ಬಾಯಲ್ಲಿ ನೀರೂರಿಸುವ ಬಗೆ ಬಗೆ ಖಾದ್ಯಗಳು

ಮಹಾರಾಜ ಕಾಲೇಜು ಮೈದಾನದಲ್ಲಿ 15 ದಿನ ‘ದಸರಾ' ಆಹಾರ ಮೇಳ
mysore dasara festival
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಯೋಜಿಸಿರುವ ಆಹಾರ ಮೇಳದಲ್ಲಿ ಗ್ರಾಹಕರಿ ವಿವಿಧ ತಿನಿಸುಗಳನ್ನು ಸೇವಿಸುತ್ತಿರುವುದು. dasara food
Published on: 

ಎ.ಆರ್. ರಘುರಾಮ ಮೈಸೂರು

ಆಹಾರ ಎಂದರೆ ಅದು ಕೇವಲ ಹೊಟ್ಟೆ ತುಂಬಿಸುವ ಪದಾರ್ಥವಲ್ಲ. ನಾಡಿನ ಸಂಸ್ಕೃತಿ ಪರಂಪರೆ ಸಂಪ್ರದಾಯ ಮತ್ತು ವಿಭಿನ್ನ ಶೈಲಿಗಳನ್ನು ಬಹು ವಿಧವಾಗಿ ಪರಿಚಯಿಸಿ, ಹದವಾಗಿ ಸಮ್ಮಿಶ್ರಗೊಳಿಸಿ ಆ ಮೂಲದಿಂದ ತಯಾರಿಸಿದ ಖಾದ್ಯದ ಸೊಬಗು. ಇವುಗಳನ್ನು ಸವಿಯುವುದೇ ಒಂದು ವಿಶೇಷ ಅನುಭೂತಿ. ಈ ರುಚಿ ವೈವಿಧ್ಯಕ್ಕೆ ಭವ್ಯ ವೇದಿಕೆಯಾಗಿದೆ ಮೈಸೂರು ದಸರಾ ಆಹಾರ ಮೇಳ.

ನಗರದ ಹೃದಯಭಾಗದಲ್ಲಿರುವ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ‘ದಸರಾ ಆಹಾರಮೇಳ’ ನಾಡಿನ ಉದ್ದಗಲದ ಸವಿ ರುಚಿಗಳನ್ನು ಪರಿಚಯಿಸಲು ಮುಂದಾಗಿದೆ. ಮಾತ್ರವಲ್ಲ ದೇಶ ವಿದೇಶಗಳ ತಿನಿಸುಗಳನ್ನೂ ಜನರಿಗೆ ಒಂದೇ ವೇದಿಕೆಯಲ್ಲಿ ಉಣ ಬಡಿಸುವ ತಾಣವಾಗಿದೆ. ದಸರಾ ನೋಡಲು ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಪ್ರವಾಸಿಗರ ನಾಲಿಗೆ ಚಪ್ಪರಿಸುವಂತೆ ಮಾಡುವ ನಿಟ್ಟಿನಲ್ಲಿ ಆಹಾರಮೇಳ ವಿಶೇಷ ಆಕರ್ಷಣೆ ಆಗಲಿದೆ.

ಉತ್ತರ ಧೃವದಿಂ ....:

ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಗುರೆಳ್ಳು ಚಟ್ನಿ, ಶೇಂಗಾ ಹಿಂಡಿ, ಕೆನೆ ಮೊಸರು ಒಂದು ಬಗೆಯಾದರೆ ಮೇಲುಕೋಟೆ ಪರಂಪರೆ ಪುಳಿಯೋಗರೆ, ಸಕ್ಕರೆ ಪೊಂಗಲ್, ಮೊಸರನ್ನ, ಹುಬ್ಬಳ್ಳಿಯ ಗಿರ್ಮಿಟ್ ಮತ್ತು ಮಿರ್ಚಿ ಬಾಯಲ್ಲಿ ನೀರೂರಿಸುತ್ತಿವೆ. ಮಲೆನಾಡಿನ ಚಿಬ್ಬಲು ಇಡ್ಲಿ, ದಾವಣಗೆರೆಯ ಬೆಣ್ಣೆ ದೋಸೆ, ಮೈಸೂರಿನ ಬಿಸಿಬಿಸಿ ಹೋಳಿಗೆ, ಬೆಂಗಳೂರು ಪಲಾವ್- ಹೀಗೆ ಸಾಲು ಸಾಲು ಮಳಿಗೆಗಳು ತಿಂಡಿ ಪೋತರಿಗೆ ಬಹು ಬಗೆಯನ್ನು ಉಣಿಸುತ್ತಿರುವುದು ವಿಶೇಷವಾಗಿದೆ.

