ನಗರದ ಮಹದೇಶ್ವರ ಲೇಔಟ್ ಮುಂಭಾಗದಲ್ಲಿ ಸೋಮವಾರ ಮುಂಜಾನೆಯಿಂದಲೇ ಜಮಾಯಿಸಿರುವ ಗ್ರಾಹಕರು, ಸಂಜೆ 5 ಗಂಟೆ ತನಕ ಕಾದು ಕುಳಿತರೂ ಸಿಲಿಂಡರ್ ಸಿಗಲಿಲ್ಲ. ಇದರಿಂದ ರೊಚ್ಚಿಗೆದ್ದ ಗ್ರಾಹಕರು ಆಕ್ರೋಶ ಹೊರಹಾಕಿದ್ದಾರೆ. ಕಳೆದ 15 ದಿನಗಳ ಹಿಂದೆಯೇ ಗ್ಯಾಸ್ ಬುಕಿಂಗ್ ಮಾಡಿದ್ದೇವೆ. ಬೆಳಗ್ಗೆ ಬನ್ನಿ, ಸಂಜೆ ಬನ್ನಿ ಎಂದು ಅಲೆದಾಡಿಸುತ್ತಿದ್ದಾರೆ. ನಮ್ಮಲ್ಲಿ ಅದೆಷ್ಟೋ ಜನರಿಗೆ ಗ್ಯಾಸ್ ಬುಕ್ಕಿಂಗ್ ಮಾಡದೆ ಇದ್ದರೂ, ಬುಕ್ಕಿಂಗ್ ಆಗಿದೆ, ಡೆಲಿವರಿ ಮಾಡಲಾಗಿದೆ ಎಂದು ಮೊಬೈಲ್‌ಗೆ ಮೆಸೇಜ್ ಬಂದಿದೆ. ಇದರಿಂದ ನಮಗೆ ಬರುವ ಸಿಲಿಂಡರ್ ಅನ್ನು ಬೇರೆಡೆ ಮಾರಾಟ ಮಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಕೂಡಲೇ ಗ್ರಾಹಕರಿಗೆ ಸಿಲಿಂಡರ್ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಶ್ರೀ ಚೌಡೇಶ್ವರಿ ಇಂಡಿಯನ್ ಗ್ಯಾಸ್ ಏಜೆನ್ಸಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.