ಜಯದೇವ ಆಸ್ಪತ್ರೆಯಲ್ಲಿ 11 ರೋಗಿಗಳ ಸಾವು : ವರದಿ ನೀಡಲು ಸಚಿವ ಶರಣ ಪ್ರಕಾಶ್ ಪಾಟೀಲ್ ಸೂಚನೆ

ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಬುಧವಾರ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಭೇಟಿ ನೀಡಿದರು.
ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಬುಧವಾರ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಭೇಟಿ ನೀಡಿದರು.
Published on
ಮೈಸೂರು: ನಗರದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 11 ರೋಗಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದ ವೈದ್ಯ ಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಸಾವಿನ ಕುರಿತು ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.
ಮೃತಪಟ್ಟ 11 ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎಂದು ಆಸ್ಪತ್ರೆಯ ವೈದ್ಯರು ನೀಡಿದ್ದಾರೆ. ಆದರೆ, 11 ಜನರು ಒಂದೇ ದಿನ ಮೃಪಟ್ಟಿರುವುದು ಗಂಭೀರ ವಿಚಾರವಾಗಿರುವ ಹಿನ್ನೆಲೆಯಲ್ಲಿ ಸಾವಿನ ಕುರಿತು ವರದಿ ನೀಡಲು ಸೂಚಿಸಿದ್ದೇನೆ. ಪ್ರತಿಯೊಂದು ಸಾವು ಯಾವ ಕಾರಣಕ್ಕೆ ಆಯಿತು ಎಂದು ವರದಿ ನೀಡಲು ಸೂಚಿಸಿದ್ದೇನೆ. ಈ ವರದಿಯನ್ನು ಪ್ರತ್ಯೇಕ ವೈದ್ಯರ ತಂಡದ ಮೂಲಕ (ಥರ್ಡ್ ಪಾರ್ಟಿ) ವಿಶ್ಲೇಷಣೆಗೆ ಒಳಪಡಿಸಲಾಗುವುದು ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶದ ಆಸ್ಪತ್ರೆಗಳಲ್ಲಿ ಸಾವಿನ ಪ್ರಮಾಣ ಶೇ.9 ರಿಂದ 11 ರಷ್ಟು ಇದೆ. ಆದರೆ, ಜಯದೇವ ಆಸ್ಪತ್ರೆಯಲ್ಲಿ ಞೇ.4 ರಿಂದ 6 ರಷ್ಟು ಮಾತ್ರ ಇದೆ. ಜಯದೇವ ಆಸ್ಪತ್ರೆ ದೇಶಕ್ಕೆ ಮಾದರಿಯಾದ ಆಸ್ಪತ್ರೆಯಾಗಿದ್ದು, ಗುಣಮಟ್ಟದ ಆರೋಗ್ಯ ಸೇವೆ ದೊರೆಯುತ್ತಿದೆ. ಆದರೆ, ಮಾಧ್ಯಮದ ವರದಿಯಿಂದ ಜನರು ಭಯಭೀತರಾಗುವ ಸಾಧ್ಯತೆ ಇದೆ. ಆಸ್ಪತ್ರೆಯಲ್ಲಿ ಯಾವುದೇ ಸಮಸ್ಯೆಗಳು ಇದ್ದರೆ ನನ್ನ ಗಮನಕ್ಕೆ. ಜಯದೇವ ಆಸ್ಪತ್ರೆಯಲ್ಲಿ ಆಗಿರುವ ಒಳ್ಳೆಯ ಕಾರ್ಯವನ್ನು ಸಹ ಮಾಧ್ಯಮಗಳು ಜನರಿಗೆ ತಿಳಿಸಬೇಕು. ಆ ಮೂಲಕ ಸರ್ಕಾರಿ ಆಸ್ಪತ್ರೆಗಳ ಮೇಲಿನ ಜನರ ವಿಶ್ವಾಶ ಹೆಚ್ಚಿಸಬೇಕಾಗಿದೆ. ಜನರು ಸರ್ಕಾರಿ ಆಸ್ಪತ್ರೆಯ ಮೇಲಿನ ವಿಶ್ವಾಸ ಕಳೆದುಕೊಂಡರೆ ಅದರ ಲಾಭ ಖಾಸಗಿ ಆಸ್ಪತ್ರೆಗಳಿಗೆ ಆಗುತ್ತದೆ. ಜನರು ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಹಣ ಖರ್ಚು ಮಾಡಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಜಯದೇವ ಆಸ್ಪತ್ರೆ ಇರುವ ಕಾರಣಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೇವೆ ದೊರೆಯುತ್ತಿದೆ.
