ಜಿಲ್ಲೆಯಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಬೇಸಿಗೆಯ ಉಷ್ಣಾಂಶದಲ್ಲಿ ಸಾಕಷ್ಟು ಏರಿಕೆಯಾಗುತ್ತಲೇ ಇದೆ.
ಕೆಂಡದಂತಹ ಬಿಸಿಲು ಮನುಷ್ಯನ ಆರೋಗ್ಯದ ಮೇಲೆ ನೇರ ಪರಿಣಾಮ ಉಂಟು ಮಾಡುತ್ತಿದೆ. ಬೇಸಿಗೆಯಲ್ಲಿ ನಾವು ಸೇವಿಸುವ ಆಹಾರ ಹಾಗೂ ಧರಿಸುವ ಬಟ್ಟೆ ಬಗ್ಗೆ ಹೆಚ್ಚಿನ ಕಾಳಜಿ ಅವಶ್ಯ.
ಬೇಸಿಗೆ ಕಾಲದಲ್ಲಿ ನಿರ್ಜಲೀಕರಣ (ಡಿಹೈಡ್ರೇಷನ್) ಉಂಟಾಗುವುದು ತುಂಬಾ ಸಾಮಾನ್ಯ ಸಂಗತಿಯಾಗಿದೆ. ಇದಕ್ಕಾಗಿಯೇ ತಜ್ಞರು ಹಸಿರು ತರಕಾರಿಗಳು, ನೀರಿನಾಂಶ ಇರುವ ಹಣ್ಣುಗಳನ್ನು ಸೇವಿಸುವಂತೆ ಸೂಚಿಸುತ್ತಾರೆ. ಇದು ದೇಹವು ಹೈಡ್ರೇಷನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ರಕ್ಷಿಸುತ್ತದೆ.
ಬಿಸಿಲಿನಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3ರೊಳಗೆ ಯಾವುದೇ ಓಡಾಟ ನಡೆಸುವುದನ್ನು ತಪ್ಪಿಸಬೇಕು. ಒಳಾಂಗಣದಲ್ಲೇ ಏನೇ ಕೆಲಸ ಕಾರ‌್ಯಗಳಿದ್ದರೂ ಮುಗಿಸಿಕೊಳ್ಳಬೇಕು. ಇಲ್ಲದಿದ್ದರೆ ಹೀಟ್ ಸ್ಟ್ರೋಕ್, ತಲೆನೋವು, ಮೂರ್ಛೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಬೇಸಿಗೆ ಸಮಯದಲ್ಲಿ ಮಕ್ಕಳು, ಬಾಣಂತಿಯರು ಹಾಗೂ ಹಿರಿಯ ನಾಗರಿಕರ ಆರೋಗ್ಯದ ಮೇಲೆ ಎಚ್ಚರಿಕೆ ವಹಿಸಬೇಕು.
ಬೇಸಿಗೆಯಲ್ಲಿ ವಾಂತಿ, ಭೇದಿ, ತಲೆನೋವು ಕಂಡುಬರುತ್ತದೆ. ಹಾಗಾಗಿ ಬಿಸಿ ಆಹಾರ, ಬೇಯಿಸಿದ ತರಕಾರಿಗಳನು ಸೇವನೆ ಮಾಡಬೇಕು. ಜಾತ್ರೆ, ಬೀಗರೂಟಕ್ಕೆ ಹೋದಾಗ ಎಚ್ಚರಿಕೆಯಿಂದ ಇರಬೇಕು. ಹೊರಗಡೆ ಹೋದಾಗ ತಂಪು ಕನ್ನಡಕ, ಕೊಡೆ, ಕಾಟನ್ ಬಟ್ಟೆಗಳನ್ನು ಧರಿಸಬೇಕೆಂಬುದು ವೈದ್ಯರ ಸಲಹೆ.
