ದಸರಾ ಆಹಾರ ಮೇಳ: ಮಳಿಗೆ ಆಯ್ಕೆಗೆ ಲಾಟರಿ ನಿಯಮ ಕೈಬಿಡಲಿ

ದಸರಾ ಆಹಾರ ಮೇಳ
ದಸರಾ ಆಹಾರ ಮೇಳ
Published on

ಪ್ರಮುಖ ಮುಖ್ಯಾಂಶಗಳು

  • ದಸರಾ ಆಹಾರ ಮೇಳ ತಿಂಡಿ ತಿನಿಸುಗಳ ಮಾರಾಟಗಾರರ ಸಂಘದ ಅಧ್ಯಕ್ಷ ಎಸ್.ನಾಗರಾಜು ಮನವಿ
  • ಹಳೇ ಪದ್ಧತಿಯನ್ನೇ ಅನುಸರಿಸಿ
ಮೈಸೂರು: ಪ್ರಸಕ್ತ ದಸರಾ ಆಹಾರ ಮೇಳದ ಮಳಿಗೆ ಆಯ್ಕೆಯಲ್ಲಿ ಲಾಟರಿ ಪದ್ಧತಿ ಕೈಬಿಡಬೇಕು. ಹಳೇ ಪದ್ಧತಿಯನ್ನೇ  ಅನುಸರಿಸಬೇಕು ಎಂದು ದಸರಾ ಆಹಾರ ಮೇಳ ತಿಂಡಿ ತಿನಿಸುಗಳ ಮಾರಾಟಗಾರರ ಸಂಘದ ಅಧ್ಯಕ್ಷ ಎಸ್. ನಾಗರಾಜು ಆಗ್ರಹಿಸಿದರು.
ಲಾಟರಿ ಮೂಲಕ ಆಹಾರ ಮಳಿಗೆ ನೀಡುವುದಾಗಿ ಜಿಲ್ಲಾಡಳಿತ ಪಟ್ಟು ಹಿಡಿದಿರುವುದು ಸರಿಯಲ್ಲ. ಏಕೆಂದರೆ ಈಗಾಗಲೇ ಸುಮಾರು 700 ಅರ್ಜಿಗಳು ಬಂದಿವೆ. ಒಬ್ಬೊಬ್ಬರೇ 10 ರಿಂದ 15 ಅರ್ಜಿ ಹಾಕಿದ್ದು, ಇವರಿಗೆ ತಲಾ 3- 4 ಮಳಿಗೆ ಸಿಕ್ಕಿದಲ್ಲಿ ಇವರು ಇತರರಿಗೆ ಮಾರಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಕಳೆದ ಬಾರಿಯಂತೆ ಮಳಿಗೆ ನೀಡುವ ಪದ್ಧತಿ ಅನುಸರಿಸಲಿ ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕೆಲವು ದಿನಗಳ ಹಿಂದೆ ಇದೇ ರೀತಿ ಮನವಿ ಮಾಡಿಕೊಂಡಿದ್ದರೂ ಜಿಲ್ಲಾಡಳಿತ ಸ್ಪಂದಿಸದಿರುವುದು ಬೇಸರದ ಸಂಗತಿ. ಲಾಟರಿ ಪದ್ಧತಿಯಿಂದಾಗಿ ದಸರಾ ಆಹಾರ ಮೇಳವನ್ನೇ ನಂಬಿಕೊಂಡಿರುವವರಿಗೆ ಹೊಡೆತ ಬೀಳುತ್ತದೆ.
 ಹೀಗಾಗಿ ಕಾರ್ಯಾಧ್ಯಕ್ಷರೇ ಮಂಜೂರು ಮಾಡುವ ಹಿಂದಿನ ಪದ್ಥತಿ ಮುಂದುವರಿಯಲಿ. ಜತೆಗೆ ಶುಲ್ಕ ಸಹ ಹಿಂದಿನ ವರ್ಷದಷ್ಟೇ ಇರಲಿ. ಈ ಬಾರಿ ಶುಲ್ಕ ಹೆಚ್ಚಳ ಚಿಂತನೆಯಿಂದ ಹಿಂದೆ ಸರಿಯಬೇಕು ಎಂದೂ ಆಗ್ರಹಿಸಿದರು.
ಕಳೆದ 10- 15 ವರ್ಷಗಳಿಂದ ದಸರಾ ಆಹಾರ ಮೇಳದಲ್ಲಿ ಮಳಿಗೆ ಹಾಕುತ್ತಿರುವವರಿಗೆ ಪ್ರಾಧಾನ್ಯತೆ ನೀಡಲಿ, ಪಂಚತಾರಾ ಹೋಟೆಲ್, ದೊಡ್ಡ ಉದ್ಯಮಿಗಳಿಗೆ ಅವಕಾಶ ನೀಡಿದಲ್ಲಿ ಮತ್ತು ಬಾಡಿಗೆ ದರ ಹೆಚ್ಚು ಮಾಡಿ ಜನಸಾಮಾನ್ಯರಿಗೆ ಹೊರೆಯಾಗುತ್ತದೆ ಎಂದು ಹೇಳಿದರು.
 ಪದಾಧಿಕಾರಿಗಳಾದ ಶಾಂತಮ್ಮ, ಸಂತೋಷ್, ಶಿವಸಿದ್ದು, ಶಿವಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net