ರಡಿ ಟು ಈಟ್:

ಯುವಜನರನ್ನು ಆಕರ್ಷಣೆ ಮಾಡಲೆಂದೆ ತೆರೆದಿರುವ ಹಲವು ಮಳಿಗೆಗಳಲ್ಲಿ ಮಶ್ರೂಮ್ ಮಸಾಲಾ, ಟಿಕ್ಕಾ, ಚೈನೀ ನೂಡಲ್ಸ್, ಬರ್ಗರ್, ಸ್ಯಾಂಡ್‌ವಿಚ್ ಬಗೆಗಳು ಆರ್ಡರ್ ಮಾಡಿದ ಕೆಲವೇ ನಿಮಿಷಗಳಲ್ಲಿ ರಡಿ ಟು ಈಟ್.

* ದೋಸೆಗಳ ವೈವಿಧ್ಯ ... ಸವಿಯಲು ಮುಗಿಬಿದ್ದ ಜನ

ದೋಸೆಗಳಲ್ಲಿಯೇ ಹಲವು ವೈವಿಧ್ಯಗಳು ಆಕರ್ಷಣೆಯಾಗಿವೆ. ನಾಟಿ ಬೆಣ್ಣೆ ಮಸಾಲೆ, ದಾವಣಗೆರೆ ಬೆಣ್ಣೆ ದೋಸೆ, ಮೈಸೂರು ದೋಸೆ, ಮುಳಬಾಗಿಲು ಸ್ಪೆಷಲ್ ದೋಸೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಇಷ್ಟು ಮಾತ್ರವಲ್ಲ, ಕರಾವಳಿ ಭಾಗದ ಪಾಕ ಸಂಸ್ಕೃತಿಯನ್ನೂ ಆಹಾರ ಮೇಳ ಪರಿಚಯಿಸುತ್ತಿದೆ. ಮಂಗಳೂರು ಬನ್ಸ್, ನೀರು ದೋಸೆ, ಪಡ್ಡು, ಗೋಲಿ ಬಜೆ ಮಳಿಗೆಗಳು ಸ್ಪರ್ಧಾತ್ಮಕ ದರದಲ್ಲಿ ಜನರನ್ನು ತಮ್ಮತ್ತ ಬರಮಾಡಿಕೊಳ್ಳುತ್ತಿವೆ.

ಸಿದ್ಧ ತಿನಿಸುಗಳು:

ಧಾರವಾಡ ಪೇಡಾ, ಬೆಳಗಾವಿಯ ಕುಂದಾ, ಗೋಕಾಕದ ಕರೆದಂಟು, ವೈವಿಧ್ಯಮಯ ಮಂಡಕ್ಕಿ ಪುರಿ ತಿನಿಸುಗಳು, ಮೆಣಸಿನ ಕಾಯಿ ಬೋಂಡಾ, ಬಣ್ಣ ಬಣ್ಣದ ಹಪ್ಪಳ ತಿನಿಸು ಪ್ರಿಯರಿಗೆ ಮುದ ನೀಡುತ್ತಿದೆ.

ನಾನ್‌ವೆಜ್ ಸ್ಟಾಲ್‌ಗಳ ಸಾಲು ......