ಬಿಪಿಎಲ್ ಕಾರ್ಡ್‌ದಾರರಿಗೆ ಇಲ್ಲಿ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ. ಆಸ್ಪತ್ರೆಯಲ್ಲಿ ಒಂದೇ ದಿನ 11 ಜನರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಜನರಿಗೆ ಆತಂಕ ಆಗಿರಬಹುದು. ಅದರೆ, ಅಚಾತುರ್ಯ ಅಥವಾ ನಿರ್ಲಕ್ಷೃದಿಂದ ಆಗಿರುವ ಸಾವು ಅಲ್ಲ ಇದು ಎಂದು ಹೇಳಿದರು.
ಬೆಂಗಳೂರು, ಮೈಸೂರು ಹಾಗೂ ಕಲ್ಬುರ್ಗಿ ಜಯದೇವ ಆಸ್ಪತ್ರೆಯನ್ನು ಬೆಂಗಳೂರಿನಿಂದ ನಿಯಂತ್ರಿಸಲಾಗುತ್ತಿದೆ. ಇದನ್ನು ವಿಕೇಂದ್ರಿಕರಣ ಮಾಡಿ ಹಂತ ಹಂತವಾಗಿ ಸ್ವಯತ್ತ ಸ್ಥಾನ ನೀಡಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು ಹಾಗೂ ಕಲ್ಬುರ್ಗಿ ಆಸ್ಪತ್ರೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಲಾಗುವುದು. ಈ ಆಸ್ಪತ್ರೆಗಳಿಗೆ ಪ್ರತ್ಯೇಕ ಅನುದಾನ ಹಾಗೂ ಅದನ್ನು ವೆಚ್ಚ ಮಾಡುವ ಅಧಿಕಾರವನ್ನು ನೀಡಲಾಗುವುದು. ಎಲ್ಲ ನಿರ್ಧಾರವನ್ನು ಬೆಂಗಳೂರಿನಿಂದ ಮಾಡಲು ಸಾಧ್ಯವಿಲ್ಲ. ಇಲ್ಲಿಗೆ ಹೆಚ್ಚುವರಿ ವೈದ್ಯರ ಅವಶ್ಯಕತೆ ಇದ್ದರೆ ಸ್ಥಳೀಯವಾಗಿ ನೇಮಕಾತಿ ಮಾಡುವಂತಹ ವ್ಯವಸ್ಥೆ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು, ಮೈಸೂರು, ಕಲ್ಬುರ್ಗಿ ಜಯದೇವ ಆಸ್ಪತ್ರೆಗೆ ಹೆಚ್ಚುವರಿ ವೈದ್ಯರ ನೇಮಕಾತಿಗೆ ಈಗಾಗಲೇ ಅರ್ಜಿ ಆಹ್ವಾನಿಸಿದ್ದೇವೆ. ಒಳ ಮೀಸಲಾತಿಯ ಕಾರಣಕ್ಕಾಗಿ ನೇಮಕಾತಿ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 2 ತಿಂಗಳ ಒಳಗೆ ಆರೋಗ್ಯ ಇಲಾಖೆಯ ಎಲ್ಲ ನೇಮಕಾತಿ ಪೂರ್ಣಗೊಳಿಸಲಾಗುವುದು ಎಂದರು.
ನಗರದಲ್ಲಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ಗುರುತಿಸಿದ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬಾರದು ಎಂದು ರೈತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ರೈತರೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರು ಕಾಮಗಾರಿ ನಡೆಸಲು ಸಹಮತ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net