ಯಾವ ಬಟ್ಟೆ ಧರಿಸಿದರೆ ಉತ್ತಮ:
ಬೇಸಿಗೆ ಕಾಲದಲ್ಲಿ ತೀವ್ರ ಬೆವರುತ್ತೇವೆ. ಇಂತಹ ಸಮಯದಲ್ಲಿ ನಾವು ಧರಿಸುವ ಉಡುಪು ಹೆಚ್ಚು ಸಮಾಧಾನಕರ ಮತ್ತು ಗಾಳಿಯಾಡುವಂತಿರ ಬೇಕು. ಹಗುರವಾದ ಮತ್ತು ಮೆತ್ತನೆಯ ಬಟ್ಟೆಗಳನ್ನು ಧರಿಸಬೇಕು. ಬೇರೆ ರೀತಿಯ ಬಟ್ಟೆಗಳನ್ನು ಧರಿಸಿದರೆ ಹೆಚ್ಚು ಬೆವರುವ ಕಾರಣ ಅದು ನಮಗೆ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಬಾಡಿ ಫಿಟ್ ಉಡುಪುಗಳು ಈ ಕಾಲಕ್ಕೆ ಸರಿ ಹೊಂದುವುದಿಲ್ಲ. ಬೇಸಿಗೆಯ ಸಮಯದಲ್ಲಿ ಗಾಳಿಯು ಸುಲಭವಾಗಿ ಹೋಗುವಂತಹ ಬಟ್ಟೆಗಳು ಸರಿ. ಬೇಸಿಗೆ ಸಮಯದಲ್ಲಿ ನಮ್ಮ ಅಂಗಡಿಗೆ ಹೆಚ್ಚು ಗ್ರಾಹಕರು ಬರುತ್ತಾರೆ. ತೆಳುವಾದ ಬಟ್ಟೆಯನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಟೈಟ್ ಪ್ಯಾಂಟ್‌ಗಳನ್ನು ಇಷ್ಟಪಡದೆ ದೊಗಳೆ ಪ್ಯಾಂಟ್‌ಗಳನ್ನು ಹೆಚ್ಚು ಖರೀದಿಸುತ್ತಿದ್ದಾರೆ. ಇದರೊಂದಿಗೆ ಶಾಟ್ಸ್‌ಗೂ ಹೆಚ್ಚಿನ ಡಿಮ್ಯಾಂಡ್ ಇದೆ ಎನ್ನುತ್ತಾರೆ ಶಿವರಾಂ ಪೇಟೆ ವ್ಯಾಪಾರಿ ಪ್ರಸಾದ್.
ಏನೆಲ್ಲ ಆಹಾರ ಸೇವಿಸಬಹುದು?:
ನಿತ್ಯ ಕನಿಷ್ಠ 3-4 ಲೀಟರ್ ನೀರು ಸೇವಿಸಬೇಕು. ಮಜ್ಜಿಗೆ, ನಿಂಬೆ ವಿವಿಧ ಹಣ್ಣಿನ ಜ್ಯೂಸ್ ಸೇವಿಸಬೇಕು. ಕಲ್ಲಂಗಡಿ ಹಣ್ಣು, ಸೌತೆಕಾಯಿಗಳಲ್ಲಿ ಹೆಚ್ಚು ತಿನ್ನಬೇಕು. ದೇಹದ ಉಷ್ಣಾಂಶ ಹೆಚ್ಚಿಸುವ ಜಂಕ್‌ುಡ್‌ಗಳಿಂದ ದೂರವಿರಬೇಕು. ಹುರಿದ, ಮಸಾಲೆ ಪದಾರ್ಥಗಳ ಸೇವನೆ ತ್ಯಜಿಸಬೇಕು. ಟೀ, ಕಾಫಿ ಸೇವನೆ ಕಡಿಮೆ ಮಾಡಿದರೆ ಒಳಿತು. ಆದಷ್ಟು ಹೆಚ್ಚು ಬಾರಿ ತಣ್ಣೀರು ಸ್ನಾನ ಮಾಡಬೇಕು.
