ಡಿಸಿಎಫ್ ಪರಮೇಶ್ ಮನೆಯಲ್ಲಿ ಒಂದೂಕಾಲು ಕೆಜಿ ಚಿನ್ನ, 6 ಕೆಜಿ ಬೆಳ್ಳಿ ವಶ

 ಲೋಕಾಯುಕ್ತ ಪೊಲೀಸರು  ದಾಳಿ
ಲೋಕಾಯುಕ್ತ ಪೊಲೀಸರು ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿಎಫ್ ಪರಮೇಶ್ ಮನೆ ಮೇಲೆ ಲೋಕಾಯುಕ್ತ ದಾಳಿ
  • ಆಸ್ತಿ ಸಂಬಂಧ ಕೆಲ ಮಹತ್ವದ ದಾಖಲೆಗಳ ಜಪ್ತಿ
ಮೈಸೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಅರಣ್ಯ ಇಲಾಖೆಯ ಡಿಸಿಎಫ್ ಪರಮೇಶ್ ಅವರ ಕಚೇರಿ, ಮನೆ ಇನ್ನಿತರ ಕಡೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ.
ಅಂದಾಜು ಒಂದೂಕಾಲು ಕೆಜಿ ಚಿನ್ನ ಹಾಗೂ 6 ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಆಸ್ತಿ ಸಂಬಂಧ ಕೆಲ ಮಹತ್ವದ ದಾಖಲೆಗಳು ಸಿಕ್ಕಿದೆ. ಅದನ್ನು ಜಪ್ತಿ ಮಾಡಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ಮೈಸೂರು ಅರಣ್ಯ ವಲಯದ ಉಪಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದು, ಈ ಕುರಿತು ದೂರು ದಾಖಲಾಗಿತ್ತು.
ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಅವರ ನಿರ್ದೇಶನದಂತೆ ಮಂಗಳವಾರ ಬೆಳಗ್ಗೆ 6 ಗಂಟೆ ವೇಳೆ ಏಕಕಾಲದಲ್ಲಿ ದಾಳಿ ನಡೆಸಲಾಯಿತು.
ಪರಮೇಶ್ ಅವರ ಕಾರ್ಯನಿರ್ವಹಿಸುವ ಅಶೋಕಪುರಂನಲ್ಲಿರುವ ಅರಣ್ಯಭವನದ ಕಚೇರಿ, ವಸತಿಗೃಹ, ಹುಣಸೂರು ರಸ್ತೆಯಲ್ಲಿರುವ ಆದಿತ್ಯ ಬಡಾವಣೆಯಲ್ಲಿನ ಮನೆ, ಬೋಗಾದಿ 2ನೇ ಹಂತದಲ್ಲಿರುವ ಸಹೋದರ ಜಗದೀಶ್ ಮನೆ ಹಾಗೂ ಬೆಂಗಳೂರಿನ ಬನಶಂಕರಿಯಲ್ಲಿರುವ ಅತ್ತೆ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯಚರಣೆ ನಡೆಸಿದರು.
ಕಾರ್ಯಚರಣೆಯಲ್ಲಿ ಮೈಸೂರು ಲೋಕಾಯುಕ್ತ ಡಿವೈಎಸ್ಪಿ ಅರಗ ಶೈಲೇಂದ್ರ, ಕೊಡಗು ಲೋಕಾಯುಕ್ತ ಡಿವೈಎಸ್ಪಿ ದಿನಕರ್ ಶೆಟ್ಟಿ, ಇನ್ಸ್‌ಪೆಕ್ಟರ್‌ಗಳಾದ ಗಿರೀಶ್, ಜಯಕುಮಾರ್, ಶಾಂತಿನಾಥ ಹೊನ್ನೂರು, ಬೆಂಗಳೂರು ಲೋಕಾಯುಕ್ತ ಇನ್ಸ್‌ಪೆಕ್ಟರ್ ಆನಂದ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net