ಸಂಚಲನ ಮೈಸೂರು ತಂಡಕ್ಕೆ ದಶಮಾನೋತ್ಸವ ಸಡಗರ

ಸಂಚಲನ ಮೈಸೂರು ತಂಡಕ್ಕೆ ದಶಮಾನೋತ್ಸವ
ಸಂಚಲನ ಮೈಸೂರು ತಂಡಕ್ಕೆ ದಶಮಾನೋತ್ಸವ
Published on

ಪ್ರಮುಖ ಮುಖ್ಯಾಂಶಗಳು

  • ರಂಗ ಸಂಭ್ರಮ ಪ್ರಯುಕ್ತ ವಿವಿಧ ನಾಟಕ ಪ್ರದರ್ಶನ
  • ರಂಗಾಯಣದ ಕಿರು ರಂಗಮಂದಿರದಲ್ಲಿ ಆಯೋಜನೆ
  • ಏಳು ದಿನ ರಂಗ ಸಂಭ್ರಮ
ಅವಿನಾಶ್ ಜೈನಹಳ್ಳಿ ಮೈಸೂರು
ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ, ಮಕ್ಕಳ ಸಕಾರಾತ್ಮಕ ಬೆಳವಣಿಗೆಗಾಗಿ ಸದಾ ಚಲನಶೀಲವಾಗಿ ದುಡಿಯುತ್ತಿರುವ ‘ಸಂಚಲನ ಮೈಸೂರು’ ಮಕ್ಕಳ ರಂಗ ತಂಡಕ್ಕೀಗ ದಶಮಾನೋತ್ಸವ ಸಂಭ್ರಮ.
ಜನಪದ ಪ್ರಕಾರಗಳು, ರಂಗಭೂಮಿ, ಕಲೆ, ಪರಿಸರ, ಸಮಾಜದ ಮುಂತಾದ ಸಂವೇದನಾಶೀಲ ವಿಷಯಗಳನ್ನು ಕ್ರಿಯಾಶೀಲವಾದ ರಂಗಚಟುವಟಿಕೆಗಳ ಮೂಲಕ ಮಕ್ಕಳಿಗೆ ಅರಿವು ಮೂಡಿಸಿ ಸೃಜನಶೀಲ ಸಮಾಜಕ್ಕೆ ಅವರನ್ನು ಕೊಡುಗೆಯಾಗಿ ಕೊಡುವುದೇ ಸಂಚಲನದ ಮುಖ್ಯ ಉದ್ದೇಶವಾಗಿದೆ. ಅದರ ಜತೆಗೆ ಮಕ್ಕಳ ಹಾಡು, ನೃತ್ಯ, ನಾಟಕ, ಮಕ್ಕಳ ಕುರಿತ ಪುಸ್ತಕಗಳ ಪ್ರಕಾಶನ, ಮಕ್ಕಳ ಕವಿಗೋಷ್ಠಿ, ಚಿತ್ರಕಲೆ, ಮಕ್ಕಳ ರಂಗಹಬ್ಬ, ಮಕ್ಕಳ ನಾಟಕೋತ್ಸವ, ಹೀಗೆ ಹತ್ತು-ಹಲವು ಮಕ್ಕಳ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಸಕಾರಾತ್ಮಕವಾಗಿ ಹೊರತೆಗೆಯುವ ಮಹತ್ತರವಾದ ಕೆಲಸವನ್ನು ಕೈಗೆತ್ತಿಕೊಂಡು ಸಂಚಲನ ಮೈಸೂರು ಜಾಗತಿಕ ಸಮಾಜದಲ್ಲಿ ಸಂಚಲನೆಯನ್ನುಂಟು ಮಾಡುತ್ತಿದ್ದು, ಇದೀಗ ದಶಮಾನೋತ್ಸವ ಆಚರಣೆಗೆ ಮುಂದಾಗಿದೆ.
ಜಾಗತೀಕ ಯುಗದಲ್ಲಿ ಮಕ್ಕಳ ಬದುಕು ಯಾಂತ್ರಿಕವಾಗುವುದರ ಜತೆಗೆ ಸ್ಥಿರತೆಯೆಡೆಗೆ (ಸಿದ್ಧ ಮಾದರಿ) ಸಾಗುತ್ತಿದೆ. ಹಲವು ರೀತಿಯ ಸಹಜತೆಗಳಿಂದ ದೂರವಾಗಿ ಕೃತಕ ವರ್ತನೆಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ಅಂತರ್ಮುಖಿಯಾಗುತ್ತಿದ್ದಾರೆ. ಅನಾರೋಗ್ಯಕರ ಸ್ಪರ್ಧೆಯಿಂದ ಅನಾರೋಗ್ಯಕರ ಬೆಳವಣಿಗೆಯು ಮಾಧ್ಯಮಗಳಿಂದ ನಡೆಯುತ್ತಿದೆ. ಸಾಮಾಜಿಕರಣವು ಯಂತ್ರಗಳಿಂದ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಸಹಜವಾಗಿ ಅಗತ್ಯವಾದುದನ್ನು ಕಲಿಸುವ ಕೆಲಸವನ್ನು ಸಂಚಲನ ಮೈಸೂರು ಹತ್ತು ವರ್ಷಗಳಿಂದ ರಂಗ ಮಾಧ್ಯಮದ ಮೂಲಕ ಮಾಡುತ್ತಿದೆ.

