30ರೊಳಗೆ ಬೇಡಿಕೆ ಈಡೇರಿಸದಿದ್ದರೆ ಚಳವಳಿ:ದಿನಗೂಲಿ ಹೊರಗುತ್ತಿಗೆ ನೌಕರರ ಸಂಘ ನಿರ್ಧಾರ
ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅರಣ್ಯ ಇಲಾಖೆ ವನ್ಯಜೀವಿ ಘಟಕಗಳ ದಿನಗೂಲಿ ಹೊರಗುತ್ತಿಗೆ ನೌಕರರ ಸಂಘದಿಂದ ನಗರದಲ್ಲಿ ಮುಖಂಡರ ಸಭೆ ಆಯೋಜಿಸಲಾಗಿತ್ತು. ಎ.ಎಂ.ನಾಗರಾಜು, ಹರೀಶ್, ವೀರೇಶ್ ದಾಂಡೇಲಿ, ಅಣ್ಣಯ್ಯ ಸ್ವಾಮಿ, ಕೃಷ್ಣರಾಜು, ರಾಜೇಶ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಾಸಿಕ ವೇತನ ಜಾರಿಗೊಳಿಸಬೇಕು. ಹತ್ತು ವರ್ಷ ಸೇವೆ ಪೂರ್ಣಗೊಳಿಸಿರುವ ನೌಕರರಿಗೆ ದಿನಗೂಲಿ ಕ್ಷೇಮಾಭಿವೃದ್ಧಿ ಸೌಲಭ್ಯ ಜಾರಿಗೊಳಿಸಬೇಕು
ನೌಕರರ ಇಪಿಎಫ್ ಹಾಗೂ ಇಎಸ್‌ಐ ಹಣ ಬಿಡುಗಡೆಗೊಳಿಸಬೇಕು
ಮೈಸೂರು:ಅವೈಜ್ಞಾನಿಕ ಹೊರಗುತ್ತಿಗೆ ನಿಯೋಜನೆ ಕೈ ಬಿಟ್ಟು ಮಾಸಿಕ ವೇತನ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಏ.30ರ ಒಳಗೆ ಈಡೇರಿಸದಿದ್ದರೆ ಕೆಲಸ ಸ್ಥಗಿತ ಚಳವಳಿ ಆರಂಭಿಸಲು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿ ಘಟಕಗಳ ದಿನಗೂಲಿ ಹೊರಗುತ್ತಿಗೆ ನೌಕರರ ಸಂಘ ನಿರ್ಧರಿಸಿದೆ.
ಸಂಘದ ಅಧ್ಯಕ್ಷ ಎ.ಎಂ.ನಾಗರಾಜು ಅಧ್ಯಕ್ಷತೆಯಲ್ಲಿ ನಗರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಮಾಸಿಕ ವೇತನ ಜಾರಿಗೊಳಿಸಬೇಕು. ಹತ್ತು ವರ್ಷ ಸೇವೆ ಪೂರ್ಣಗೊಳಿಸಿರುವ ನೌಕರರಿಗೆ ದಿನಗೂಲಿ ಕ್ಷೇಮಾಭಿವೃದ್ಧಿ ಸೌಲಭ್ಯ ಜಾರಿಗೊಳಿಸಬೇಕು, ಕರ್ತವ್ಯದ ವೇಳೆ ನಿಧನರಾದ ನೌಕರ ಗೋಪಾಲ ಸೇರಿದಂತೆ ಇತರರು ಸಾವಿನ ಕುರಿತು ತನಿಖೆಯಾಗಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಯಿತು.
ನೌಕರರ ಇಪಿಎಫ್ ಹಾಗೂ ಇಎಸ್‌ಐ ಹಣ ಬಿಡುಗಡೆಗೊಳಿಸಬೇಕು, ಪರಿಹಾರ ಭತ್ಯೆ ಬಿಡುಗಡೆ ಮಾಡಬೇಕು, ಟೆಂಡರ್‌ದಾರರಿಂದ ಆಗಿರುವ ವಂಚನೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ 13 ವೃತ್ತಗಳಲ್ಲಿ 3 ಸಾವಿರಕ್ಕಿಂತಲೂ ಹೆಚ್ಚಿನ ಜನ 1996ರಿಂದಲೂ ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆನೆ ಕಾರ್ಯಾಚರಣೆ, ಬೆಂಕಿ ನಂದಿಸುವ ಕಾರ್ಯ ಸೇರಿ ಹಲವು ಸವಾಲಿನ ಕೆಲಸ ಮಾಡುತ್ತಿದ್ದಾರೆ. 8 ತಾಸೂ ಕೂಲಿ ಪಡೆದು 24 ತಾಸು ದುಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು.