ಮೈದಾನದ ಎಡ ಭಾಗದಲ್ಲಿ ಮಾಂಸಾಹಾರ ಪ್ರಿಯರಿಗೆ ಮಹಾದ್ವಾರವೇ ತೆರೆದಿದೆ. ಮಶ್ರೂಮ್ ದೊನ್ನೆ ಬಿರಿಯಾನಿ, ಬುಡಕಟ್ಟು ಸಂಶೋಧನಾ ಸಂಸ್ಥೆ ಪ್ರಕೃತಿ ಆದಿವಾಸಿ ಸಮುದಾಯದ ಮಳಿಗೆಯಲ್ಲಿ ಬಂಬು ಬಿರಿಯಾನಿ, ಹೊಸಕೋಟೆ ಬಿರಿಯಾನಿ, ನಮ್ಮನೆ ಬಾಡೂಟ, ದಿಂಡಗಲ್ ಬಿರಿಯಾನಿ ಸ್ಟಾಲ್‌ಗಳು ಕಟ್ಟಿಗೆ ಒಲೆಯಲ್ಲೇ ಬಿರಿಯಾನಿ ಮಾಡಿಕೊಡುವ ಆಕರ್ಷಣೆ ತೋರಿ ಗ್ರಾಹಕರನ್ನು ಸೆಳೆಯುತ್ತಿವೆ. ಗ್ರಾಮೀಣ ಶೈಲಿಯಲ್ಲೇ ಮಳಿಗೆಗಳನ್ನು ಅಲಂಕರಿಸಿ, ಬಾಳೆಲೆ ಹಾಸಿ ನಾನ್‌ವೆಜ್ ಪ್ರಿಯರಿಗೆ ರಸದೌತಣ ನೀಡುತ್ತಿವೆ.

ಮೈದಾನದ ನಡು ಭಾಗದಲ್ಲಿ ಹಾಕಿರುವ ಬೃಹತ್ ಪೆಂಡಾಲಿನಲ್ಲಿ ಕುಟುಂಬ ಸಮೇತ ಕುಳಿತು ಊಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರ ಆಸು ಪಾಸಿನಲ್ಲೇ ಹತ್ತು ಹಲವು ಬಗೆಯ ಐಸ್ ಕ್ರೀಂಗಳು ಮತ್ತು ತಂಪು ಪಾನೀಯಗಳ ಮಳಿಗೆಗೆ ಯುವಜನರೇ ಹೆಚ್ಚಾಗಿ ಮುಗಿ ಬಿದ್ದಿರುವುದು ವಿಶೇಷವಾಗಿದೆ.

ರಂಜಿಸಲಿದೆ ಸಾಂಸ್ಕೃತಿಕ ಕಾರ್ಯಕ್ರಮ:

ಆಹಾರ ಮೇಳದ ಇನ್ನೊಂದು ಆಕರ್ಷಣೆ ಎಂದರೆ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು. ಜನರು ತಮಗೆ ಇಷ್ಟವಾದ ಆಹಾರವನ್ನು ಸವಿಯುತ್ತಾ, ಹಾಡು, ನೃತ್ಯಗಳನ್ನು ವೀಕ್ಷಿಸಲು ವಿಶೇಷ ವೇದಿಕೆ ಸಿದ್ಧಗೊಂಡಿದೆ. ಇದೇ ಕಾರ್ಯಕ್ರಮವನ್ನು ನಡುಭಾಗದ ಬೃಹತ್ ಕುಟೀರದ ಒಳಗೂ ಕುಳಿತು ಆಹಾರ ಸವಿಯುತ್ತಾ ಎಲ್‌ಇಡಿ ಪರದೆ ಮೇಲೆ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಚಿಣ್ಣರ ಮನೋರಂಜನೆಗಾಗಿ ಪುಟಾಣಿ ರೈಲು ವ್ಯವಸ್ಥೆಯನ್ನೂ ಮಾಡಲಾಗಿದೆ. ಒಟ್ಟಾರೆ ಆಹಾರ ಮೇಳವು ನ. 11 ರಿಂದ 25 ರವರೆಗೆ ಬಹು ಬಗೆಯ ಪದಾರ್ಥಗಳನ್ನು ದಸರಾ ವೀಕ್ಷಕರಿಗೆ ಪರಿಚಯಿಸುವುದರೊಂದಿಗೆ ಹತ್ತಾರು ಊರಿನ ಉದ್ಯಮಿಗಳು, ಮಹಿಳಾ ಸ್ವಸಹಾಯ ಸಂಘಗಳ ವಹಿವಾಟಿಗೆ ವೇದಿಕೆ ಕಲ್ಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net