ಏಳು ದಿನ ರಂಗ ಸಂಭ್ರಮ

ಜ.31 ರಿಂದ ಫೆ.6 ರವರೆಗೆ ರಂಗಾಯಣದ ಕಿರು ರಂಗಮಂದಿರದಲ್ಲಿ ಸಂಚಲನ ದಶಮಾನೋತ್ಸವ ರಂಗ ಸಂಭ್ರಮವನ್ನು ಆಯೋಜಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಂಗಳೂರಿನ ಅರಳಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ಪ್ರತಿದಿನ ನಾಟಕ, ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಜ.31 ರಂದು ಸಂಜೆ 6 ಗಂಟೆಗೆ ರಂಗ ಸಂಭ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ರಂಗಕರ್ಮಿ ಡಾ.ಎಚ್.ಜನಾರ್ದನ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಅಹಿಂದ ಜವರಪ್ಪ ಭಾಗವಹಿಸಲಿದ್ದಾರೆ.
ಇದೇ ವೇಳೆ ಸಚ್ಚಿದಾನಂದ ಆರ್ಚಾಯ ಅವರಿಂದ ‘ಕೊಳಲು ವಾದನ’, ಶಕ್ತಿಧಾಮ ವಿದ್ಯಾಶಾಲಾ ಮಕ್ಕಳಿಂದ ‘ಜಾನಪದ ನೃತ್ಯ’ ಹಾಗೂ ‘ಕೆಂಪು ಹೂ’ ನಾಟಕ ಪ್ರದರ್ಶನ ನಡೆಯಲಿದೆ.
ಫೆ.1 ರಂದು ಬೆಳಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಕೆ.ಕೆ.ದೇವಾನಂದ ವರಪ್ರಸಾದ ಮತ್ತು ತಂಡದಿಂದ ‘ಹೋರಾಟದ ಹಾಡುಗಳು’, ನೇಪಥ್ಯ ರಂಗ ತಂಡದಿಂದ ದೇವನೂರು ಮಹಾದೇವ ಅವರ ‘ಒಡಲಾಳ’ ನಾಟಕ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ 3 ಗಂಟೆಗೆ ‘ರಂಗಗೀತೆಗಳು’ ಹಾಗೂ ಎಸ್ ಟಿ ಜಿ ಪಬ್ಲಿಕ್ ಶಾಲೆಯ ಮಕ್ಕಳಿಂದ ‘ಚಿತ್ರಪಟ’ ನಾಟಕ ಪ್ರದರ್ಶನಗೊಳ್ಳಲಿದೆ. ಸಂಜೆ 6 ಗಂಟೆಗೆ ಭರತನಾಟ್ಯ ಹಾಗೂ ‘ವಿಷಜ್ವಾಲೆ’ ನಾಟಕ ಪ್ರದರ್ಶನ ನಡೆಯಲಿದೆ. ಫೆ.2 ರಂದು 6 ಗಂಟೆಗೆ ‘ಜನಪದ ಗೀತೆಗಳ ಗಾಯನ’ ಹಾಗೂ ‘ದು-ರೋಧನ’ ನಾಟಕ ಪ್ರದರ್ಶನಗೊಳ್ಳಲಿದೆ. ಫೆ.3 ರಂದು ಬೆಳಗ್ಗೆ 11 ಗಂಟೆಗೆ ಮಹಾಜನ ಪ್ರಥಮ ದರ್ಜೆ ಕಾಲೇಜು ತಂಡದಿಂದ ‘ಊರ ಸುಟ್ಟರೂ ಹನುಮಪ್ಪ ಹೊರಗ’ ನಾಟ ಪ್ರದರ್ಶನ ಹಾಗೂ ಸಂಜೆ 6 ಗಂಟೆಗೆ ‘ರಂಗಗೀತೆ ಗಾಯನ’, ಸಂಚಲನ ಮೈಸೂರು ರಂಗತಂಡದಿಂದ ‘ಹರಕೆಯ ಕುರಿ’ ನಾಟಕ
ಪ್ರದರ್ಶನ ನಡೆಯಲಿದೆ.
ಫೆ.4 ರಂದು ಸಂಜೆ 6 ಗಂಟೆಗೆ ‘ಜನಪದ ಗೀತೆಗೆಳ ಗಾಯನ’, ‘ಭರತನಾಟ್ಯ’ ಹಾಗೂ ಅನೇಕ ಬೆಂಗಳೂರು ತಂಡದಿಂದ ‘ಲೈಟ್ಸ್ ಆಫ್’ ನಾಟಕ ಪ್ರದರ್ಶನ ನಡೆಯಲಿದೆ. 5 ರಂದು ಸಂಜೆ 6 ಗಂಟೆಗೆ ‘ಜನಪದ ಗೀತೆಗಳ ಗಾಯನ’, ರಂಗರಥ ತಂಡದಿಂದ ‘ಇದ್ದಾಗ ನಿಮ್ದು ಕದ್ದಾಗ ನಮ್ದು’ ನಾಟಕ ಪ್ರದರ್ಶನ ನಡೆಯಲಿದೆ. ಫೆ.6 ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ರಂಗಕರ್ಮಿ ಪ್ರಸನ್ನ, ಶಾಸಕ ದರ್ಶನ್ ಧ್ರುವನಾರಾಯಣ್, ಅಪರ ಜಿಲ್ಲಾಧಿಕಾರಿ ಡಾ. ಪಿ.ಶಿವರಾಜು, ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಭಾಗವಹಿಸಲಿದ್ದಾರೆ. ಬಳಿಕ ಸಂಚಲನ ಮೈಸೂರು ರಂಗತಂಡದಿಂದ ‘ಎರಡೆರಡ್ಲಾ ಐದು’ ನಾಟಕ ಪ್ರದರ್ಶನಗೊಳ್ಳಲಿದೆ.
"

