ಪ್ರತಾಪ್ ಸಿಂಹ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ

ಟೌನ್‌ಹಾಲ್ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ
prathibhatane
ದಲಿತ ಸಂಘರ್ಷ ಸಮಿತಿ ವತಿಯಿಂದ ಬುಧವಾರ ಟೌನ್‌ಹಾಲ್ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಯಿತು.
Published on

ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.

ಟೌನ್‌ಹಾಲ್ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಜಮಾವಣೆಗೊಂಡ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸಂಸದ ಪ್ರತಾಪ್ ಸಿಂಹ ತಿ.ನರಸೀಪುರದಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಗಣೇಶೋತ್ಸವದ ಸಂದರ್ಭದಲ್ಲಿ ಮಸೀದಿ ಎದುರು ಪ್ರಚೋದನಕಾರಿ ಭಾಷಣ ಮಾಡಿದ್ದು, ಪೊಲೀಸ್ ಅಧಿಕಾರಿಯೊಬ್ಬರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದಲ್ಲದೆ, ಸಮಾನತೆಯ ಸಂಕೇತವಾದ ನೀಲಿ ಶಾಲಿನ ಬಗ್ಗೆಯೂ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಸಂಬಂಧ ತಿ.ನರಸೀಪುರ ಪೊಲೀಸರು ಸಿಸಿ ಟಿವಿ, ಡ್ರೋನ್ ದೃಶ್ಯಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊಗಳನ್ನು ಆಧರಿಸಿ ಸೆ.18ರಂದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಪದೇಪದೆ ಕೋಮು ದ್ವೇಷಕ್ಕೆ ಕಾರಣವಾಗುವ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಕರಣಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ರಾಜ್ಯದ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಾಪ್ ಸಿಂಹ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಕಾನೂನುಬದ್ಧವಾಗಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಸಂಘಟನಾ ಸಂಚಾಲಕರಾದ ಕೆ.ವಿ.ದೇವೇಂದ್ರ, ಕಿರಂಗೂರು ಸ್ವಾಮಿ, ಯಡದೊರೆ ಮಹಾದೇವಯ್ಯ, ಹಾರೋಹಳ್ಳಿ ನಟರಾಜ್, ಖಜಾಂಚಿ ಶಿವಮೂರ್ತಿ ಶಂಕರಪುರ ಸೇರಿದಂತೆ ಪದಾಧಿಕಾರಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net