ಹಾಲಿ ಭೂಮಿಯಲ್ಲಿ ಮೊದಲಿನಿಂದಲೂ ತೆಕ್ಲಹಾಡಿ ಹಾಗೂ ಮಾದ್ಯಯನಕಟ್ಟೆ ಹಾಡಿಗಳ ಕುಟುಂಬಗಳು ವಾಸ ಇರುವುದರಿಂದ ಅವರಿಗೆ ಪುನಃ ಸಾಗುವಳಿ ಪತ್ರ ನೀಡಲು ಒತ್ತಾಯಿಸಲಾಗಿದೆ. ಅಲ್ಲದೆ ನೆರಳಕುಪ್ಪೆ ಬಿ ಹಾಡಿಯ 6 ಕುಟುಂಬಗಳು ನಿರ್ವಹಿಸುವ 12 ಎಕರೆ ಭೂಮಿಗೆ ಬೇರೆಯವರು ಸಾಗುವಳಿ ಪತ್ರ ಪಡೆದಿರುವುದರಿಂದ ಅವರ ಸಾಗುವಳಿ ರದ್ದುಗೊಳಿಸಿ 46 ವರ್ಷಗಳಿಂದ ಅನುಭವದಲ್ಲಿ ಇರುವ ಆದಿವಾಸಿಗಳಿಗೆ ಹಕ್ಕು ಪತ್ರ ನೀಡಲು ವಿನಂತಿಸಲಾಗಿದೆ. ಆದರೆ ಇನ್ನು ಯಾವ ಕ್ರಮವನ್ನೂ ಜರುಗಿಸದ ಕಾರಣ ಮತ್ತೆ ಸಚಿವರು, ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್‌ಗೆ ಪತ್ರಬರೆದು ತುರ್ತಾಗಿ ಕ್ರಮ ವಹಿಸಲು ಮನವಿ ಮಾಡಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ಸೂಕ್ತ ಉಪಕ್ರಮಗಳನ್ನು ಕೈಗೊಂಡು ಆದಿವಾಸಿಗಳ ಭೂಮಿಯ ಹಕ್ಕನ್ನು ಉಳಿಸಿಕೊಡಬೇಕು ಎಂದು ಆಗ್ರಹಿಸಿದರು.