ಕರ್ನಾಟಕ ಕಲಾ ಪರಂಪರೆಯಲ್ಲಿ ರಂಗಭೂಮಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಜನರ ನೋವು, ದುಖಃ, ದುಮ್ಮಾನ, ಸಿಟ್ಟು ಸೆಡವು ಎಲ್ಲವುಗಳ ನೇರ ಅಭಿವ್ಯಕ್ತಿ ರಂಗಭೂಮಿಯಲ್ಲಿ ಸಾಧ್ಯ. ಅಂತಯೇ ಮನುಷ್ಯನ ಅಂತರಂಗಕ್ಕೂ ಬಹಿರಂಗಕ್ಕೂ ನೇರ ಮುಖಾಮುಖಿ ಈ ರಂಗಭೂಮಿ, ಜನಪದ ಪ್ರಕಾರಗಳು, ಸಂಗೀತ, ನೃತ್ಯ, ಕಲೆ, ಸಾಹಿತ್ಯ, ಪರಿಸರ ಮುಂತಾದ ಸಂವೇದನಾಶೀಲ ವಿಷಯಗಳ ಬಗ್ಗೆ ಕ್ರಿಯಾಶೀಲ ರಂಗಚಟುವಟಿಕೆಗಳ ಮೂಲಕ ಅರಿವು ಮೂಡಿಸಿ ಸೃಜನಶೀಲ ಸಮಾಜಕ್ಕೆ ಯುವಜನಾಂಗವನ್ನು ಕೊಡುಗೆಯಾಗಿ ಕೊಡುವುದೇ ಸಂಚಲನದ ಮುಖ್ಯ ಉದ್ದೇಶವಾಗಿದೆ. ರಾಜ್ಯದ ಹಾಗೂ ಅಕ್ಕ ಪಕ್ಕದ ಜಿಲ್ಲೆಗಳ ರಂಗ ಚಟುವಟಕೆಗಳನ್ನು ಮೈಸೂರಿನಲ್ಲಿ ಒಟ್ಟಿಗೆ ಸೇರಿಸುವ ಒಂದು ಪ್ರಯತ್ನವಿದು, ಕರ್ನಾಟಕದ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯಲ್ಲಿ ಈ ದಶಮಾನೋತ್ಸವ ರಂಗ ಸಂಭ್ರಮ ಮಹತ್ವದ ಸ್ಥಾನ ನಿಭಾಯಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net