ಈ ಕಾರ್ಯದೊತ್ತಡದಿಂದ ಅನೇಕರು ಬ್ರೈನ್ ಸ್ಟ್ರೋಕ್, ಪಾರ್ಶ್ವವಾಯು ಪೀಡಿತರಾಗಿದ್ದಾರೆ. ಆರೋಗ್ಯ ಭತ್ಯೆಯೂ ದೊರೆಯುತ್ತಿಲ್ಲ. ಆದ್ದರಿಂದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಿದ್ದೇವೆ. ಕಳೆದ ನವೆಂಬರ್‌ನಲ್ಲಿ ಹೋರಾಟ ಮಾಡಿದ್ದೇವೆ. ಇಲಾಖೆಯ ಸಚಿವರು ನಮ್ಮ ಬೇಡಿಕೆ ಈಡೇರಿಸುವಂತೆ ಸೂಚಿಸಿ ಸಭೆ ನಡೆಸಿದ್ದಾರೆ. ಆದರೂ ಇಲಾಖೆ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ ಎಂದು ದೂರಿದರು.
ನಮ್ಮ ಬೇಡಿಕೆಗಳನ್ನು ಕೇವಲ ಹಾಳೆಗಳಲ್ಲಿ ಮುದ್ರಿಸಿಟ್ಟುಕೊಂಡು ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಹಾಗಾಗಿ ಕೂಡಲೇ ವೇತನ ಚೀಟಿ ಕೊಡಬೇಕು, ಆಹಾರ ಭತ್ಯೆ ಹಣ ನೇರವಾಗಿ ಖಾತೆಗೆ ಹೋಗಬೇಕು, ಆರೋಗ್ಯ ಸೇವೆ ನೀಡಬೇಕು. ಕರ್ನಾಟಕ ಸೇವಾ ಅಧಿನಿಯಮದಡಿ ನಮ್ಮನ್ನು ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.
ಬೇಡಿಕೆ ಈಡೇರಿಸದಿದ್ದರೆ ಏ.1ರಿಂದಲೇ ಬಂಡೀಪುರದಲ್ಲಿ ರಾಜ್ಯದ ಎಲ್ಲ ಹೊರ ಗುತ್ತಿಗೆ ನೌಕರರು ಅನಿರ್ದಿಷ್ಟಾವಧಿ ಹೋರಾಟ ಮಾಡಲು ಮುಖಂಡರು ತೀರ್ಮಾನಿಸಿದರು.
ರಾಜ್ಯ ಉಪಾಧ್ಯಕ್ಷ ಹರೀಶ್ ಮಾತನಾಡಿ, ಈಗಾಗಲೇ ಬಂಡಿಪುರದಲ್ಲಿ ಜಮಾವಣೆಗೊಂಡು ಅನಿರ್ದಿಷ್ಟಾವಧಿ ಹೋರಾಟ ನಿರ್ಧರಿಸಿದ್ದೇವೆ. ಈಗ ನೀಡುತ್ತಿರುವ 690 ರೂ. ಸಂಬಳ ಸಾಲುತ್ತಿಲ್ಲ. ಅನೇಕರು ಹುಲಿ, ಆನೆ ದಾಳಿಗೆ ತುತ್ತಾಗಿದ್ದು ಅವರ ಕುಟುಂಬಕ್ಕೆ ಪರಿಹಾರ ಸಹ ಸಿಕ್ಕಿಲ್ಲ ಎಂದು ದೂರಿದರು.
ಕೊಡಗು ವೃತ್ತ 220, ಮೈಸೂರು ವೃತ್ತದ 280 ಮತ್ತು ಚಾಮರಾಜನಗರದ 650 ಸೇರಿ ರಾಜ್ಯದ ವಿವಿಧೆಡೆಯಿಂದ ಧರಣಿಯಲ್ಲಿ ಭಾಗವಹಿಸುವರು. ನಮ್ಮ ಗೈರಿನಿಂದ ಕೇರಳ ಗಡಿ ಸೇರಿ ಮೊದಲಾದ ಕಡೆಗಳಲ್ಲಿ ಅಕ್ರಮ ಗಂಧದ ಮರ ಕಳವು ಸೇರಿ ಅನೇಕ ಅಕ್ರಮ ನಡೆಯುವ ಸಾಧ್ಯತೆ ಇದೆ. ಜತೆಗೆ ಆನೆ, ಹುಲಿ ಹಾಗೂ ಚಿರತೆಗಳು ಸೇರಿ ಅನೇಕ ಕಾಡು ಪ್ರಾಣಿಗಳು ನಾಡಿಗೆ ಆಗಮಿಸಿ ತೊಂದರೆ ಹಾಗೂ ಪ್ರಾಣ ಹಾನಿಯಾದರೂ ಅದಕ್ಕೆ ಸರ್ಕಾರ ಹಾಗೂ ಅಧಿಕಾರಿಗಳೇ ಹೊಣೆ ಆಗಲಿದ್ದಾರೆ ಎಂದು ಎಚ್ಚರಿಸಿದರು.