ದೈಹಿಕ ಆರೋಗ್ಯಕ್ಕೆ ಸೈಕ್ಲಿಂಗ್ ಉತ್ತಮ ಹವ್ಯಾಸ: ಎಸಿಪಿ ಚಂದ್ರಶೇಖರ್ ಸಲಹೆ

ವಿಶ್ವ ಬೈಸಿಕಲ್ ದಿನದ ಅಂಗವಾಗಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಸೈಕಲ್ ರ‌್ಯಾಲಿಗೆ ಬಿ.ಮಂಜುನಾಥ್ ಚಾಲನೆ ನೀಡಿದರು. ರಮೇಶ್ ನರಸಯ್ಯ, ಅನಿಲ್ ಇತರರು ಇದ್ದರು.
ವಿಶ್ವ ಬೈಸಿಕಲ್ ದಿನದ ಅಂಗವಾಗಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಸೈಕಲ್ ರ‌್ಯಾಲಿಗೆ ಬಿ.ಮಂಜುನಾಥ್ ಚಾಲನೆ ನೀಡಿದರು. ರಮೇಶ್ ನರಸಯ್ಯ, ಅನಿಲ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುವ ಜನತೆ ಸೇರಿದಂತೆ ಸಾರ್ವಜನಿಕರು ತಮ್ಮ ದೈನಂದಿನ ಜೀವನದಲ್ಲಿ ಸೈಕ್ಲಿಂಗ್ ಹವ್ಯಾಸ ಅಳವಡಿಸಿಕೊಳ್ಳುವ ಅಗತ್ಯವಿದೆ
  • ಇಂದಿನ ಒತ್ತಡದ ಕಾಲದಲ್ಲಿ ವ್ಯಾಯಾಮ ಮಾಡಲು ಸಮಯವೇ ಸಿಗುವುದಿಲ್ಲ. ಆದ್ದರಿಂದ ಸೈಕ್ಲಿಂಗ್ ಅನ್ನು ಅಳವಡಿಸಿಕೊಂಡರೆ ಅನುಕೂಲ
ಮೈಸೂರು:ದೈಹಿಕ ಆರೋಗ್ಯ, ಶಿಸ್ತು ಹಾಗೂ ಪರಿಸರ ಸ್ನೇಹಿ ಜೀವನಕ್ಕೆ ಶೈಲಿಗೆ ಸೈಕ್ಲಿಂಗ್ ಹವ್ಯಾಸ ಅಳವಡಿಸಿಕೊಳ್ಳಬೇಕು ಎಂದು ಮೈಸೂರು ಅರಮನೆ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಚಂದ್ರಶೇಖರ್ ಹೇಳಿದರು.
ವಿಶ್ವ ಬೈಸಿಕಲ್ ದಿನದ ಅಂಗವಾಗಿ ಯುವ ಹಾಸ್ಸಲ್ ಮೈ ಭಾರತ್ ಮೈಸೂರು, ಮೈಸೂರು ಅಥ್ಲೀಟ್ಸ್ ಕ್ಲಬ್, ರಾಯಲ್ ರೈಡರ್ಸ್ ಮೈಸೂರು, ಸೈಕ್ಲೋಪೀಡಿಯಾ ಮೈಸೂರು ಹಾಗೂ ಮೈಸೂರು ಸೈಕ್ಲಿಂಗ್ ತಂಡಗಳ ಸಹಯೋಗದಲ್ಲಿ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಆಯೋಜಿಸಿದ್ದ ಸೈಕಲ್ ರ‌್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಯುವ ಜನತೆ ಸೇರಿದಂತೆ ಸಾರ್ವಜನಿಕರು ತಮ್ಮ ದೈನಂದಿನ ಜೀವನದಲ್ಲಿ ಸೈಕ್ಲಿಂಗ್ ಹವ್ಯಾಸ ಅಳವಡಿಸಿಕೊಳ್ಳುವ ಅಗತ್ಯವಿದೆ. ದೇಹಕ್ಕೆ ವ್ಯಾಯಾಮ ಬೇಕು. ಇಂದಿನ ಒತ್ತಡದ ಕಾಲದಲ್ಲಿ ವ್ಯಾಯಾಮ ಮಾಡಲು ಸಮಯವೇ ಸಿಗುವುದಿಲ್ಲ. ಆದ್ದರಿಂದ ಸೈಕ್ಲಿಂಗ್ ಅನ್ನು ಅಳವಡಿಸಿಕೊಂಡರೆ ಅನುಕೂಲ ಎಂದು ಹೇಳಿದರು.
ಮೈ ಭಾರತ್ ಮೈಸೂರು ಜಿಲ್ಲಾ ಯುವ ಅಧಿಕಾರಿ ಪಿ.ಅಖಿಲ್ ಮಾತನಾಡಿ, ವಿಶ್ವ ಬೈಸಿಕಲ್ ದಿನದ ಮಹತ್ವ, ಆರೋಗ್ಯಕರ ಮತ್ತು ಪರಿಸರ ಸ್ನೇಹಿ ಜೀವನ ಶೈಲಿಯನ್ನು ಬೆಳೆಸುವಲ್ಲಿ ಸೈಕ್ಲಿಂಗ್‌ನ ಪಾತ್ರ ವಿವರಿಸಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಬಿ.ಮಂಜುನಾಥ್ ಸೈಕಲ್ ರ‌್ಯಾಲಿಗೆ ಚಾಲನೆ ನೀಡಿದರು. ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ರಮೇಶ್ ನರಸಯ್ಯ, ಬಾಲ್ಯ ಫೌಂಡೇಷನ್ ಅಧ್ಯಕ್ಷ ಅನಿಲ್ ಇತರರು ಇದ್ದರು.
ರ‌್ಯಾಲಿಯು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾಗಿ ಹಾರ್ಡಿಂಜ್ ಸರ್ಕಲ್ (ಆರ್‌ಗೇಟ್), ಗನ್‌ಹೌಸ್ ಸರ್ಕಲ್, ಬಸವೇಶ್ವರ ಸರ್ಕಲ್, ರಾಮಸ್ವಾಮಿ ಸರ್ಕಲ್, ಅಗ್ನಿಶಾಮಕ ದಳ ವೃತ್ತ (ಸರಸ್ವತಿಪುರಂ), ಕುಕ್ಕರಹಳ್ಳಿ ಗದ್ದಿಗೆ ರಸ್ತೆ, ಸರ್ಕಾರಿ ಯುವ ವಸತಿನಿಲಯದ ಮೂಲಕ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿತು. ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net