ಧರಿಸುವ ಉಡುಪು ಹೇಗಿರಬೇಕು?:
ಕುತ್ತಿಗೆ ಭಾಗ ಸಂಪೂರ್ಣ ಮುಚ್ಚಲಾದ ಮತ್ತು ತುಂಬುತೋಳಿನ ಬಟ್ಟೆಗಳನ್ನು ಧರಿಸಬೇಕು. ಸಡಿಲವಾದ, ಹತ್ತಿಯಿಂದ ಸಿದ್ಧವಾದ ಉಡುಪುಗಳನ್ನು ತೊಡಬೇಕು. ಗಾಢ ಬಣ್ಣದ ಬಟ್ಟೆಗಳ ಬದಲು ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ರಾತ್ರಿ ಮಲಗುವಾಗ ತೆಳಗ್ಗಿನ ಬಟ್ಟೆ ಧರಿಸುವುದರಿಂದ ಉತ್ತಮ ನಿದ್ರೆ ಬರುತ್ತದೆ.
ರೈತರು ಏನು ಮಾಡಬೇಕು:
ರೈತರು ಬೆಳಗ್ಗೆ, ಸಂಜೆ ವೇಳೆ ಮಾತ್ರ ಜಮೀನು ಕೆಲಸ ಮಾಡಬೇಕು. ಬೆಳಗ್ಗೆ 11ರಿಂದ ಮ.3.30ರವರೆಗೆ ವಿಶ್ರಾಂತಿ ಪಡೆದರೆ ಉತ್ತಮ. ಬಿಸಿಲಿನ ತಾಪದಿಂದಾಗುವ ಹಾನಿ ತಪ್ಪಿಸಲು ರಾಸುಗಳು ಸೇರಿದಂತೆ ಸಾಕು ಪ್ರಾಣಿಗಳಿಗೆ ಮಧ್ಯಾಹ್ನದ ವೇಳೆ ಕೆರೆ, ಹೊಂಡ ಅಥವಾ ಹಳ್ಳಗಳಲ್ಲಿ ಈಜಲು ಬಿಡಬೇಕು ಅಥವಾ ದಿನಕ್ಕೆ 2-3 ಬಾರಿ ಮೈಮೇಲೆ ನೀರು ಹಾಕಬೇಕು. ಕೊಟ್ಟಿಗೆಯ ವಾತಾವರಣ ತಂಪಾಗಿರುವಂತೆ ನೋಡಿಕೊಳ್ಳಬೇಕು.
ಮಳೆಯೊಂದೇ ಪರಿಹಾರ:
ವರ್ಷದಿಂದ ಸರಿಯಾದ ಪ್ರಮಾಣದಲ್ಲಿ ಮಳೆ ಬೀಳದಿರುವುದು ಉಷ್ಣಾಂಶ ಏರಿಕೆಗೆ ಪ್ರಮುಖ ಕಾರಣವಾಗಿದೆ. ಸಮಯಕ್ಕ ತಕ್ಕಂತೆ ಹಿಂಗಾರು ಮಳೆಯಾಗಿದ್ದರೆ ಇಷ್ಟು ಪ್ರಮಾಣದಲ್ಲಿ ಉಷ್ಣಾಂಶ ಹೆಚ್ಚುತ್ತಿರಲಿಲ್ಲ. ಈ ವಾರ ಮಳೆಯಾದರೆ ಉಷ್ಣಾಂಶ ಕಡಿಮೆಯಾಗಲಿದೆ.
"
ಬಿಸಿಲಿನ ಸಮಯದಲ್ಲಿ ದೇಹ ನಿರ್ಜಲೀಕರಣ ಆಗಲು ಬಿಡಬಾರದು. ಹಾಗಾಗಿ ಹೆಚ್ಚು ನೀರು ಸೇವಿಸಬೇಕು. ದೇಹದಲ್ಲಿ ಸೋಡಿಯಂ, ಪೊಟ್ಯಾಸಿಯಂ, ಮೆಗ್ನಿಸಿಯಂ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅದಕ್ಕೆ ನೀರಿನೊಂದಿಗೆ ಮಜ್ಜಿಗೆ, ಎಳನೀರು, ರಾಗಿ ಅಂಬಲಿ ಹಾಗೂ ನಿಂಬೆಹಣ್ಣಿನ ಜ್ಯೂಸ್ ಸೇವಿಸಬೇಕು.