂಕ್ತ ತಳಿಗಳ ಆಯ್ಕೆ, ವೈಜ್ಞಾನಿಕ ಬೇಸಾಯ ಪದ್ಧತಿ ಹಾಗೂ ಗುಣಮಟ್ಟದ ಸಸಿಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವೈಜ್ಞಾನಿಕ ಮಾರ್ಗದರ್ಶನದೊಂದಿಗೆ ಬೆಳೆ ಬೆಳೆದರೆ ಮಾತ್ರ ಉತ್ತಮ ಉತ್ಪಾದನೆ ಮತ್ತು ಸ್ಥಿರ ಆದಾಯ ಗಳಿಸಲು ಸಾಧ್ಯ ಎಂದು ಹೇಳಿದರು.
ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ, ಹಿರಿಯ ವಿಜ್ಞಾನಿ ಡಾ.ಬಿ.ಎನ್.ಜ್ಞಾನೇಶ್ ಮಾತನಾಡಿ, ಬೆಣ್ಣೆಹಣ್ಣು ಭವಿಷ್ಯದಲ್ಲಿ ಉತ್ತಮ ವ್ಯವಹಾರಿಕ ಬೆಳೆಯಾಗುವ ಸಾಧ್ಯತೆಗಳಿದೆ. ರೈತರು ಗುಣಮಟ್ಟದ ಸಸಿ ನೆಟ್ಟು, ಸಮಗ್ರ ಬೆಳೆ ನಿರ್ವಹಣೆ ಪದ್ಧತಿ ಅಳವಡಿಸಿಕೊಂಡು ಆದಾಯ ಗಳಿಸಬೇಕು.
ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಮಾರ್ಗದರ್ಶನ , ತರಬೇತಿ ಕಾರ್ಯಕ್ರಮಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸದುಪಯೋಗಪಡಿಸಿಕೊಳ್ಳಿ: ನಂಜನಗೂಡು ಸಹಾಯಕ ತೋಟಗಾರಿಕಾ ನಿರ್ದೇಶಕ ಚಂದ್ರು ಮಾತನಾಡಿ, ತೋಟಗಾರಿಕಾ ಇಲಾಖೆಯ ವಿವಿಧ ಯೋಜನೆಗಳು, ಸಹಾಯಧನ, ನರ್ಸರಿ ಅಭಿವೃದ್ಧಿ, ತೋಟ ಸ್ಥಾಪನೆ, ನೀರಾವರಿ ಹಾಗೂ ಇತರ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ರೈತರು ಇಲಾಖೆಯ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಅನುಭವ ವಿನಿಮಯ: ಜೆಎಸ್‌ಎಸ್ ಮಹಾವಿದ್ಯಾಪೀಠದ ತೋಟಗಾರಿಕಾ ನಿರ್ದೇಶಕ ಶಿವಶಂಕರಪ್ಪ ಅವರು ಡಾ. ಎಂ.ಎಚ್.ಮರಿಗೌಡ ಅವರ ಜೀವನ ಸಾಧನೆ, ಅವರ ಕೊಡುಗೆ ಹಾಗೂ ಅವರೊಂದಿಗೆ ಕಾರ್ಯನಿರ್ವಹಿಸಿದ ಸಂದರ್ಭಗಳ ಅನುಭವವನ್ನು ಹಂಚಿಕೊಂಡರು.
ಮರಿಗೌಡ ಅವರ ದೂರದೃಷ್ಟಿಯ ಫಲವಾಗಿ ರಾಜ್ಯದಲ್ಲಿ ಹಲವು ವಾಣಿಜ್ಯ ತೋಟಗಾರಿಕಾ ಬೆಳೆಗಳು ಜನಪ್ರಿಯವಾಗಿವೆ ಎಂದು ಹೇಳಿದರು.
ತಾಂತ್ರಿಕ ಅಧಿವೇಶನದಲ್ಲಿ ಕೃಷಿ ವಿಜ್ಞಾನಿ ಡಾ.ಮುರಳೀಧರ ಅವರು ಬೆಣ್ಣೆಹಣ್ಣಿನ ಇತಿಹಾಸ, ಡಾ. ಎಂ. ಎಚ್. ಮರಿಗೌಡ ಅವರು ಕರ್ನಾಟಕದಲ್ಲಿ ಈ ಬೆಳೆಯನ್ನು ಜನಪ್ರಿಯಗೊಳಿಸಿದ ಹಿನ್ನೆಲೆ, ವಿವಿಧ ತಳಿಗಳು, ಮೌಲ್ಯವರ್ಧನೆ, ಪೌಷ್ಟಿಕ ಮಹತ್ವ, ಸಮಗ್ರ ಪೋಷಕಾಂಶ ನಿರ್ವಹಣೆ, ಕೀಟ-ರೋಗ ನಿರ್ವಹಣೆ, ಕೊಯ್ಲಿನ ನಂತರದ ನಿರ್ವಹಣೆ, ದೇಶೀಯ ಮತ್ತು ರಫ್ತು ಮಾರುಕಟ್ಟೆಯ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ಡಾ.ನಯನ್ ದೀಪಕ್, ಡಾ. ರವೀಂದ್ರ, ಡಾ. ವಿಶ್ವನಾಥ್, ಡಾ.ಜಿ. ಎಂ. ವಿನಯ್ , ಡಾ. ಪ್ರಸಾದ್, ಡಾ. ದೀಪಕ್, ಡಾ. ರಕ್ಷಿತ್, ದಿವ್ಯಾ, ಶಾಮರಾಜ್ ಸೇರಿದಂತೆ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 120 ರೈತರು ಭಾಗವಹಿಸಿದ್ದರು.