ಮಹಾರಾಜ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಾಹಿತ್ಯ ವಿಮರ್ಶೆಯ ಕೌಶಲಗಳು’ ಕುರಿತ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಒ.ಎಲ್.ನಾಗಭೂಷಣಸ್ವಾಮಿ, ಪ್ರೊ.ವಿ.ಷಣ್ಮುಗಂ, ಪ್ರೊ.ಡಿ.ವಿಜಯಲಕ್ಷ್ಮೀ, ಪ್ರೊ.ಷಹಸೀನಾ ಬೇಗಂ, ಡಾ.ಎಸ್.ಕೃಷ್ಣಪ್ಪ ಇದ್ದರು.
ಮೈಸೂರು: ವಿಮರ್ಶೆ ಎನ್ನುವುದು ಎಲ್ಲರಿಗೂ ಉಸಿರಾಟಷ್ಟೇ ಅನಿವಾರ್ಯ ಎಂದು ವಿಮರ್ಶಕ ಪ್ರೊ.ಒ.ಎಲ್.ನಾಗಭೂಷಣಸ್ವಾಮಿ ಹೇಳಿದರು.
ಮಹಾರಾಜ ಕಾಲೇಜಿನ ಕನ್ನಡ ವಿಭಾಗದಿಂದ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಾಹಿತ್ಯ ವಿಮರ್ಶೆಯ ಕೌಶಲ್ಯಗಳು’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಎಲ್ಲರೂ ವಿಮರ್ಶಕರಾಗಿದ್ದಾರೆ. ವಿಮರ್ಶಕರಲ್ಲದ ಮನುಷ್ಯ ಯಾರೂ ಇಲ್ಲ. ಸಾಧಕ, ಬಾಧಕ, ಮೌಲ್ಯಮಾಪನ ಮಾಡುವುದು, ಸರಿ, ತುಪ್ಪು ತಿಳಿಸುವುದು ಸೇರಿ ಹೋಲಿಕೆ ಮಾಡುವುದೂ ವಿಮರ್ಶೆ. ಹೋಲಿಕೆ ಮಾಡದೆ ಯಾವುದನ್ನೂ ಮೌಲ್ಯಮಾಪನ ಮಾಡಲು ಹಾಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.
ಬದುಕಿನಲ್ಲೂ ವಿಮರ್ಶೆ ಮುಖ್ಯ. ಎಲ್ಲರ ಬದುಕಿನಲ್ಲಿ ವಿಮರ್ಶೆ ಸಾಮರ್ಥ್ಯ ಬೆಳೆಸುವ ದೃಷ್ಟಿಯಿಂದ ಅಭ್ಯಾಸ ಮಾಡಿಸುವುದಾಕ್ಕಾಗಿಯೇ ಪಠ್ಯದಲ್ಲಿ ವಿಮರ್ಶೆ ವಿಷಯವನ್ನು ಇಡಲಾಗಿದೆ. ಜೀವನದಲ್ಲಿ ಯಾವುದು ಅಸ್ಪಷ್ಟವೋ ಅದು ಸಾಹಿತ್ಯದಲ್ಲಿ ಸ್ಪಷ್ಟ. ಹಾಗಾಗಿ ವಿಮರ್ಶೆ ಕಲಿತರೆ ಜೀವನದಲ್ಲೂ ಸ್ಪಷ್ಟತೆ ಸಿಗುತ್ತದೆ ಎಂದರು.
ಸಾಹಿತ್ಯ ಆಗಲು ಸಾಹಿತ್ಯ ರಚಿಸುವ ಕರ್ತೃ, ಬರವಣಿಗೆ ಸಾಕ್ಷಿಯಾಗಿ ಕೃತಿ, ಓದುಗ ಹಾಗೂ ಸಮಾಜ ಇರಬೇಕು. ಈ ನಾಲ್ಕರಲ್ಲಿ ಒಂದೇ ಒಂದು ಇಲ್ಲದೆ ಇದ್ದರೂ ಸಾಹಿತ್ಯ ಇರುವುದಿಲ್ಲ. ಕೃತಿಕಾರ, ಕೃತಿಯ ಭಾಷೆ, ಕೃತಿಯ ವಿಷಯ ಮಂಡನೆ, ಕೃತಿ ಒಳಗಿ ಅಂಶ ಹೀಗೆ ಎಲ್ಲವನ್ನೂ ವಿಮರ್ಶೆಗೆ ಒಳಪಡಿಸಬಹುದು ಎಂದರು.
ಪ್ರಾಂಶುಪಾಲ ಪ್ರೊ.ವಿ.ಷಣ್ಮುಗಂ ಮಾತನಾಡಿ, ಸಾಹಿತ್ಯ ವಿದ್ಯಾರ್ಥಿಗಳಿಗೆ ವಿಮರ್ಶೆಯ ಕೌಶಲ್ಯ ಮಖ್ಯ. ಸಾಹಿತ್ಯ ವಿಮರ್ಶೆಯ ಕೌಶಲ ಅಭಿವೃದ್ಧಿಪಡಿಸಿಕೊಂಡರೆ ಮುಂದೆ ಏನೂ ಬೇಕಾದರೂ ಬರೆಯಬಹುದು. ಏನೂ ಬೇಕಾದರೂ ವಿಮರ್ಶೆ ಮಾಡಬಹುದು. ವಿಮರ್ಶೆಯ ಸ್ಕಿಲ್ ಅಭಿವೃದ್ಧಿಪಡಿಸಿಕೊಳ್ಳಬೇಕು. ಅದಕ್ಕೆ ಇಂತಹ ಕಾರ್ಯಾಗಾರಗಳು ಸಹಾಯ ಮಾಡುತ್ತವೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಡಿ.ವಿಜಯಲಕ್ಷ್ಮೀ, ಸಂಚಾಲಕರಾದ ಪ್ರೊ.ಷಹಸೀನಾ ಬೇಗಂ, ಡಾ.ಎಸ್.ಕೃಷ್ಣಪ್ಪ ಇದ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಪ್ರೊ.ಒ.ಎಲ್.ನಾಗಭೂಷಣಸ್ವಾಮಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.